

ಕೋಲಾರ: ಟಿಡಿಪಿ ಕಾರ್ಯಕರ್ತನ ಕೊಲೆಗೆ ಯತ್ನ ಮಾಡಿದ ಆರೋಪದಡಿ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯ ಪೇದೆ ವಿನಾಯಕನನ್ನು ಆಂಧ್ರದ ಚಿತ್ತೂರು ಜಿಲ್ಲೆಯ ಗಂಗಾವರಂ ಪೊಲೀಸರು ಬಂಧಿಸಿದ್ದಾರೆ.
ಆಂಧ್ರ್ರಪ್ರದೇಶದ ಟಿಡಿಪಿ ಶಾಸಕನ ಬೆಂಬಲಿಗ ರುಚಂದ್ರಗುಪ್ತ ಅವರಿಗೆ ರಾಜಕೀಯ ಮತ್ತು ವ್ಯವಹಾರ ಸಂಬಂಧ ಕೆಲವರೊಂದಿಗೆ ಭಿನ್ನಾಭಿಪ್ರಾಯಗಳಿದ್ದವು. ರುಚಂದ್ರಗುಪ್ತ ಅವರನ್ನು ಕೊಲೆ ಮಾಡಲು ಪೇದೆ ವಿನಾಯಕ ಸುಪಾರಿ ಪಡೆದುಕೊಂಡಿದ್ದ ಎನ್ನಲಾಗಿದೆ.
ಟನೆ ಏನು?
ಕೊಲೆ ಮಾಡುವ ಉದ್ದೇಶದಿಂದ ಅಪಘಾತ ಮಾಡಿಸಲು ಈಚ್ಚರ್ ವಾಹನದ ಚಾಲಕನಿಗೆ ವಿನಾಯಕ ಹೇಳಿದ್ದ. ಆ ಪ್ರಕಾರ ವಾಹನ ಚಾಲಕ ಚಿತ್ತೂರು ಜಿಲ್ಲೆಯ ಗಂಗಾವರಂ ಠಾಣೆ ವ್ಯಾಪ್ತಿಯ ಸಿಮೆಂಟ್ ಬ್ರಿಕ್ಸ್ ಫ್ಯಾಕ್ಟರಿ ಸಮೀಪ ರಘುಚಂದ್ರ ಗುಪ್ತ ಅವರು ಕಾರಿನಲ್ಲಿ ಹೋಗುತ್ತಿದ್ದಾಗ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದಾಗಲೂ ಮೃತಪಡದಿದ್ದಾಗ ಪುನಃ ರಿವರ್ಸ್ ಬಂದು ಡಿಕ್ಕಿ ಹೊಡೆಯಲು ಯತ್ನಿಸಿದಾಗ ರುಚಂದ್ರಗುಪ್ತ ಕಾರಿನಿಂದ ಇಳಿದು ತಪ್ಪಿಸಿಕೊಂಡು ಪ್ರಾಣಪಾಯದಿಂದ ಪಾರಾಗಿದ್ದಾರೆ. ಕೂಡಲೇ ವಾಹನ ನಂಬರ್ ಆಧರಿಸಿ ರುಚಂದ್ರಗುಪ್ತ ಅವರು ಗಂಗಾವರಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಗಂಗವರಂ ಠಾಣೆ ಪೊಲೀಸರು ಆ.20ರಂದು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಆ.21ರಂದು ಸಂಜೆ ಕೋಲಾರಕ್ಕೆ ಆಗಮಿಸಿರುವ ಪೊಲೀಸರು ವಿನಾಯಕನನ್ನು ಬಂಧಿಸಿದ್ದು, ಆಂಧ್ರ ಪೊಲೀಸರ ಅತಿಥಿಯಾಗಿದ್ದಾನೆ.
ವಿನಾಯಕ ಹಿಂದೆ ಜಿಲ್ಲೆಯ ಮುಳಬಾಗಿಲಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಆಂಧ್ರ ಮೂಲದವರೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದ, ಇತ್ತೀಚಿಗೆ ಕೋಲಾರ ಗ್ರಾಮಾಂತರ ಠಾಣೆಗೆ ವರ್ಗಾವಣೆ ಆಗಿದ್ದ. ಆದರೂ ಜಿಲ್ಲಾ ಅಪರಾಧ ತಂಡದಲ್ಲಿ ಕೆಲಸ ಮಾಡುತ್ತಿದ್ದ ವಿನಾಯಕ ಕೊಲೆ ಮಾಡಲು, ಎಸ್ಪಿ ಕಚೇರಿಯ ಮತ್ತೋರ್ವ ಸಿಬ್ಬಂದಿಯಿಂದಲೇ ರಘುಚಂದ್ರ ಗುಪ್ತ ಅವರ ಮೊಬೈಲ್ನ ಲೈವ್ ಲೋಕೇಷನ್ ನೋಡಲು ಸಹಾಯ ಪಡೆದಿದ್ದ ಎಂಬ ಶಂಕೆ ವ್ಯಕ್ತವಾಗಿದೆ.
ಕೊಲೆಗೆ ಯತ್ನ, ಸುಪಾರಿ ನೀಡಿದ್ದ ವಿನಾಯಕ್ ವಿರುದ್ಧ ಗಂಗಾವರಂ ಠಾಣೆಯಲ್ಲಿ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ 2 ದಿನದ ಹಿಂದೆಯೆ ಗಂಗಾವರಂ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಕೋಲಾರ ಪೊಲೀಸ್ ಮೂಲಗಳು ತಿಳಿಸಿವೆ.