

ಹಾಥರಸ್: ಉತ್ತರ ಪ್ರದೇಶದ ಹಾಥರಸ್ನ ಸಾಮೂಹಿಕ ಅತ್ಯಾಚಾರ ಪ್ರಕರಣ ಕುರಿತಂತೆ ಸಿಬಿಐ ನಡೆಸುತ್ತಿರುವ ತನಿಖೆ ಮೇಲೆ ಮೇಲ್ವಿಚಾರಣೆ ಮಾಡುವಂತೆ ಸುಪ್ರೀಂಕೋರ್ಟ್ಗೆ ಯೋಗಿ ಆದಿತ್ಯನಾಥ ಸರ್ಕಾರ ಮನವಿ ಮಾಡಿದೆ. ಜತೆಗೆ ಸಂತ್ರಸ್ತೆಯ ಕುಟುಂಬಸ್ಥರು ಹಾಗೂ ಪ್ರಕರಣದ ಸಾಕ್ಷಿಗಳಿಗೆ ಸಂಪೂರ್ಣ ಭದ್ರತೆ ಒದಗಿಸಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದೆ. ಸಂತ್ರಸ್ತೆ ಕುಟುಂಬಕ್ಕೆ 3 ಹಂತದ ಭದ್ರತೆ ನೀಡಲಾಗಿದೆ. ಮನೆಯ ಹೊರಗೆ 8 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಅವರಿಗೆ ಯಾವುದೇ ಅಪಾಯ ಇಲ್ಲ ಎಂದು ಅಫಿಡವಿಟ್ನಲ್ಲಿ ತಿಳಿಸಿದೆ. ಸಂತ್ರಸ್ತೆಯ ಶವವನ್ನು ರಾತ್ರೊರಾತ್ರಿ ಅಂತ್ಯಸಂಸ್ಕಾರ ನಡೆಸಿದ್ದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಅಲಹಾಬಾದ್
ಹೈಕೋರ್ಟ್ನ ಲಖನೌ ಪೀಠ ರಾಜ್ಯ ಪೊಲೀಸರನ್ನು ತರಾಟೆಗೆ ತೆಗೆದು ಕೊಂಡಿದೆ. ಜತೆಗೆ ಇಂತಹ ಪ್ರಕರಣಗಳಲ್ಲಿ ಅಂತ್ಯಕ್ರಿಯೆ ನಡೆಸಲು ಸೂಕ್ತ ವಿಧಾನಗಳನ್ನು ರಚಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಪ್ರಕರಣದ ಸೂಕ್ಷ್ಮತೆಯನ್ನು ಗಮನಿಸಿ ಈ ಬಗ್ಗೆ ಸಾರ್ವಜನಿಕವಾಗಿ ಯಾವುದೇ ಹೇಳಿಕೆಗಳನ್ನು ನೀಡದಂತೆ ಅಧಿಕಾರಿಗಳು, ರಾಜಕೀಯ ಪಕ್ಷಗಳು ಮತ್ತು ಇತರ ನಾಯಕರಿಗೆ ಸೂಚಿಸಿದೆ.
ಪಿಎಫ್ಐ ಸದಸ್ಯರ ವಿಚಾರಣೆ: ಹಾಥರಸ್ ಪ್ರಕರಣದ ನೆಪದಲ್ಲಿ ಜಾತಿ ಕಲಹವೆಬ್ಬಿಸಲು ವಿದೇಶದಿಂದ ಭಾರಿ ಹಣ ಹರಿದುಬಂದಿದೆ ಎಂಬ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಜಾರಿ ನಿರ್ದೇಶನಾಲಯ (ಇಡಿ), ಬಂಧಿತರಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್ಐ) ನಾಲ್ವರು ಸದಸ್ಯರ ವಿಚಾರಣೆಗೆ ಅವಕಾಶ ನೀಡುವಂತೆ ಮಥುರಾದ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ.