ಕೇಂದ್ರ, ರಾಜ್ಯಕ್ಕೆ ಜಿಎಸ್​ಟಿ ಅಧಿಕಾರ: ಮಂಡಳಿ ಶಿಫಾರಸು ಸಂಬಂಧ ಸುಪ್ರೀಂ ಮಹತ್ವದ ತೀರ್ಪು

Supreme
Published on

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಕುರಿತ ಶಾಸನಾಧಿಕಾರ ಕೇಂದ್ರ ಮತ್ತು ರಾಜ್ಯಗಳಿಗೆ ಸಂಬಂಧಿಸಿದ್ದು. ಜಿಎಸ್​ಟಿ ಕೌನ್ಸಿಲ್​ನ ಶಿಾರಸನ್ನು ನೇರವಾಗಿ ಜಾರಿಗೊಳಿಸಬೇಕು ಎಂದೇನೂ ಇಲ್ಲ ಎಂದು ಸುಪ್ರೀಂ ಕೋರ್ಟ್​ ಗುರುವಾರ ಹೇಳಿದೆ.

ಆಮದುದಾರರ ಸಾಗರ ಸರಕುಗಳ ಮೇಲೆ ಇಂಟೆಗ್ರೇಟೆಡ್​ ಗೂಡ್ಸ್​ ಆ್ಯಂಡ್​ ಸರ್ವೀಸಸ್​ ಟ್ಯಾಕ್ಸ್​ (ಐಜಿಎಸ್​ಟಿ) ವಿಧಿಸುತ್ತಿರುವ ವಿಚಾರವಾಗಿ ಕೇಂದ್ರ ಸರ್ಕಾರ ಹೊರಡಿಸಿದ್ದ ಐಜಿಎಸ್​ಟಿ ಅಧಿಸೂಚನೆಯನ್ನು ಗುಜರಾತ್​ ಹೈಕೋರ್ಟ್​ ರದ್ದುಗೊಳಿಸಿತ್ತು. ಇದು ೆಡರಲ್​ ವ್ಯವಸ್ಥೆಗೆ ಪೂರಕವಾಗಿಲ್ಲ. ಕೇಂದ್ರ ಮತ್ತು ರಾಜ್ಯಗಳು ಪರಸ್ಪರ ಮಾತುಕತೆ ನಡೆಸಿ ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳಬೇಕು ಎಂದು ಅದು ಹೇಳಿತ್ತು. ಈ ಆದೇಶವನ್ನು ಸುಪ್ರೀಂ ಕೋರ್ಟ್​ ಗುರುವಾರ ಎತ್ತಿ ಹಿಡಿದಿದೆ.

ನ್ಯಾಯಮೂರ್ತಿ  ಡಿ.ವೈ. ಚಂದ್ರಚೂಡ ನೇತೃತ್ವದ ನ್ಯಾಯಪೀಠ ಇದರ ವಿಚಾರಣೆ ನಡೆಸಿದ್ದು, ಈ ವಿಚಾರ ತೆರಿಗೆಗೆ ಸಂಬಂಧಿಸಿದ್ದು. ಕೇಂದ್ರ ಮತ್ತು ರಾಜ್ಯಗಳು ತೆರಿಗೆ ವಿಧಿಸುವುದಕ್ಕೆ ಸಂಬಂಧಿಸಿದ ಶಾಸನಾಧಿಕಾರವನ್ನು ಹೊಂದಿವೆ. ಜಿಎಸ್​ಟಿ ಕೌನ್ಸಿಲ್​ ಸೌಹಾರ್ದಯುತವಾಗಿ ಇಂತಹ ವಿಚಾರಗಳಲ್ಲಿ ಕಾರ್ಯಾನುಷ್ಠಾನ ಮಾಡಬಹುದಾದ ಪರಿಹಾರವನ್ನೇ ಕಂಡುಕೊಳ್ಳಬೇಕು ಎಂದು ನ್ಯಾಯಪೀಠ ಹೇಳಿತು. ನ್ಯಾಯಮೂತಿರ್ಗಳಾದ ಸೂರ್ಯಕಾಂತ, ವಿಕ್ರಂ ನಾಥ್​ ಈ ಪೀಠದಲ್ಲಿದ್ದ ಇತರ ಸದಸ್ಯರು.

ಸಂವಿಧಾನದ ಅನುಚ್ಛೇದ 246 ಎ ಪ್ರಕಾರ, ಸಂಸತ್ತು ಮತ್ತು ರಾಜ್ಯ ಶಾಸನ ಸಭೆಗಳಿಗೆ ತೆರಿಗೆ ಸಂಬಂಧಿತ ವಿಷಯಗಳಲ್ಲಿ ಸಮಾನ ಅಧಿಕಾರವಿದೆ. ಅನುಚ್ಛೇದ 246ಎ ಕೇಂದ್ರ ಮತ್ತು ರಾಜ್ಯಗಳನ್ನು ಸಮಾನವಾಗಿ ಕಾಣುತ್ತದೆ. ಇದೇ ರೀತಿ, ಸಂವಿಧಾನದ ಅನುಚ್ಛೇದ 279ರ ಪ್ರಕಾರ ಕೇಂದ್ರ ಹಾಗೂ ರಾಜ್ಯಗಳು ಪರಸ್ಪರರ ಕುರಿತು ಸ್ವತಂತ್ರವಾಗಿ ನಡೆದುಕೊಳ್ಳುವಂತೆ ಇಲ್ಲ ಎಂಬುದನ್ನೂ ಸರ್ಕಾರಗಳು ಗಮನಿಸಬೇಕು ಎಂದು ನ್ಯಾಯಪೀಠ ಹೇಳಿದೆ.

ಹೈಕೋರ್ಟ್​ ತೀರ್ಪು ಏನಿತ್ತು?

ಭಾರತದ ಭೌಗೋಳಿಕ ವ್ಯಾಪ್ತಿಯಿಂದ ಹೊರಗಿನ ಪ್ರದೇಶದಿಂದ ಕಸ್ಟಮ್ಸ್​ ನಿಲ್ದಾಣದವರೆಗೆ ಹಡಗಿನ ಮೂಲಕ ಸರಕುಗಳನ್ನು ಸಾಗಿಸುವ ಮೂಲಕ, ತೆರಿಗೆಗೆ ಒಳಪಡದ ಪ್ರದೇಶದಲ್ಲಿ ಇರುವ ವ್ಯಕ್ತಿ ಒದಗಿಸುವ ಸೇವೆಗಳಿಗೆ ಸಾಗರ ಸರಕು ಸಾಗಣೆ ಎಂದು ಐಜಿಎಸ್​ಟಿ ವಿಧಿಸಲಾಗದು. ಜಿಎಸ್​ಟಿ ಕಾಯ್ದೆ 2017ರ ಪ್ರಕಾರ ಅದಕ್ಕೆ ಅವಕಾಶವಿಲ್ಲ ಎಂದು ಗುಜರಾತ್​ ಹೈಕೋರ್ಟ್​ ತೀರ್ಪು ಹೇಳಿತ್ತು. ಅಲ್ಲದೆ, 2017ರ ಕೇಂದ್ರ ಅಧಿಸೂಚನೆಯನ್ನು ಅದು ರದ್ದುಗೊಳಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net