ಜಲ್ಲಿಕಟ್ಟು ಮರುಪರಿಶೀಲನೆಗೆ ಸುಪ್ರೀಂ ಒಪ್ಪಿಗೆ

Supreme Court
Published on

ನವದೆಹಲಿ: ಗೂಳಿ ಪಳಗಿಸುವ ಜಲ್ಲಿಕಟ್ಟು ಕ್ರೀಡೆಗೆ ಅನುಮತಿ ನೀಡಲು ತಮಿಳುನಾಡು ತನ್ನ ಕಾನೂನಿನಲ್ಲಿ ಮಾಡಿದ ತಿದ್ದುಪಡಿಗಳ ಸಿಂಧುತ್ವವನ್ನು ಎತ್ತಿಹಿಡಿಯುವ 2023ರ ಸುಪ್ರೀಂಕೋರ್ಟ್​ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಪರಿಗಣಿಸಲು ಸುಪ್ರೀಂಕೋರ್ಟ್​ ಒಪ್ಪಿಕೊಂಡಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್​ ಮತ್ತು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ, ಮನೋಜ್​ ಮಿಶ್ರಾ ಅವರನ್ನೊಳಗೊಂಡ ಪೀಠ, ಹಿರಿಯ ವಕೀಲ ಅಭಿಷೇಕ್​ ಸಿಂಘ್ವಾ ಆಲಿಸಿ, ಮರುಪರಿಶೀಲನಾ ಅರ್ಜಿಗಳನ್ನು ಪಟ್ಟಿ ಮಾಡಿ ಪರಿಗಣಿಸುವ ಅಗತ್ಯವಿದೆ ಎಂದು ತಿಳಿಸಿದರು.

ಸಾಮಾನ್ಯವಾಗಿ ಮರುಪರಿಶೀಲನಾ ಅರ್ಜಿಗಳನ್ನು ಸುಪ್ರೀಂಕೋರ್ಟ್​ ನ್ಯಾಯಮೂರ್ತಿಗಳನ್ನು ತಮ್ಮ ಛೇಂಬರ್​ಗಳಲ್ಲೆ ವಿಚಾರಣೆ ನಡೆಸಿ ಪೂರ್ಣಗೊಳಿಸುತ್ತಾರೆ. ನಿವೃತ್ತ ನ್ಯಾ. ಕೆ ಎಂ ಜೋಸೆಫ್​ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ಕಳೆದ ವರ್ಷ ಮೇ 18ರಂದು ಜಲ್ಲಿಕಟ್ಟು, ಎತ್ತಿನ ಗಾಡಿ ಓಟ ಮತ್ತು ಕಂಬಳಕ್ಕೆ ಅನುಮತಿ ನೀಡಿದ ತಮಿಳುನಾಡು, ಮಹಾರಾಷ್ಟ್ರ ಮತ್ತು ಕರ್ನಾಟಕದ ತಿದ್ದುಪಡಿ ಕಾಯ್ದೆಗಳ ಸಿಂಧುತ್ವವನ್ನು ಎತ್ತಿಹಿಡಿದಿತ್ತು.

ಈ ಕ್ರೀಡೆಗಳಿಗೆ ಅನುವು ಮಾಡಿಕೊಡಲು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ (ತಮಿಳುನಾಡು ತಿದ್ದುಪಡಿ) ಕಾಯ್ದೆ, 2017, ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವಿಕೆ (ಮಹಾರಾಷ್ಟ್ರ ತಿದ್ದುಪಡಿ) ಕಾಯ್ದೆ, 2017 ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವಿಕೆ (ಕರ್ನಾಟಕ ಎರಡನೇ ತಿದ್ದುಪಡಿ) ಕಾಯ್ದೆ, 2017ನ್ನು ಆಯಾ ರಾಜ್ಯಗಳು ಜಾರಿಗೊಳಿಸಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net