ಪೂರಕ ಪೌಷ್ಟಿಕ ಆಹಾರದ ತಂಟೆ, ಸುಪ್ರೀಂ ಕೋರ್ಟ್‌ನತ್ತ ರಾಜ್ಯದ ಚಿತ್ತ

HK Patil
Published on

ಬೆಂಗಳೂರು: ಪೂರಕ ಪೌಷ್ಟಿಕ ಆಹಾರ ಸಿದ್ಧಪಡಿಸಿ ಅಂಗನವಾಡಿ ಕೇಂದ್ರಗಳಿಗೆ ಪೂರೈಕೆ ಒಪ್ಪಂದ ರದ್ದು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸೂಚನೆಯಂತೆ 274 ಕೋಟಿ ರೂ. ಠೇವಣಿಯಿಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ರಕರಣದ ಬಗ್ಗೆ ವಿಸ್ತೃತವಾಗಿ ಚರ್ಚಿಸಿ, ಸುಪ್ರೀಂ ಕೋರ್ಟ್ ಅವಲೋಕನದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯದಂತೆ 274 ಕೋಟಿ ರೂ. ಠೇವಣಿಯಿರಿಸಲಿದೆ.

ಸಭೆಯ ನಂತರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ಕ್ರಿಸ್ಟಿ ಫ್ರೈಡ್ ಗ್ರಾಂ ಇಂಡಸ್ಟ್ರೀಸ್ ಸಂಸ್ಥೆಯು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯೊಂದಿಗೆ 2007, 2008, 2009ರಲ್ಲಿ 137 ಎಂಎಸ್‌ಪಿಟಿಸಿಗಳನ್ನು ಸ್ಥಾಪಿಸಲು ಹಾಗೂ ಪೂರಕ ಪೌಷ್ಠಿಕ ಆಹಾರ ಪದಾರ್ಥಗಳನ್ನು ತಯಾರಿಸಿ ಅಂಗನವಾಡಿಗಳಿಗೆ ಸರಬರಾಜು ಮಾಡಲು ಒಪ್ಪಂದಗಳನ್ನು ಮಾಡಿಕೊಂಡಿತ್ತು.

ಆದರೆ ಈ ಸಂಸ್ಥೆಯು ಒಡಂಬಡಿಕೆಯ ಶರತ್ತುಗಳನ್ನು ಪೂರೈಸಲು ವಿಫಲವಾಗಿತ್ತು.ಈ ಹಿನ್ನೆಲೆಯಲ್ಲಿ 2012ರಲ್ಲಿ ಎಲ್ಲ ಒಪ್ಪಂದಗಳನ್ನು ರದ್ದು ಮಾಡಲಾಗಿತ್ತು. ಸರ್ಕಾರದ ನಿರ್ಧಾರವನ್ನು ಆಕ್ಷೇಪಿಸಿ ಸಂಸ್ಥೆಯು ಆರ್ಬಿಟ್ರೇಷನ್ ಕೋರ್ಟ್‌ನಲ್ಲಿ ದಾವೆ ಹೂಡಿತ್ತು.

ಆರ್ಬಿಟ್ರೇಷನ್ ಪ್ರಕರಣದಲ್ಲಿ ಆರ್ಬಿಟ್ರೇಟರ್ ನ್ಯಾಯಾಲಯವು 2018ರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ 171.47 ಕೋಟಿ ರೂ.ಗಳನ್ನು ಈ ಸಂಸ್ಥೆಗೆ 90 ದಿನಗಳೊಳಗಾಗಿ ಪಾವತಿಸುವಂತೆ ಸೂಚಿಸಿತ್ತು. ಅಲ್ಲದೆ, ತಡವಾಗಿ ಪಾವತಿಸಿದರೆ ಶೇ.12-14ರಷ್ಟು ಬಡ್ಡಿ ಪಾವತಿಸುವಂತೆ ಐ-ತೀರ್ಪು ನೀಡಿತ್ತು. ಈ ತೀರ್ಪಿನ ವಿರುದ್ಧ ದಾಖಲಿಸಲಾದ ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯ 2021ರಲ್ಲಿ ವಜಾಗೊಳಿಸಿದೆ.

ಈ ತೀರ್ಪನ್ನು ವಿರುದ್ಧ 220 ದಿನಗಳೊಳಗೆ ಸರ್ಕಾರ ಮೇಲ್ಮನವಿ ಸಲ್ಲಿಸಬೇಕಾಗಿತ್ತು. ನಿಗದಿತ ಗಡುವು ಮುಗಿದ ಕಾರಣ ಹೈಕೋರ್ಟ್‌ನಲ್ಲಿಯೂ ಹಿನ್ನಡೆಯುಂಟಾಗಿ 274 ಕೋಟಿ ರೂ. ಪಾವತಿಸುವಂತಾಗಿದೆ. ಈ ಸಂಬಂಧ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿ 4 ವಾರಗಳ ಕಾಲಾವಕಾಶ ಕೋರಲು ನಿರ್ಧರಿಸಲಾಗಿದೆ ಎಂದು ಎಂದು ಎಚ್.ಕೆ.ಪಾಟೀಲ್ ಹೇಳಿದರು.

ಸಚಿವ ಸಂಪುಟದ ಇತರ ನಿರ್ಣಯಗಳು

- ಲೋಕಾಯುಕ್ತ ದಾಳಿಗೊಳಗಾಗಿದ್ದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಪಾಪಣ್ಣ ವಿರುದ್ಧದ ಆರೋಪ ಸಾಬೀತು. ಹಣ ವಾಪಸ್ ನೀಡುವುದಾಗಿ ಕೋರ್ಟ್‌ನಲ್ಲಿ ಅವರು ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಸೇವೆಯಿಂದ ವಜಾ.

- ರಾಯಚೂರಿನ ಕಲ್ಮಲ ಜಂಕ್ಷನ್‌ನಿಂದ ಸಿಂಧನೂರು, ಬಳ್ಳಾರಿ-ಲಿಂಗಸೂಗೂರು 78.45 ಕಿ.ಮೀ. ರಸ್ತೆ ಕಾಮಗಾರಿಯನ್ನು ಎಚ್‌ಎಎಂ ಮಾದರಿಯಲ್ಲಿ ಕೈಗೊಳ್ಳಳು 1695 ಕೋಟಿ ರೂ. ವೆಚ್ಚದ ಅಂದಾಜು. ಯೋಜನಾ ವೆಚ್ಚ ಹೆಚ್ಚಿದೆ ಎಂಬ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಪುನರ್ ಪರಿಶೀಲಿಸಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡನೆ

- ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಗೊಬ್ಬರಗುಂಟೆ ಗ್ರಾಮದ ಐದು ಎಕರೆ ಸರಕಾರಿ ಜಮೀನು ರಾಜ್ಯ ಬ್ಯಾಸ್ಕೆಟ್ ಬಾಲ್ ಅಸೋಸಿಯೇಷನ್‌ಗೆ ನೀಡಲು ತಾತ್ವಿಕ ಒಪ್ಪಿಗೆ. ಈ ಜಮೀನಿನ ತಾಂತ್ರಿಕ, ಇನ್ನಿತರ ವಿಷಯಗಳನ್ನು ಪರಿಶೀಲಿಸಿ ಮುಖ್ಯಮಂತ್ರಿ ಮುಂದಿಟ್ಟು ಒಪ್ಪಿಗೆ ಪಡೆಯಲು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಅವರಿಗೆ ಅಧಿಕಾರ.

- ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸಂಗಮ ಗ್ರಾಮವನ್ನು ಕಂದಾಯ ಇಲಾಖೆಯ ದಾಖಲಾತಿಗಳಲ್ಲಿ ಕೂಡಲ ಸಂಗಮವೆಂದು ಮರು ನಾಮಕರಣ.

- ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ಹಾಸ್ಟೆಲ್ ಕಟ್ಟಡ ಕಾಮಗಾರಿಯ ಪರಿಷ್ಕೃತ ಅಂದಾಜು ಮೊತ್ತ 27.88 ಕೋಟಿ ರೂ.

- ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿನ 450 ಹಾಸಿಗೆಗಳ ಸಾಮರ್ಥ್ಯದ ನೂತನ ಬೋಧಕ ಆಸ್ಪತ್ರೆ ಕಟ್ಟಡ ಕಾಮಗಾರಿಯ ಪರಿಷ್ಕೃತ ಅಂದಾಜು ಮೊತ್ತ 138 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ

- ನಿವೃತ್ತ ಪ್ರಧಾನ ಜಿಲ್ಲಾ ನ್ಯಾಯಾಧೀಶೆ ಎಚ್.ಜಿ.ನಾಗರತ್ನ ಎಂಬುವರನ್ನು ಕ್ರಿಸ್ಟಿಫ್ರೈಡ್ ಗ್ರಾಂ ಇಂಡಸ್ಟ್ರೀಸ್ ಸಂಸ್ಥೆಯು ಹೂಡಿದ ಆರ್ಬಿಟ್ರೇಷನ್ ಪ್ರಕರಣದಲ್ಲಿ ಕಾನೂನು ನೆರವು ನೀಡುವುದಕ್ಕಾಗಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾನೂನು ಸಲಹೆಗಾರರನ್ನಾಗಿ ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೇಮಕಕ್ಕೆ ಅಸ್ತು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net