

ಬೆಂಗಳೂರು: ( Supreme Court Cancels Darshan Bail ) ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ ಎನ್ನುವ ಹಿನ್ನೆಲೆಯಲ್ಲಿ ನಟ ದರ್ಶನ್ ಸೇರಿದಂತೆ 7 ಮಂದಿ ಸೇರಿ ಚಿತ್ರದುರ್ಗದ ನಿವಾಸಿಯಾಗಿರುವ ರೇಣುಕಸ್ವಾಮಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ಈ ಪ್ರಕರಣದ ಹಿನ್ನೆಲೆ ಜಾಮೀನಿನ ಮೇಲೆ ಹೊರಗೆ ಇದ್ದ ಈ ಗ್ಯಾಂಗ್ನ ಜಾಮೀನನ್ನು ರದ್ದುಗೊಳಿಸಿ ಇಂದು ಸುಪ್ರಿಂಕೋರ್ಟ್ ಆದೇಶ ಹೊರಡಿಸಿದೆ. ಈ ಆದೇಶ ಹೊರ ಬರುತ್ತಿದದ್ದಂತೆ ಎ 1 ಆರೋಪಿ ಪವಿತ್ರಾ ಗೌಡ ಈಗಾಲೇ ಪೊಲೀಸರ ಮುಂದೆ ಹಾಜರಾಗಿದ್ದಾರೆ. ಎ2 ಆರೋಪಿ ದರ್ಶನ್ ಸಂಜೆ ಪೊಲೀಸರ ಮುಂದೆ ಹಾಜರಾಗಲಿದ್ದಾರೆ. ದಾಸ ಜೈಲು ಸೇರುತ್ತಿದ್ದಂತೆ ಇತ್ತ ಇವರ ಮುಂದಿನ ಸಿನಿಮಾಗಳ ಗತಿ ಏನು ಎನ್ನುವ ಪ್ರಶ್ನೆ ಮುನ್ನೆಲೆಗೆ ಬಂದಿದೆ.
ದರ್ಶನ್ ಅವರು ಈ ಕೊಲೆ ಪ್ರಕರಣದಲ್ಲಿ ಜೈಲು ಸೇರುವ ಮುನ್ನ ‘ಡೆವಿಲ್’ ಸಿನಿಮಾ ಮಾಡುತ್ತಿದ್ದರು. ಅನಾರೋಗ್ಯದ ಕಾರಣ ನೀಡಿ ಹೈಕೋರ್ಟ್ನಿಂದ ಜಾಮೀನು ಪಡೆದು ಹೊರಗೆ ಬರುತ್ತಿದ್ದಂತೆ ಡೆವಿಲ್ ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಂಡು ಶೂಟ್ ಪೂರ್ಣಗೊಳಿಸಿದ್ದರು. ಡಬ್ಬಿಂಗ್ ಕೂಡ ಪೂರ್ಣಗೊಳಿಸಿದ್ದಾರೆ ಎನ್ನಲಾಗುತ್ತಿದೆ ಹೀಗಾಗಿ ಈ ಸಿನಿಮಾಗೆ ಯಾವುದೇ ತೊಂದರೆ ಇಲ್ಲ.
ದರ್ಶನ್ ಬಳಿ ಅಧಿಕೃತವಾಗಿ ಇರೋದು ‘ಡೆವಿಲ್’ ಸಿನಿಮಾ ಮಾತ್ರ. ಆದರೆ, ಅಧಿಕೃತವಾಗಿ ಘೋಷಣೆ ಆಗದ ಎರಡು ಸಿನಿಮಾಗಳು ಅವರ ಬಳಿ ಇದ್ದವು ಎನ್ನಲಾಗಿದೆ. ತರುಣ್ ಸುಧೀರ್ ಅವರು ಇದಕ್ಕೆ ನಿರ್ದೇಶನ ಮಾಡಬೇಕಿತ್ತು. ‘ವೀರ ಸಿಂಧೂರ ಲಕ್ಷ್ಮಣ’ ಎಂಬುದು ಚಿತ್ರದ ಟೈಟಲ್ ಎನ್ನಲಾಗಿದೆ.
ದರ್ಶನ್ ಅಳಿಯ ಚಂದು ಸಿನಿಮಾಗೆ ದರ್ಶನ್ ವಿಲನ್ ಎಂದು ಹೇಳಲಾಗುತ್ತಿದೆ. ಈ ಸಿನಿಮಾ ಕೂಡ ಇನ್ನೂ ಅಧಿಕೃತವಾಗಿ ಘೋಷಣೆ ಆಗಿಲ್ಲ. ಕೆಲವು ಸಿನಿಮಾಗಳ ಅಡ್ವಾನ್ಸ್ನ್ನು ಹಿಂದಿರುಗಿಸಿದ್ದಾರೆ ಎನ್ನುವ ಸುದ್ದಿ ಕೂಡ ಇದೆ. ಆದರೆ ಈ ಕುರಿತಾದ ಮಾಹಿತಿ ಇಲ್ಲ. ಈಗ ದರ್ಶನ್ ಇಲ್ಲದೆ, ಈ ಸಿನಿಮಾ ಕೂಡ ಅರ್ಧಕ್ಕೆ ನಿಲ್ಲುವ ಸಾಧ್ಯತೆ ಇದೆ.
2024ರ ಜೂನ್ 8ರಂದು ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆಯಾಗಿತ್ತು. ಈ ಹತ್ಯೆಯ ಕೇಸ್ನಲ್ಲಿ ನಟ ದರ್ಶನ್ ಸೇರಿದಂತೆ 17 ಮಂದಿಯನ್ನು ಬಂಧಿಸಲಾಗಿತ್ತು. ರೇಣುಕಾಸ್ವಾಮಿ ಹತ್ಯೆ ಆರೋಪಕ್ಕೆ ಸಂಬಂಧಿಸಿದಂತೆ ಜುಲೈ 24ರಂದು ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಹಾಗೂ ನ್ಯಾ.ಮಹದೇವನ್ ಅವರಿದ್ದ ದ್ವಿಸದಸ್ಯ ಪೀಠ, ಸರ್ಕಾರ ಹಾಗೂ ದರ್ಶನ ಪರ ವಕೀಲರ ವಾದವನ್ನು ಆಲಿಸಿತು. ಬಳಿಕ ಎರಡೂ ಕಡೆಯ ವಕೀಲರಿಗೆ ಲಿಖಿತ ವಾದಾಂಶವನ್ನು ಸಲ್ಲಿಸಲು ಕೋರ್ಟ್ ಒಂದು ವಾರಗಳ ಗಡುವು ನೀಡಿದ್ದು, ಆ ಬಳಿಕ ತೀರ್ಪು ಪ್ರಕಟಿಸಲಿದೆ ಎಂದಿತ್ತು.
3 ಪುಟದೊಳಗೆ ಲಿಖಿತ ವಾದ ಸಲ್ಲಿಸಲು ನ್ಯಾಯಾಲಯ ಹೇಳಿದೆ. ಸರ್ಕಾರದ ಪರ ಸಿದ್ಧಾರ್ಥ್ ಲೂತ್ರಾ ಹಾಗೂ ನಟ ದರ್ಶನ್ ಪರ ಸಿದ್ಧಾರ್ಥ್ ದವೆ ವಾದ ಮಂಡನೆ ಮಾಡಿದರು. ಸಾಕ್ಷಿಗಳು, ಪ್ರತ್ಯಕ್ಷದರ್ಶಿಗಳ ಹೇಳಿಕೆ, ದರ್ಶನ್ ಹಾಗೂ ಪವಿತ್ರಾ ಗೌಡ ನಡುವಿನ ಸಂಬಂಧ ಹಾಗೂ ಕೊಲೆಗೆ ಕಾರಣವೇನು? ಮುಂತಾದ ವಿಚಾರಗಳ ಬಗ್ಗೆ ನ್ಯಾಯಾಲಯ ಪ್ರಶ್ನೆಗಳನ್ನು ಕೇಳಿತು. ಎರಡೂ ಕಡೆಯ ವಕೀಲರು ಪ್ರಬಲವಾಗಿ ವಾದ ಮಂಡನೆ ಮಾಡಿದ್ದು, ವಾದವನ್ನು ಆಲಿಸಿದ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿತ್ತು.
ಕೊಲೆ ಕೇಸ್ನ ಆರೋಪಿಗಳಾದ ನಟ ದರ್ಶನ್, ಪವಿತ್ರಗೌಡ, ಪ್ರದೂಶ್, ಲಕ್ಷ್ಮಣ್, ನಾಗರಾಜು ಹಾಗೂ ಅನುಕುಮಾರ್ ಸೇರಿದಂತೆ 7 ಪ್ರಮುಖ ಆರೋಪಿಗಳಿಗೆ ಕಳೆದ(2024) ಡಿಸೆಂಬರ್ 13ರಂದು ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ರಾಜ್ಯ ಪೊಲೀಸ್ ಇಲಾಖೆ ನಟ ದರ್ಶನ್ಗೆ ಹೈಕೋರ್ಟ್ ನೀಡಿರುವ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಸುದೀರ್ಘ ವಾದ-ವಿವಾದ ಪರಿಶೀಲಿಸಿದ ನ್ಯಾಯಾಲಯ ತೀರ್ಪು ಕಾಯ್ದಿರಿಸಿತು. ಇಂದು ಈ ಪ್ರಕರಣದ ವಾದ ಆಲಿಸಿದ ಸುಪ್ರೀಂ ಕೋರ್ಟ್ ಈ ಹಿಂದೆ ಹೈ ಕೋರ್ಟ್ ನೀಡಿದ್ದ ಜಾಮೀನನ್ನು ರದ್ದು ಮಾಡಿ ಆದೇಶ ಹೊರಡಿಸಿದೆ.
ದರ್ಶನ್ ಸೇರಿದಂತೆ ಎಲ್ಲ 7 ಆರೋಪಿಳಿಗೆ ಹೈಕೋರ್ಟ್ ನೀಡಿದ್ದ ಜಾಮೀನು ಆದೇಶವನ್ನು ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಹಾಗೂ ನ್ಯಾ.ಮಹದೇವನ್ ಅವರಿದ್ದ ದ್ವಿಸದಸ್ಯ ಪೀಠ ರದ್ದು ಮಾಡಿತು. ಹೈಕೋರ್ಟ್ ನೀಡಿದ ಜಾಮೀನಿನಲ್ಲಿ ದೋಷವಿದೆ. ಜೈಲಿನಲ್ಲಿ ಆರೋಪಿಗಳಿಗೆ ಫೈವ್ ಸ್ಟಾರ್ ಟ್ರೀಟ್ಮೆಂಟ್ ನೀಡಲಾಗಿದೆ. ಈ ಪ್ರಕರಣ ಬೆಳಗಕಿಗೆ ಬಂದ ಕೂಡಲೇ ಜೈಲು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಬೇಕಿತ್ತು. ಇದೊಂದು ಲ್ಯಾಂಡ್ ಮಾರ್ಕ್ ತೀರ್ಪು ಎಂದು ಸುಪ್ರೀಂಕೋರ್ಟ್ ಹೇಳಿತು. ಅಲ್ಲದೆ, ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರಲ್ಲ ಎಂದಿದೆ.
ಆರೋಪಿ ಜೈಲಿನ ಲಾನ್ನಲ್ಲಿ ಸಿಗರೇಟ್ ಸೇದುವುದು ಕಂಡಬಂದರೆ ಜೈಲಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಜೈಲಿಗೆ ಹೋದ ನಂತರ ಆರೋಪಿ ಸಾಮಾನ್ಯ ಕೈದಿಯಂತೆ ಇರಬೇಕು. ಈ ಮುಂಚೆ ಆತನಿಗೆ ಫೈವ್ ಸ್ಟಾರ್ ಟ್ರೀಟ್ಮೆಂಟ್ ಕೊಡಲಾಗಿದೆ. ಇನ್ಮುಂದೆ ಸಾಮಾನ್ಯ ಕೈದಿಯಂತೆ ಇರಬೇಕು. ಜೈಲಿನ ರಾಜಾತಿಥ್ಯದ ಬಗ್ಗೆ ಕೂಡ ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದೆ.
A2 ದರ್ಶನ್ ಜೊತೆ A1 ಪವಿತ್ರಾ ಗೌಡ, A6, ಜಗದೀಶ್ ಅಲಿಯಾಸ್ ಜಗ್ಗ, A7 ಅನುಕುಮಾರ್ ಅಲಿಯಾಸ್ ಅನು, ಎ14 ಪ್ರದೂಶ್, ಎ11 ನಾಗರಾಜು ಅಲಿಯಾಸ್ ನಾಗ, ಎ12 , ಲಕ್ಷ್ಮಣ್ ಜಾಮೀನು ಕೂಡ ರದ್ದಾಗಿದೆ.