

ನವದೆಹಲಿ: ವಾಕ್ ಸ್ವಾತಂತ್ರ್ಯ ಇತ್ತೀಚಿನ ದಿನಗಳಲ್ಲಿ ಅತ್ಯಂತ ಹೆಚ್ಚು ದುರುಪಯೋಗಗೊಂಡಿರುವ ಮೂಲಭೂತ ಹಕ್ಕಾಗಿದೆ ಎಂದು ಸುಪ್ರೀಂಕೊರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎಸ್.ಎ. ಬೊಬ್ಡೆ ಗುರುವಾರ ತೀವ್ರ ಕಳವಳ ವ್ಯಕ್ತಪಡಿಸಿದರು. ಪ್ರಕರಣದಲ್ಲಿ ಕಿರಿಯ ಅಧಿಕಾರಿಯೊಬ್ಬರು ಸಲ್ಲಿಸಿದ ಅಫಿಡವಿಟ್ ‘ತೀರಾ ಲಜ್ಜೆಗೆಟ್ಟ ಪ್ರತಿಕ್ರಿಯೆಯಾಗಿದೆ’ ಎಂದು ಸಿಜೆಐ ಅಭಿಪ್ರಾಯಪಟ್ಟರು. ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿಯೇ ಹೊಸದಾಗಿ ಅಫಿಡವಿಟ್ ಸಲ್ಲಿಸುವಂತೆ ನಿರ್ದೇಶಿಸಿದರು.
ದೆಹಲಿಯಲ್ಲಿ ನಡೆದ ತಬ್ಲಿಘಿ ಜಮಾತ್ ಸಮಾವೇಶ ‘ದ್ವೇಷ ಹರಡುತ್ತಿದೆ’ ಎಂದು ವರದಿ ಮಾಡಿದ್ದ ಮಾಧ್ಯಮಗಳ ವಿರುದ್ಧ ಕ್ರಮ ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ವೇಳೆ ಸಿಜೆಐ ನೇತೃತ್ವದ ಪೀಠ ಕೇಂದ್ರ ಸರ್ಕಾರವನ್ನೂ ತರಾಟೆಗೆ ತೆಗೆದುಕೊಂಡಿತು. ಈ ವಿಚಾರದಲ್ಲಿ ಮಾಧ್ಯಮವನ್ನು ಸರ್ಕಾರ ಸಮರ್ಥಿಸಿಕೊಂಡಿತ್ತು. ‘ಯಾವುದೇ ಕೆಟ್ಟ ವರದಿ ಪ್ರಕಟವಾಗಿಲ್ಲ’ ಎಂದು ಹೇಳಿತ್ತು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪೀಠ, ‘ಈ ಅಫಿಡವಿಟ್ ಹೊಣೆಯಿಂದ ನುಣುಚಿಕೊಳ್ಳುವಂತಿದೆ. ಕೆಟ್ಟ ವರದಿಗಾರಿಕೆಯನ್ನು ನೀವು ಒಪ್ಪದೇ ಇರಬಹುದು. ಆದರೆ ಕೆಟ್ಟ ವರದಿಗಾರಿಕೆಯ ದೃಷ್ಟಾಂತ ತೋರಿಸಿಯೇ ಇಲ್ಲವೆಂದು ಹೇಗೆ ಹೇಳುತ್ತೀರಿ ಎಂದು ಪ್ರಶ್ನಿಸಿತು. ವಿಚಾರಣೆಯನ್ನು ಎರಡು ವಾರ ಮುಂದೂಡಲಾಗಿದೆ. ಈ ಪೀಠದಲ್ಲಿ ಸಿಜೆಐ ಜತೆಗೆ ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ, ವಿ.ರಾಮಸುಬ್ರಮಣಿಯನ್ ಇದ್ದರು.
ದೆಹಲಿಯ ಮಾರ್ಕಜ್ ನಿಜಾಮುದ್ದೀನ್ನಲ್ಲಿ ಕರೊನಾ ನಿರ್ಬಂಧಗಳನ್ನು ಉಲ್ಲಂಘಿಸಿ ತಬ್ಲಿಘಿ ಸಮಾವೇಶ ನಡೆಸಿದ್ದು ತೀರಾ ವಿವಾದಕ್ಕೆ ಕಾರಣವಾಗಿತ್ತು. ಅದರಲ್ಲಿ ಭಾಗವಹಿಸಿದ್ದ ಅನೇಕ ಮಂದಿ ದೇಶದ ಹಲವೆಡೆ ಸೋಂಕಿನ ಸೂಪರ್ ಸ್ಪ್ರೆಡ್ಡರ್ ಎಂದು ಆರೋಪಿಸಲಾಗಿತ್ತು.