ಭಾರತ ಕಿರಿಯರ ಹಾಕಿ ತಂಡಕ್ಕೆ ಸುನಿಲ್ ಆಯ್ಕೆ

Sunil hockey
ಪಿ.ಬಿ.ಸುನಿಲ್
Published on

ಸೊರಬ: ಯಾವುದೇ ಕ್ರೀಡೆಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವುದು ಹೆಮ್ಮೆಯ ಸಂಗತಿ. ಜತೆಗೆ ಗ್ರಾಮೀಣ ಪ್ರತಿಭೆ ಅಂತಾರಾಷ್ಟ್ರೀಯ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸುವುದೆಂದರೆ ಎಲ್ಲಿಲ್ಲದ ಸಂಭ್ರಮ. ಅದರಲ್ಲೂ ರಾಷ್ಟ್ರೀಯ ಕ್ರೀಡೆ ಹಾಕಿಯಲ್ಲಿ ರಾಷ್ಟ್ರದ ತಂಡದ ಭಾಗವಾಗುವುದು ಗರ್ವ ಸಂಕೇತ.

ಹೌದು. ಇಂತಹ ಒಂದು ಅವಕಾಶ ಸೊರಬ ತಾಲೂಕು ತಲ್ಲೂರು ಗ್ರಾಮದ 20ರ ಹರೆಯದ ಪಿ.ಬಿ.ಸುನಿಲ್‌ಗೆ ದೊರಕಿದೆ. ನಾಲ್ಕು ರಾಷ್ಟ್ರಗಳ ಕಿರಿಯರ ಹಾಕಿ ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.

ದಿನಗೂಲಿ ರೈತ ಕುಟುಂಬದಲ್ಲಿ ಜನಿಸಿದ ಸುನಿಲ್, ಬಡತನ ಮತ್ತು ಕಷ್ಟದ ನಡುವೆಯೂ ಸತತ ಪ್ರಯತ್ನದಿಂದ ಯಶಸ್ಸು ಕಂಡಿದ್ದಾರೆ. ಜೂ.21ರಿಂದ 25ರವರೆಗೆ ಬರ್ಲಿನ್‌ನಲ್ಲಿ ನಡೆಯುವ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ಪ್ರಯಾಣ ಬೆಳೆಸಿದ್ದಾರೆ. ಸುನಿಲ್ ಕನಸು, ಪ್ರಯತ್ನಕ್ಕೆ ತಂದೆ ಪಾಲಾಕ್ಷಪ್ಪ, ತಾಯಿ ರತ್ನಮ್ಮ, ಅಣ್ಣ ಸುದೀಪ್, ಕೋಚ್ ಸುಂದರೇಶ್ ನೀರೆರೆದಿದ್ದಾರೆ.

ಸುನಿಲ್ 2016-17ರಲ್ಲಿ ಶಿವಮೊಗ್ಗ ಕ್ರೀಡಾ ವಸತಿ ನಿಲಯಕ್ಕೆ ಸೇರಿ, ಆರನೇ ತರಗತಿಗೆ ಸರ್ವೋದಯ ಶಾಲೆಗೆ ದಾಖಲಾಗಿದ್ದರು. ಬಳಿಕ ಡಿವಿಎಸ್ ಪ್ರೌಢಶಾಲೆಗೆ ಸೇರಿದರು. ಅಲ್ಲಿಂದ ಕೊಡಗಿನ ಕ್ರೀಡಾ ವಸತಿ ನಿಲಯದಲ್ಲಿ ಪಿಯುಸಿ ಮುಗಿಸಿ ಬೆಂಗಳೂರಿನ ಸ್ಪೋರ್ಟ್ಸ್ ಅಥಾರಿಟಿ ಆ್ ಇಂಡಿಯಾ ಹಾಸ್ಟೆಲ್ ಸೇರಿಕೊಂಡಿದ್ದರು. ಇದೀಗ ಬರ್ಲಿನ್‌ನಲ್ಲಿ ನಡೆಯುವ ಅಂತಾರಾಷ್ಟ್ರೀಯ ಹಾಕಿ ಪಂದ್ಯಾವಳಿಯಲ್ಲಿ ಪಾಲ್ಗೊಳಲ್ಲಿದ್ದಾರೆ.

2023ರಲ್ಲಿ ಸುನಿಲ್ ಕರ್ನಾಟಕ ಜೂನಿಯರ್ ತಂಡಕ್ಕೆ ಆಯ್ಕೆಯಾದರು. 2024ರಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದರು. ಇದೇ ವರ್ಷ ಜಲಂಧರ್‌ನಲ್ಲಿ ನಡೆದ ಜೂನಿಯರ್ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸಿ ನಾಲ್ಕನೇ ಸ್ಥಾನಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈಗ ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ ದೇಶವನ್ನು ಪ್ರತಿನಿಧಿಸಲು ಸಿದ್ಧರಾಗಿದ್ದಾರೆ. ಡಿೆಂಡರ್ ಆಗಿರುವ ಸುನಿಲ್ ಈಗಾಗಲೇ ತಮ್ಮ ಸಾಮರ್ಥ್ಯವನ್ನು ಹಲವು ಪಂದ್ಯಾವಳಿಗಳಲ್ಲಿ ಸಾಬೀತುಪಡಿಸಿದ್ದಾರೆ.

ಹಾಕಿ ಕ್ರೀಡೆಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿದ್ದು ಸಂತಸ ತಂದಿದೆ. ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವ ವಿಶ್ವಾಸ ನನಗಿದೆ. ನನ್ನ ಸಾಧನೆಗೆ ಪ್ರೇರಣೆ ನೀಡಿದ ನನ್ನ ಪಾಲಕರು, ಸಹೋದರ ಹಾಗೂ ತರಬೇತುದಾರರನ್ನು ಎಂದಿಗೂ ಮರೆಯಲಾಗದು ಎನ್ನುತ್ತಾರೆ ಹಾಕಿ ಪಟು ಪಿ.ಬಿ.ಸುನಿಲ್.

ಹಾಕಿ ಪಟು, ತಲ್ಲೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net