ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಗೆ ಪೂರಕ ಉತ್ಪಾದನೆ

19kgl01
ಕಾರ್ಗಲ್‌ನ ಕೆಪಿಸಿಯಿಂದ ಅಭಿಯಂತರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಡಾ. ಎಚ್.ಟಿ.ಸುರೇಶ್ ಅವರನ್ನು ಸನ್ಮಾನಿಸಲಾಯಿತು. ಎಚ್.ಆರ್.ರಮೇಶ್, ಜಿ.ಇ.ಮೋಹನ್, ಎ.ಆರ್.ಅನಿತಾ ಇತರರಿದ್ದರು.
Published on

ಕಾರ್ಗಲ್: ಸರ್ ಎಂ.ವಿಶ್ವೇಶ್ವರಯ್ಯ ಅವರ ಧ್ಯೇಯ ಹಾಗೂ ಆದರ್ಶ ಪ್ರತಿಯೊಬ್ಬರಿಗೂ ಸ್ಫೂರ್ತಿ ಎಂದು ಶರಾವತಿ ಕಣಿವೆ ಯೋಜನೆಯ ಕೆಪಿಸಿ ವಿದ್ಯುತ್ ವಿಭಾಗದ ಮುಖ್ಯ ಅಭಿಯಂತ ಎಚ್.ಆರ್.ರಮೇಶ್ ಹೇಳಿದರು.

ಜೋಗದ ಶ್ರೀ ಮಹಾಗಣಪತಿ ಸಮುದಾಯ ಭವನದಲ್ಲಿ ಕರ್ನಾಟಕ ವಿದ್ಯುತ್ ನಿಗಮದ ಶರಾವತಿ ಕಣಿವೆ ಯೋಜನೆಯ ಪದವೀಧರ ಮತ್ತು ಡಿಪ್ಲೊಮಾ ಅಭಿಯಂತರ ಸಂಘದಿಂದ ಏರ್ಪಡಿಸಿದ್ದ ಸರ್ ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನ ಹಾಗೂ ಅಭಿಯಂತರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಶರಾವತಿ ಯೋಜನೆ ಆರಂಭದ ದಿನಗಳಲ್ಲಿ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಹೆಚ್ಚಾಗಿ ವಿದ್ಯುತ್ ತೆಗೆದುಕೊಳ್ಳುವಂತೆ ಅಂದು ಮನೆ ಮನೆಗೆ ಜಾಹೀರಾತು ನೀಡಲಾಗಿತ್ತು. ಆದರೆ ಪ್ರಸ್ತುತ ರಾಜ್ಯದ ಬೆಳವಣಿಗೆ ಆಗುತ್ತಿದ್ದಂತೆ ವಿದ್ಯುತ್‌ಗೂ ಬೇಡಿಕೆ ಹೆಚ್ಚಾಗಿದೆ. 744 ಮೆಗಾ ವಾಟ್‌ನಿಂದ ಆರಂಭವಾದ ನಿಗಮವು ಪ್ರಸ್ತುತ 9 ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡುತ್ತಿದೆ ಎಂದು ತಿಳಿಸಿದರು.

ಮೊದಲು ವಿದ್ಯುತ್ ಉತ್ಪಾದನೆಗೆ ನಿಗಮಕ್ಕೆ ಪೈಪೋಟಿ ಇರಲಿಲ್ಲ. ಪ್ರಸ್ತುತ ಖಾಸಗಿ ವಲಯ ವಿದ್ಯುತ್ ಉತ್ಪಾದನೆ ಮೂಲಕ ಸಂಸ್ಥೆ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ನಾವು ಎಚ್ಚರ ವಹಿಸದಿದ್ದರೆ ಖಾಸಗಿ ವಲಯ ನಮ್ಮನ್ನು ಹಿಂದಿಕ್ಕುವ ಅಪಾಯ ಇದೆ. ಸಂಸ್ಥೆ ಉದ್ಯೋಗಿಗಳು ಶಿಸ್ತು, ನಿಷ್ಠೆ ಮತ್ತು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು.

ಪರಿಸರಕ್ಕೆ ಪೂರಕವಾದ ವಿವಿಧ ಮೂಲಗಳ ವಿದ್ಯುತ್ ಉತ್ಪಾದನೆಯಲ್ಲಿ ದೇಶದಲ್ಲಿ ಕರ್ನಾಟಕ ರಾಜ್ಯ ಮೊದಲ ಸ್ಥಾನದಲ್ಲಿದ್ದು, ಇದರಲ್ಲಿ ನಿಗಮದ ಪಾಲು ಇದೆ. ಅನೇಕ ಕಾರಣಗಳಿಂದ ವಿದ್ಯುತ್‌ನ ಹೊಸ ಪ್ರಾಜೆಕ್ಟ್‌ಗಳನ್ನು ರೂಪಿಸಲು ಕಷ್ಟವಾಗುತ್ತಿದೆ. ಶರಾವತಿ ಭೂ ಗರ್ಭ ಪಂಪ್ಡ್ ಸ್ಟೋರೇಜ್ ಯೋಜನೆ, ಸೋಲಾರ್ ಯೋಜನೆ, ಪವನಶಕ್ತಿ ಯೋಜನೆ, ಗ್ಯಾಸ್ ಪವರ್ ಎನರ್ಜಿಗಳತ್ತ ಸಂಸ್ಥೆಯು ಮುಖ ಮಾಡಿದೆ ಎಂದು ತಿಳಿಸಿದರು.

ವಿದ್ಯುತ್ ಉತ್ಪಾದನೆಯ ಬಗ್ಗೆ ಶಿವಮೊಗ್ಗ ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ. ಎಚ್.ಟಿ.ಸುರೇಶ್ ಮಾತನಾಡಿದರು. ಕೆಪಿಸಿ ಕಾಮಗಾರಿ ವಿಭಾಗದ ಮುಖ್ಯ ಅಭಿಯಂತ ಜಿ.ಇ.ಮೋಹನ್, ಅಧೀಕ್ಷಕ ಅಭಿಯಂತರರಾದ ಎ.ಆರ್.ಅನಿತಾ, ವಾಸುದೇವ ಮೂರ್ತಿ, ಆರ್.ಶಿವಕುಮಾರ್, ಕೆ.ದಿನೇಶ್, ಪದವೀಧರರ ಅಸೋಸಿಯೇಶನ್ ಕಾರ್ಯದರ್ಶಿ ಎ.ಆರ್.ಹೇಮರಾಜ್, ಡಿಪ್ಲೊಮಾ ಅಸೋಸಿಯೇಶನ್ ಅಧ್ಯಕ್ಷ ಎಚ್.ಎಂ.ರಮೇಶ್, ಎನ್.ಸಿ.ಶಿವರಾಜ್ ನಾಯಕ್, ಗೌರಮ್ಮ, ಎಸ್.ಚೈತ್ರಾ, ಚೈತನ್ಯ, ವಿನಾಯಕ ನಾಯಕ್, ಚಂದ್ರಶೇಖರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net