

ಬೆಂಗಳೂರು: ಆರ್ಥಿಕ ಮುಗ್ಗಟ್ಟಿನ ನಡುವೆ ಕೊರತೆಯನ್ನು ಪ್ರತಿಪಾದಿಸುತ್ತಲೇ 11,803.72 ಕೋಟಿ ರೂ. ಪೂರಕ ಅಂದಾಜನ್ನು ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಿದೆ. ಮಂಗಳವಾರ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 2019-20ನೇ ಸಾಲಿನ ಮೂರನೇ ಹಾಗೂ ಅಂತಿಮ ಕಂತಿನ ಬಳಕೆಗೆ ಅನುಮತಿ ಪಡೆದುಕೊಂಡರು.
ರಾಜಭವನದ ಸಾಮಾನ್ಯ ವೆಚ್ಚಕ್ಕಾಗಿ 97.89 ಲಕ್ಷ ರೂ. ಹೆಚ್ಚುವರಿ ಅನುದಾನ ಒದಗಿಸಿದ್ದರೆ, ಸಚಿವರು ಮತ್ತು ಸಂಸದರ ಹೊಸ ವಾಹನ ಖರೀದಿಗೆ 3.43 ಕೋಟಿ ರೂ., ಎಲ್ಲ ಜಿಲ್ಲಾಧಿಕಾರಿಗಳಿಗೆ 30 ವಾಹನ ಒದಗಿಸಲು 4.20 ಕೋಟಿ ರೂ., ನಾಲ್ಕು ಪ್ರಾದೇಶಿಕ ಆಯುಕ್ತರ ವಾಹನಕ್ಕೆ 56 ಲಕ್ಷ ರೂ., ವಿಧಾನಸಭೆ ಶಾಸಕರು- ಮಾಜಿ ಶಾಸಕರ ಉಪಯೋಗಕ್ಕೆ 23 ಹೊಸ ವಾಹನಗಳ ಖರೀದಿಗಾಗಿ 1.39 ಕೋಟಿ ರೂ. ಬಳಸಿಕೊಳ್ಳಲು ಒಪ್ಪಿಗೆ ನೀಡಲಾಗಿದೆ.
ಮುಖ್ಯ ಚುನಾವಣಾಧಿಕಾರಿ ಕಚೇರಿ ಹೊಸ ಕಟ್ಟಡ ನಿರ್ವಣಕ್ಕೆ 4.50 ಕೋಟಿ ರೂ. ಹಾಗೂ ವಿವಿಧ ಮಾದರಿ ಇವಿಎಂ, ವಿವಿ ಪ್ಯಾಟ್ ಉಗ್ರಾಣಗಳನ್ನು ನಿರ್ವಿುಸುವ ಕಾಮಗಾರಿಗೆ 4 ಕೋಟಿ ರೂ. ಅವಕಾಶ ಮಾಡಿಕೊಡಲಾಗಿದೆ.
ಸಾಲುಮರದ ತಿಮ್ಮಕ್ಕ ಅವರಿಗೆ ಮರ ಬೆಳೆಸಿದ್ದಕ್ಕಾಗಿ ಧನ ಸಹಾಯ ಮಾಡಲು 2 ಕೋಟಿ ರೂ., ಚಿತ್ರದುರ್ಗದ ಭೋವಿ ಗುರುಪೀಠ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ಮಹಾ ಸಂಸ್ಥಾನ ಮಠದ ಅಭಿವೃದ್ಧಿಗೆ 5 ಕೋಟಿ ರೂ., ವಿವಿಧ ಸಮುದಾಯದ ಅಭಿವೃದ್ಧಿಗೆ 6 ಕೋಟಿ ರೂ., ಶ್ರೀ ಸಿದ್ದಗಂಗಾ ಮಠದ ಶ್ರೀಶಿವಕುಮಾರ ಮಹಾಸ್ವಾಮಿಗಳವರ ಜೀವನ, ಆದರ್ಶ, ಸಾಧನೆ ಇತ್ಯಾದಿ ಒಳಗೊಂಡ ವಸ್ತು ಸಂಗ್ರಹಾಲಯ ಕಟ್ಟಡ ನಿರ್ವಿುಸಲು 10 ಕೋಟಿ ರೂ., ಶ್ರೀಗುರುಗುಂಡ ಬ್ರಹ್ಮೇಶ್ವರ ಮಠದ ಅಭಿವೃದ್ಧಿಗೆ 5 ಕೋಟಿ ರೂ., ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ದೇವಗಾಣಗಾಪುರ ಗ್ರಾಮದ ಶ್ರೀ ದತ್ತಾತ್ರೇಯ ದೇವಸ್ಥಾನದ ಅಭಿವೃದ್ಧಿಗಾಗಿ 10 ಕೋಟಿ ರೂ. ನೀಡಲಾಗುತ್ತಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳ ಸಂಖ್ಯಾಬಲವನ್ನು ಶೇ.20 ಹೆಚ್ಚಿಸಲಾಗಿರುವುದರಿಂದ ಈ ವಿದ್ಯಾರ್ಥಿ ನಿಲಯಗಳ ನಿರ್ವಹಣೆಗೆ 9.26 ಕೋಟಿ ರೂ., ಹಿಂದುಳಿದ ವರ್ಗಗಳ ವಸತಿ ಶಾಲೆ ನಿರ್ವಣಕ್ಕೆ ಹೆಚ್ಚುವರಿಯಾಗಿ 23.23 ಕೋಟಿ ರೂ., ಐದು ವಸತಿ ಶಾಲೆಗಳ ಕಟ್ಟಡ ನಿರ್ವಣಕ್ಕೆ ಹೆಚ್ಚುವರಿಯಾಗಿ 16.77 ಕೋಟಿ ರೂ. ಒದಗಿಸಲಾಗಿದೆ.
ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜನೆಗೆ 3 ಕೋಟಿ ರೂ., ಸರ್ಕಾರಿ ನೌಕರರ ಸಂಘದ ಕ್ರೀಡಾಕೂಟಕ್ಕೆ 1ಕೋಟಿ ರೂ., ಪ್ರಗತಿಯಲ್ಲಿರುವ ಮನೆಗಳನ್ನು ಪೂರ್ಣಗೊಳಿಸಲು ಅಂಬೇಡ್ಕರ್ ನಿವಾಸ್ ಯೋಜನೆಯಡಿ ಪರಿಶಿಷ್ಟ ಜಾತಿ ಉಪ ಯೋಜನೆಯಡಿ 103.59 ಕೋಟಿ ರೂ., ಗಿರಿಜನ ಉಪ ಯೋಜನೆಯಡಿ 51.18 ಕೋಟಿ ರೂ. ಮೆ. ನಿರಾಣಿ ಸಕ್ಕರೆ ಕಾರ್ಖಾನೆ 2014-15ನೇ ಸಾಲಿನ ಕಬ್ಬು ಖರೀದಿ ತೆರಿಗೆ ಬಾಕಿಯನ್ನು ಬಡ್ಡಿ ರಹಿತವಾಗಿ ಸಾಲವಾಗಿ ಪರಿಗಣಿಸಲು 6.78 ಕೋಟಿ ರೂ. ಒದಗಿಸಲಾಗಿದೆ.
ಹುಬ್ಬಳ್ಳಿ -ಧಾರವಾಡ ತ್ವರಿತ ಬಸ್ ಸೇವೆ ಯೋಜನೆಯ ಕಾರ್ಯಾಚರಣೆಯಿಂದ ಉಂಟಾಗುತ್ತಿರುವ ನಗದು ನಷ್ಟದ ವೆಚ್ಚವನ್ನು ಭರಿಸಲು ಹೆಚ್ಚುವರಿಯಾಗಿ 15.00 ಕೋಟಿ ರೂ., ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಬಾಕಿ ಬಿಲ್ಲುಗಳ ಪಾವತಿಗಾಗಿ 250 ಕೋಟಿ ರೂ. ಹೆಚ್ಚುವರಿ ಅನುದಾನ ಒದಗಿಸಿದರೆ, ಜಿಲ್ಲಾ ಮತ್ತು ಇತರ ರಸ್ತೆಗಳ ಸುಧಾರಣೆಗಳಡಿ ಬಾಕಿ ಬಿಲ್ಲುಗಳ ಪಾವತಿಗಾಗಿ 250 ಕೋಟಿ ರೂ. ಒದಗಿಸಲಾಗುತ್ತಿದೆ. ವಿಶ್ವೇಶ್ವರಯ್ಯ ಜಲ ನಿಗಮದ ವಿವಿಧ ಕಾಮಗಾರಿಗಳಿಗೆ ಮತ್ತು ಭೂಸ್ವಾಧೀನ ವೆಚ್ಚ ಪಾವತಿ ಮಾಡಲು 500 ಕೋಟಿ ರೂ., ಪ್ರವಾಹಪೀಡಿತ ಪ್ರದೇಶಗಳಲ್ಲಿನ ಮೂಲಸೌಕರ್ಯ ಮರುನಿರ್ವಣ, ದುರಸ್ತಿಗಾಗಿ ಬೇರೆ ಬೇರೆ ಶೀರ್ಷಿಕೆಯಲ್ಲಿ ಒಂದಷ್ಟು ಹಣ ಬಳಸಲು ಅವಕಾಶ ನೀಡಲಾಗಿದೆ. ವಿದ್ಯುತ್ ಕಂಪನಿಗಳು ತಮ್ಮ ವಿದ್ಯುತ್ ಖರೀದಿ ಬಾಕಿ ಪಾವತಿಸಲು 250 ಕೋಟಿ ರೂ. ಸಾಲವಾಗಿ ಒದಗಿಸಲಾಗುತ್ತಿದೆ.
1) ವಿಧಾನಸಭೆ, ವಿಧಾನಪರಿಷತ್ ಸದಸ್ಯರ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಯ ಅನುಮೋದಿತ ಕ್ರಿಯಾ ಯೋಜನೆ ಕಾಮಗಾರಿಗಳ ಅನುಷ್ಠಾನಕ್ಕೆ ಹೆಚ್ಚುವರಿಯಾಗಿ 277.5 ಕೋಟಿ ರೂ.
2) ಉಚ್ಚ ನ್ಯಾಯಾಲಯ ನ್ಯಾಯಾಧೀಶರ ವೈದ್ಯಕೀಯ ವೆಚ್ಚ ಮರುಪಾವತಿಗೆ 1.07 ಕೋಟಿ ರೂ., ನ್ಯಾಯಾಧೀಶರ ಉಪಯೋಗಕ್ಕೆ 7 ಹೊಸ ವಾಹನ ಖರೀದಿಸಲು 1.47 ಕೋಟಿ ರೂ.. ನ್ಯಾಯಾಲಯದ ಅಧಿಕಾರಿ, ಸಿಬ್ಬಂದಿ ತರಬೇತಿ, ದೂರವಾಣಿ ವೆಚ್ಚಕ್ಕೆಂದು 25 ಲಕ್ಷ ರೂ.
3) ಜಿಲ್ಲಾ ಮತ್ತು ತಾಲೂಕು ನ್ಯಾಯಾಂಗ ಅಧಿಕಾರಿಗಳ ಪ್ರಯಾಣ ಭತ್ಯೆಗೆ 30 ಲಕ್ಷ ರೂ., ಜಿಲ್ಲಾ ಮತ್ತು ತಾಲೂಕು ನ್ಯಾಯಾಂಗ ಅಧಿಕಾರಿಗಳಿಗೆ ಎಸ್ಸಿಸಿ ವೆಬ್ ಎಡಿಷನ್, ಹೋಂ ಆರ್ಡಲಿ, ಪ್ರತಿಕೆ ಬಿಲ್ಲು, ಲಾ ಬುಕ್ ಜರ್ನಲ್ಸ್ ಪಾವತಿಗೆ 4.44 ಕೋಟಿ ರೂ.
4) ವಿಧಾನಸಭೆ ಅಧ್ಯಕ್ಷರ ವೇತನ ಪಾವತಿಸಲು ಹೆಚ್ಚುವರಿಯಾಗಿ 7.70 ಲಕ್ಷ ರೂ., ಉಪಾಧ್ಯಕ್ಷರ ವೇತನ ಪಾವತಿಗೆ 6.50 ಲಕ್ಷ ರೂ., ಪ್ರತಿಪಕ್ಷ ನಾಯಕರಿಗೆ ವೇತನ ಪಾವತಿಗೆ 6.50 ಲಕ್ಷ ರೂ., ವಿರೋಧ ಪಕ್ಷದ ನಾಯಕ ಪ್ರಯಾಣ ವೆಚ್ಚ ಬಾಕಿ ಬಿಲ್ಲುಗಳನ್ನು ಪಾವತಿ ಮಾಡಲು 16.42 ಲಕ್ಷ ರೂ., ವಿಧಾನಸಭೆ ಸಿಬ್ಬಂದಿಗೆ ಸಮವಸ್ತ್ರ ಖರೀದಿಸಲು 40 ಲಕ್ಷ ರೂ..
ತಾರತಮ್ಯ ಸರಿಪಡಿಸುತ್ತೇನೆ
ಕೆಲವು ಯೋಜನೆಯ ಅನುದಾನ ಹಂಚಿಕೆ ವಿಚಾರ ದಲ್ಲಿ ಜೆಡಿಎಸ್ ಮಾತ್ರವಲ್ಲ, ಬಿಜೆಪಿ ಶಾಸಕರಿಗೂ ಅಸಮಾಧಾನವಿದೆ. ಈ ತಾರತಮ್ಯ ಸರಿಪಡಿಸುತ್ತೇನೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು. ವಿಧಾನಸಭೆ ಯಲ್ಲಿ ನಿಯಮ 69ರಡಿ ಜೆಡಿಎಸ್ನ ಎಚ್.ಡಿ.ರೇವಣ್ಣ, ಶಿವಲಿಂಗೇಗೌಡ ಮತ್ತಿತರರು ಕೇಳಿದ ಪ್ರಶ್ನೆಗೆ ಉತ್ತರಿಸಿದರು. ನಗರೋತ್ಥಾನ ಸೇರಿ ವಿವಿಧ ಯೋಜನೆಯಡಿ ಅನುದಾನ ಹಂಚಿಕೆ ವಿಚಾರದಲ್ಲಿ ಹಲವು ವ್ಯತ್ಯಾಸಗಳಿಗಿರೋದು ನಿಜ. ನಾವು ಅಧಿಕಾರ ವಹಿಸಿಕೊಂಡ ನಂತರ ಕೆಲವು ಆರ್ಥಿಕ ತೊಂದರೆಗಳಾಗಿವೆ. ತಾರತಮ್ಯ ಸರಿಪಡಿಸುತ್ತೇನೆ ಎಂದರು.