

Congress: ಚೀನಾ, ಭಾರತೀಯ ಭೂಮಿಯನ್ನು ವಶಪಡಿಸಿಕೊಂಡಿದೆ ಎಂಬ ರಾಹುಲ್ ಗಾಂಧಿ ಹೇಳಿಕೆ ವಿರುದ್ಧ ಸೋಮವಾರ(ಆಗಸ್ಟ್ 4) ಸುಪ್ರೀಂಕೋರ್ಟ್ ಕಟು ಟೀಕೆ ಮಾಡಿ ಪ್ರಕರಣಕ್ಕೆ ತಡೆ ನೀಡಿದ ಬಳಿಕ ಕಾಂಗ್ರೆಸ್ ಪ್ರತಿಕ್ರಿಯಿಸಿದ್ದು, 2020 ಜೂನ್ 15ರಂದು ಗಾಲ್ವನ್ನಲ್ಲಿ ಹುತಾತ್ಮರಾದ 20 ಸೈನಿಕರ ಬಲಿದಾನಕ್ಕೆ ಪ್ರತಿಯೊಬ್ಬ ಭಾರತೀಯ ದೇಶಭಕ್ತ ಉತ್ತರ ಹುಡುಕುತ್ತಿದ್ದಾನೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.
2020 ಗಾಲ್ವನ್ನಲ್ಲಿ ಭಾರತ-ಚೀನಾ ನಡುವೆ ನಡೆದ ಸಂಘರ್ಷದಲ್ಲಿ ಏನಾಗಿದೆ ಎಂಬ ಬಗ್ಗೆ ಮೋದಿ ಸರ್ಕಾರ ಕಳೆದ 5 ವರ್ಷಗಳಿಂದ ಉತ್ತರ ನೀಡದೇ ಗಮನವನ್ನು ಬೇರೆಡೆ ಸೆಳೆಯುವ, ಸಮರ್ಥಿಸುವ ನೀತಿಯಿಂದ ಸತ್ಯವನ್ನು ಮರೆಮಾಚುವ ಕೆಲಸ ಮಾಡ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
1962ರ ನಂತರ ಭಾರತ ಎದುರಿಸಿದ ಅತಿದೊಡ್ಡ ಪ್ರಾದೇಶಿಕ ಹಿನ್ನಡೆ ಇದು. ಇದಕ್ಕೆ ಮೋದಿ ಸರ್ಕಾರವೇ ಕಾರಣ. ತನ್ನ ಹೇಡಿತನ ಮತ್ತು ತಪ್ಪಾದ ಆರ್ಥಿಕ ಆದ್ಯತೆಗಳಿಂದಾಗಿ ಪ್ರತಿಕೂಲವಾಗಿ ಚೀನಾದೊಂದಿಗಿನ ವಿಷಯವನ್ನು ಸಾಮಾನ್ಯೀಕರಣಗೊಳಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಕುರಿತು ಎಕ್ಸ್ನಲ್ಲಿ ಜೈರಾಮ್ ರಮೇಶ್ ಹಲವು ಪ್ರಶ್ನೆ ಕೇಳಿದ್ದಾರೆ.
ನಮ್ಮ ಸೈನಿಕರು ಗಲ್ವಾನ್‌ನಲ್ಲಿ ದೇಶಕ್ಕಾಗಿ ವೀರೋಚಿತವಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಕೇವಲ ನಾಲ್ಕು ದಿನಗಳ ನಂತರ, ಜೂನ್ 19, 2020 ರಂದು "ನಾ ಕೋಯಿ ಹಮಾರಿ ಸೀಮಾ ಮೇ ಘುಸ್ ಆಯಾ ಹೈ, ನ ಹೈ ಕೋಯಿ ಘುಸಾ ಹುವಾ ಹೈ" ಎಂದು ಚೀನಾಕ್ಕೆ ಪ್ರಧಾನಿ ಕ್ಲೀನ್ ಚಿಟ್ ನೀಡಿದ್ದು ಏಕೆ?.
ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು "ನಾವು ಏಪ್ರಿಲ್ 2020 ರ ಯಥಾಸ್ಥಿತಿಗೆ ಮರಳಲು ಬಯಸುತ್ತೇವೆ" ಎಂದು ಹೇಳಿದ್ದಾರೆ. 21 ಅಕ್ಟೋಬರ್ 2024 ರ ವಾಪಸಾತಿ ಒಪ್ಪಂದವು ನಮ್ಮನ್ನು ಯಥಾಸ್ಥಿತಿಗೆ ಕರೆದೊಯ್ಯುತ್ತದೆಯೇ?.
ಡೆಪ್ಸಾಂಗ್, ಡೆಮ್‌ಚೋಕ್ ಮತ್ತು ಚುಮಾರ್‌ನಲ್ಲಿರುವ ತಮ್ಮ ಗಸ್ತು ಕೇಂದ್ರಗಳನ್ನು ಪ್ರವೇಶಿಸಲು ಭಾರತೀಯ ಗಸ್ತು ಪಡೆಯು ಚೀನಾದ ಒಪ್ಪಿಗೆಯನ್ನು ಪಡೆಯುವ ಅಗತ್ಯವಿಲ್ಲವೇ, ಹಾಗೆಯೇ ಭಾರತೀಯ ಗಸ್ತು ಪಡೆಯು ಗಾಲ್ವಾನ್, ಹಾಟ್ ಸ್ಪ್ರಿಂಗ್ ಮತ್ತು ಪ್ಯಾಂಗೊಂಗ್ ತ್ಸೊದಲ್ಲಿನ ತಮ್ಮ ಗಸ್ತು ಕೇಂದ್ರಗಳನ್ನು ಪ್ರವೇಶಿಸುವುದನ್ನು "ಬಫರ್ ವಲಯಗಳು" ತಡೆಯುವುದಿಲ್ಲವೇ?.
ಡೆಪ್ಸಾಂಗ್‌ನಲ್ಲಿ 900 ಚದರ ಕಿಮೀ ಸೇರಿದಂತೆ ಪೂರ್ವ ಲಡಾಖ್‌ನ 1,000 ಚದರ ಕಿಮೀ ಚೀನಾದ ನಿಯಂತ್ರಣಕ್ಕೆ ಬಂದಿದೆ ಎಂದು 2020 ರಲ್ಲಿ ವ್ಯಾಪಕವಾಗಿ ವರದಿಯಾಗಿಲ್ಲವೇ?
ವಾರ್ಷಿಕ ಪೊಲೀಸ್ ಮಹಾನಿರ್ದೇಶಕರ ಸಭೆಯಲ್ಲಿ, ಪೂರ್ವ ಲಡಾಖ್‌ನಲ್ಲಿರುವ 65 ಗಸ್ತು ಕೇಂದ್ರಗಳಲ್ಲಿ 26 ಕೇಂದ್ರಗಳಿಗೆ ಭಾರತ ಪ್ರವೇಶ ಕಳೆದುಕೊಂಡಿದೆ ಎಂಬ ಮಾಹಿತಿ ಹೊಂದಿರುವ ವರದಿಯನ್ನು ಲೇಹ್‌ನ ಎಸ್‌ಪಿ ಮಂಡಿಸಿಲ್ಲವೇ?
ಚೀನಾದಿಂದ ಆಮದುಗಳು, ವಿಶೇಷವಾಗಿ ಎಲೆಕ್ಟ್ರಾನಿಕ್ಸ್, ವಿದ್ಯುತ್ ಬ್ಯಾಟರಿಗಳು ಮತ್ತು ಸೌರ ಕೋಶಗಳು ಉತ್ಕರ್ಷಗೊಳ್ಳುತ್ತಿವೆ ಮತ್ತು ದೂರಸಂಪರ್ಕ, ಔಷಧಗಳು ಮತ್ತು ಎಲೆಕ್ಟ್ರಾನಿಕ್ಸ್‌ನಂತಹ ಪ್ರಮುಖ ವಲಯಗಳು ಚೀನಾದ ಆಮದಿನ ಮೇಲೆ ನಿರ್ಣಾಯಕವಾಗಿ ಅವಲಂಬಿತವಾಗಿವೆ ಎಂಬುದು ನಿಜವಲ್ಲವೇ? 2024-25ರಲ್ಲಿ ಚೀನಾದೊಂದಿಗಿನ ವ್ಯಾಪಾರದ ದಾಖಲೆ $99.2 ಬಿಲಿಯನ್ ತಲುಪಿದೆ ಎಂಬುದು ನಿಜವಲ್ಲವೇ?
ಆಪರೇಷನ್ ಸಿಂಧೂರ್ ಸಮಯದಲ್ಲಿ ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿದ ದೇಶದೊಂದಿಗೆ ಮೋದಿ ಸರ್ಕಾರವು "ಸಾಮಾನ್ಯೀಕರಣ"ವನ್ನು ಅನುಸರಿಸುತ್ತಿದೆ ಎಂಬುದು ನಿಜವಲ್ಲವೇ?
ಸುಪ್ರೀಂಕೋರ್ಟ್ ಹೇಳಿದ್ದೇನು?
ಭಾರತ ಜೋಡೋ ಯಾತ್ರೆ ಸಮಯದಲ್ಲಿ ಚೀನಾ ಭಾರತದ ಭೂಮಿಯನ್ನು ವಶಪಡಿಸಿಕೊಂಡಿದೆ ಎಂದು ಹೇಳಿಕೆ ನೀಡಿದ್ದರು. ಈ ಸಂಬಂಧ BRO ಮಾಜಿ ನಿರ್ದೇಶಕ ಉದಯ್ ಶಂಕರ್ ಶ್ರೀವಾಸ್ತವ ಅವರು ಲಖನೌ ನ್ಯಾಯಾಲಯದಲ್ಲಿ ಮಾನನಷ್ಟ ಕೇಸ್ ದಾಖಲಿಸಿದ್ದರು. ಈ ಕೇಸ್ ರದ್ದು ಪಡಿಸುವಂತೆ ರಾಹುಲ್ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ರಾಹುಲ್ ಗಾಂಧಿಯ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ನ ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಆಗಸ್ಟೀನ್ ಜಾರ್ಜ್ ಮಸಿಹ್ ನೇತೃತ್ವದ ದ್ವಿಸದಸ್ಯ ಪೀಠವು ಪ್ರಕರಣಕ್ಕೆ ತಡೆ ನೀಡಿ ಟೀಕೆ ಮಾಡಿತು.
ಚೀನಾವು ಭಾರತೀಯ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ ಎಂಬ ಆರೋಪದ ಹೇಳಿಕೆಗಳನ್ನು ನೀಡುವುದನ್ನು ಬಲವಾಗಿ ವಿರೋಧಿಸಿತು. ನೀವು ನಿಜವಾದ ಭಾರತೀಯರಾಗಿದ್ದರೆ ಅಂತಹ ಹೇಳಿಕೆಗಳನ್ನು ನೀಡುತ್ತಿರಲಿಲ್ಲ. ನೀವು ವಿರೋಧ ಪಕ್ಷದ ನಾಯಕರಿದ್ದೀರಿ, ಸಂಸತ್ನಲ್ಲಿ ಮಾತನಾಡಬೇಕಿತ್ತು, ಸೋಷಿಯಲ್ ಮೀಡಿಯಾದಲ್ಲಿ ಯಾಕೆ ಪ್ರಶ್ನೆ ಮಾಡಿದ್ರಿ ಎಂದು ಕೇಳಿತು. (ಏಜೆನ್ಸೀಸ್)