ಸುನಕ್​ಗೆ ಸೋಲು, ಲಿಜ್ ಟ್ರಸ್ ಬ್ರಿಟನ್ ಪ್ರಧಾನಿ: ಇಂದು ಅಧಿಕಾರ ಸ್ವೀಕಾರ; ಭಾರತೀಯ ಮೂಲದ ರಿಷಿಗೆ ಒಲಿಯದ ಪಟ್ಟ

Liz
Published on

ಲಂಡನ್: ಬ್ರಿಟನ್ನಿನ ವಿದೇಶಾಂಗ ಸಚಿವೆ ಲಿಜ್ ಟ್ರಸ್ ಅವರು ಭಾರತೀಯ ಮೂಲದ ರಿಷಿ ಸುನಕ್ ಅವರನ್ನು ‘ಟೋರಿ ಲೀಡರ್​ಶಿಪ್ ಸ್ಪರ್ಧೆ’ಯ ಅಂತಿಮ ಸುತ್ತಿನಲ್ಲಿ ಸೋಲಿಸಿದ್ದಾರೆ. ಈ ಮೂಲಕ ಲಿಜ್ ಅವರು ಬ್ರಿಟನ್ನಿನ ಪ್ರಧಾನಿಯಾಗಿ ಮಂಗಳವಾರ ಅಧಿಕಾರ ಸ್ವೀಕರಿಸಲಿದ್ದಾರೆ.

ಬೋರಿಸ್ ಜಾನ್ಸನ್ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ, ಬ್ರಿಟನ್ ಸಂಸತ್ತಿನಲ್ಲಿ ಬಹುಮತ ಇರುವ ಕನ್ಸರ್ವೆಟಿವ್ ಪಕ್ಷದ ನಾಯಕನ ಆಯ್ಕೆಗಾಗಿ ಅಂತಿಮ ಸುತ್ತಿನಲ್ಲಿ ಕನ್ಸರ್ವೆಟಿವ್ ಪಕ್ಷದ ಅಂದಾಜು 1,60,000 ಸದಸ್ಯರು ಆನ್​ಲೈನ್ ಮತ್ತು ಅಂಚೆ ಮೂಲಕ ಮತದಾನ ಮಾಡಿದರು. ಇದರಲ್ಲಿ ಲಿಜ್ ಟ್ರಸ್ 81,326 ಮತಗಳನ್ನು ಪಡೆದರೆ, ರಿಷಿ ಸುನಕ್​ಗೆ 60,399 ಮತಗಳು ದೊರೆತಿವೆ. ಚುನಾವಣಾಧಿಕಾರಿ ಸರ್ ಗ್ರಹಾಂ ಬ್ರಾಡಿ ಫಲಿತಾಂಶ ಪ್ರಕಟಿಸಿದರು. 47 ವರ್ಷದ ಲಿಜ್ ಅವರು ಮಾರ್ಗರೇಟ್ ಥ್ಯಾಚರ್ ಹಾಗೂ ತೆರೆಸಾ ಮೇ ಅವರ ನಂತರ ಬ್ರಿಟನ್ನಿನ ಮೂರನೇ ಮಹಿಳಾ ಪ್ರಧಾನಿಯಾಗಲಿದ್ದಾರೆ.

ಟೋರಿ ಲೀಡರ್​ಶಿಪ್ ಹಣಾಹಣಿ: ಬ್ರಿಟನ್​ನಲ್ಲಿ ಪ್ರಮುಖವಾಗಿ ಎರಡು ಪಕ್ಷಗಳಿವೆ. ಒಂದು ಕನ್ಸರ್ವೆಟಿವ್, ಇನ್ನೊಂದು ಎಡಪಂಥೀಯ ಧೋರಣೆಯ ಲೇಬರ್ ಪಾರ್ಟಿ. ಇದಲ್ಲದೆ, ಸ್ಕಾಟಿಷ್ ನ್ಯಾಷನಲ್ ಪಾರ್ಟಿ, ಲಿಬರಲ್ ಡೆಮಾಕ್ರಾಟ್ಸ್ ಎಂಬ ಪಕ್ಷಗಳೂ ಇವೆ. ಬ್ರಿಟನ್ ಸಂಸತ್​ನ ಒಟ್ಟು ಸದಸ್ಯರ ಸಂಖ್ಯೆ 650. ಇದರಲ್ಲಿ 358 ಸದಸ್ಯರ ಬಹುಮತದೊಂದಿಗೆ ಕನ್ಸರ್ವೆಟಿವ್ ಪಕ್ಷ ಅಧಿಕಾರದಲ್ಲಿದೆ. ಕನ್ಸ ರ್ವೆಟಿವ್ ಪಕ್ಷವನ್ನು ಟೋರಿ ಪಕ್ಷ ಎಂದೂ ಕರೆಯಲಾಗುತ್ತದೆ.

ಹಲವಾರು ಹಗರಣಗಳ ಹಿನ್ನೆಲೆಯಲ್ಲಿ ಪ್ರಧಾನಿಯಾಗಿದ್ದ ಕನ್ಸರ್ವೆಟಿವ್ ಪಕ್ಷದ ಬೋರಿಸ್ ಜಾನ್ಸನ್ ವಿರುದ್ಧ ಬಂಡಾಯ ಆರಂಭವಾಯಿತು. ಅನೇಕ ಸಚಿವರು ರಾಜೀನಾಮೆ ನೀಡಿದರು. ಹೀಗಾಗಿ, ಜಾನ್ಸನ್ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಈ ಪಕ್ಷದ ಹೊಸ ನಾಯಕನ ಆಯ್ಕೆ ನಡೆಯಿತು. ಇಲ್ಲಿ ನಾಯಕರಾಗಿ ಆಯ್ಕೆಯಾಗುವವರೇ ನೂತನ ಪ್ರಧಾನಿ ಕೂಡ ಆಗುತ್ತಾರೆ. ಹೀಗೆ ನಾಯಕನನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನೇ ‘ಟೋರಿ ಲೀಡರ್​ಶಿಪ್ ಕಂಟೆಸ್ಟ್’ (ಟೋರಿ ಪಕ್ಷದ ನಾಯಕತ್ವ ಸ್ಪರ್ಧೆ) ಎಂದು ಕರೆಯಲಾಗುತ್ತದೆ.

ಮೊದಲ ಸುತ್ತಿನ ಸ್ಪರ್ಧೆ ಆರಂಭವಾದಾಗ ಪ್ರಧಾನಿ ಪಟ್ಟದ ರೇಸ್​ನಲ್ಲಿ 11 ಜನರು ಇದ್ದರು. ಈ ಸುತ್ತಿನಲ್ಲಿ ರಿಷಿ 88 ಮತ ಗಳಿಸಿ ಮುಂಚೂಣಿಯಲ್ಲಿದ್ದರು. ಎರಡನೇ ಸುತ್ತಿನಲ್ಲಿ 101, ಮೂರನೇ ಸುತ್ತಿನಲ್ಲಿ 115, ನಾಲ್ಕನೇ ಸುತ್ತಿನಲ್ಲಿ 118, 5ನೇ ಸುತ್ತಿನಲ್ಲಿ 137 ಮತಗಳನ್ನು ಪಡೆದು ರಿಷಿ ಸುನಕ್ ಜಯ ದಾಖಲಿಸಿದ್ದರು. 5ನೇ ಸುತ್ತಿನಲ್ಲಿ 113 ಮತಗಳನ್ನು ಪಡೆದ ಲಿಜ್ ಟ್ರಸ್ ಹಾಗೂ ರಿಷಿ ಸುನಕ್ ಅಂತಿಮವಾಗಿ ಪ್ರಧಾನಿ ರೇಸ್​ನಲ್ಲಿ ಉಳಿದುಕೊಂಡಿದ್ದರು. ಈ ಎಲ್ಲ ಐದು ಸುತ್ತುಗಳಲ್ಲಿ ಕನ್ಸರ್ವೆಟಿವ್ ಪಕ್ಷದ ಸಂಸದರು ಮತದಾನ ಮಾಡಿದ್ದರು. ಅಂತಿಮ ಸುತ್ತಿನಲ್ಲಿ ಪಕ್ಷದ ಸುಮಾರು 1,60,000 ಸದಸ್ಯರು ಮತದಾನದಲ್ಲಿ ಪಾಲ್ಗೊಂಡಿದ್ದರು.

ಸ್ಕಾಟ್ಲೆಂಡ್​ನಲ್ಲಿ ರಾಣಿಯಿಂದ ನೇಮಕ: ಬೋರಿಸ್ ಜಾನ್ಸನ್ ಅವರು ಸೆ.6ರಂದು ಸ್ಕಾಟ್ಲೆಂಡ್​ಗೆ ತೆರಳಿ ರಾಣಿಗೆ ರಾಜೀನಾಮೆ ಹಸ್ತಾಂತರಿಸುವ ಮೊದಲು ಮಂಗಳವಾರ ಬೆಳಗ್ಗೆ 10 ಡೌನಿಂಗ್ ಸ್ಟ್ರೀಟ್​ನ ಹೊರಗೆ ವಿದಾಯ ಭಾಷಣ ಮಾಡುವ ನಿರೀಕ್ಷೆಯಿದೆ. ನೂತನ ಪ್ರಧಾನಿ ಲಿಜ್ ಟ್ರಸ್ ಸಹ ಸ್ಕಾಟ್ಲೆಂಡ್​ನ ಬಾಲ್ಮೋರಲ್ ಕ್ಯಾಸಲ್​ಗೆ

ಪ್ರಯಾಣಿಸಲಿದ್ದಾರೆ. ಅಲ್ಲಿ ರಾಣಿ ಎಲಿಜಬೆತ್ ಬೇಸಿಗೆ ದಿನಗಳನ್ನು ಕಳೆಯುತ್ತಿದ್ದಾರೆ. ಅಲ್ಲಿಯೇ ರಾಣಿ ಹೊಸ ಪ್ರಧಾನಿಯನ್ನು ನೇಮಿಸುತ್ತಾರೆ. ಸಾಮಾನ್ಯವಾಗಿ ಲಂಡನ್​ನ ಬಕಿಂಗ್​ಹ್ಯಾಮ್ ಅರಮನೆಯಲ್ಲಿ ಈ ಸಮಾರಂಭ ನಡೆಯುತ್ತದೆ. ಆದರೆ, ಸಮಾರಂಭಕ್ಕೆ ರಾಜಧಾನಿಗೆ ತೆರಳಲು ರಾಣಿಗೆ ಸಾಧ್ಯವಾಗದ ಕಾರಣ ಸ್ಕಾಟ್ಲೆಂಡ್​ನಲ್ಲೇ ಈ ಬಾರಿ ಈ ಪ್ರಕ್ರಿಯೆ ನಡೆಯುತ್ತದೆ. ನಂತರ ಹೊಸ ಪ್ರಧಾನಿ ಲಂಡನ್​ಗೆ ಹಿಂದಿರುಗಿ 10 ಡೌನಿಂಗ್ ಸ್ಟ್ರೀಟ್​ನ ಹೊರಗೆ ಭಾಷಣ ಮಾಡುತ್ತಾರೆ. ಭಾರತೀಯ ಕಾಲಮಾನದ ಪ್ರಕಾರ ಮಂಗಳವಾರ ಸಂಜೆ ಇದು ನಡೆಯಬಹುದಾಗಿದೆ. ನಂತರ ಸಚಿವ ಸಂಪುಟದ ಸದಸ್ಯರನ್ನು ನೇಮಕ ಮಾಡುತ್ತಾರೆ.

ನಿಮ್ಮ (ಲಿಜ್ ಟ್ರಸ್) ನಾಯಕತ್ವದಲ್ಲಿ ಭಾರತ ಹಾಗೂ ಇಂಗ್ಲೆಂಡಿನ ಸಮಗ್ರ ಕಾರ್ಯ ತಂತ್ರದ ಸಹಭಾಗಿತ್ವವು ಇನ್ನಷ್ಟು ಬಲಯುತ ವಾಗಲಿದೆ ಎಂಬ ವಿಶ್ವಾಸವಿದೆ. ನಿಮ್ಮ ಹೊಸ ಪಾತ್ರ ಹಾಗೂ ಜವಾಬ್ದಾರಿಗಳಿಗೆ ಶುಭ ಹಾರೈಸುತ್ತೇನೆ. | ನರೇಂದ್ರ ಮೋದಿ ಪ್ರಧಾನಿ ನಮ್ಮ ಮಹಾನ್ ದೇಶವನ್ನು ಮುನ್ನಡೆಸಲು ಹಾಗೂ ಅದಕ್ಕಾಗಿ ಕೆಲಸ ಮಾಡಲು ನನ್ನಲ್ಲಿ ನಂಬಿಕೆ ವ್ಯಕ್ತಪಡಿಸಿದ್ದಕ್ಕಾಗಿ ಧನ್ಯವಾದಗಳು. ಈ ಸಂಕಷ್ಟದ ಸಮಯದಿಂದ ಸಾಗಲು, ನಮ್ಮ ಆರ್ಥಿಕತೆಯನ್ನು ಬೆಳೆಸಲು, ಬ್ರಿಟನ್ನಿನ ಸಾಮರ್ಥ್ಯವನ್ನು ಹೊರತರಲು ನಾನು ಶ್ರಮಿಸುತ್ತೇನೆ. | ಲಿಜ್ ಟ್ರಸ್ ನಿಯೋಜಿತ ಪ್ರಧಾನಿ

  • ಮೊದಲ ಐದು ಸುತ್ತುಗಳಲ್ಲಿ ರಿಷಿ ಸುನಕ್​ಗೆ ಗೆಲುವು
  • ಕೊನೆಯ ಸುತ್ತಿನಲ್ಲಿ ಮಾತ್ರ ಗೆದ್ದು ಪ್ರಧಾನಿ ಹುದ್ದೆಗೇರಿದ ಲಿಜ್ ಟ್ರಸ್
  • ಮೊದಲ 5 ಸುತ್ತುಗಳಲ್ಲಿ ಕನ್ಸರ್ವೆಟಿವ್ ಪಕ್ಷದ ಸಂಸದರು ಮತ ಚಲಾಯಿಸಿದರೆ, ಕೊನೆಯ ಸುತ್ತಿನಲ್ಲಿ ಕನ್ಸರ್ವೆಟಿವ್ ಪಕ್ಷದ ಸದಸ್ಯದಿಂದ ಮತದಾನ
  • ಲಿಜ್​ಗೆ 81,326 ಹಾಗೂ ರಿಷಿಗೆ 60,399 ಮತಗಳು

ನನಸಾಗದ ಸುನಕ್ ಕನಸು

ರಿಷಿ ಸುನಕ್ ಅವರು ಸೌಂತಪ್ಟಾನ್​ನಲ್ಲಿ 1980ರಲ್ಲಿ ಜನಿಸಿದರು. ಪೂರ್ವ ಆಫ್ರಿ ಕಾದಿಂದ ಇಂಗ್ಲೆಂಡ್​ಗೆ ವಲಸೆ ಬಂದ ಭಾರತೀಯ ಮೂಲದ ದಂಪತಿಯ ಪುತ್ರ ರಿಷಿ. ಅಮೆರಿಕದ ಸ್ಟಾ್ಯನ್​ಫರ್ಡ್ ವಿಶ್ವವಿದ್ಯಾಲಯದಲ್ಲಿ ಎಂಬಿಎ ಮಾಡುವಾಗ ಇನ್ಪೋಸಿಸ್ ಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಅವರ ಪುತ್ರಿ ಅಕ್ಷತಾರನ್ನು ಭೇಟಿ ಮಾಡಿ, ನಂತರ ಮದುವೆಯಾದರು. ಅನೇಕ ಹೂಡಿಕೆ ಕಂಪನಿಗಳಲ್ಲಿ ಕೆಲಸ ಮಾಡುವ ಮೂಲಕ ಕೋಟ್ಯಧೀಶರಾದರು. ರಿಚ್ಮಂಡ್ ಕ್ಷೇತ್ರದಿಂದ ಕನ್ಸರ್ವೆಟಿವ್ ಪಕ್ಷದ ಸಂಸದರಾಗಿ 2015ರಲ್ಲಿ ಆಯ್ಕೆಯಾದರು. 2017ರಲ್ಲಿ ಸಂಸದರಾಗಿ ಪುನರಾಯ್ಕೆಯಾಗಿ, ಅಂದಿನ ಪ್ರಧಾನಿ ತೆರೆಸಾ ಮೇ ಅವರ ಸಂಪುಟದಲ್ಲಿ ಕಿರಿಯ ಸಚಿವರಾದರು. 2020ರಲ್ಲಿ ಖಜಾನೆಯ ಚಾನ್ಸಲರ್ ಆಗಿ ನೇಮಕಗೊಂಡರು. ಬೋರಿಸ್ ಜಾನ್ಸನ್ ಅವರ ಹಗರಣಗಳನ್ನು ವಿರೋಧಿಸಿ ಪ್ರತಿಭಟನೆಗಳು ಆರಂಭವಾದಾಗ ರಿಷಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಪ್ರಧಾನಿ ಸ್ಥಾನದ ರೇಸ್​ನಲ್ಲಿ ಮೊದಲ 5 ಸುತ್ತಿನಲ್ಲಿ ಜಯ ಗಳಿಸಿದರೂ, ಅಂತಿಮ ಸುತ್ತಿನಲ್ಲಿ ಸೋಲೊಪ್ಪಿದರು.

ಅನುಭವಿ ಸಚಿವೆ: ಲಿಜ್ ಟ್ರಸ್ ಅವರು ಸದ್ಯ ವಿದೇಶಾಂಗ, ಕಾಮನ್​ವೆಲ್ತ್ ಮತ್ತು ಅಭಿವೃದ್ಧಿ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 47 ವರ್ಷದ ಇವರ ಪೂರ್ಣ ಹೆಸರು ಮೇರಿ ಎಲಿಜಬೆತ್ ಟ್ರಸ್. 1975ರ ಜುಲೈ 26ರಂದು ಜನಿಸಿದ ಲಿಜ್ 1996ರಲ್ಲಿ ಪದವೀಧರರಾದ ನಂತರ ಕನ್ಸರ್ವೆಟಿವ್ ಪಕ್ಷಕ್ಕೆ ಸೇರ್ಪಡೆಯಾದರು. 2010ರಿಂದ ನಾಫೋಕ್ ನೈಋತ್ಯ ಕ್ಷೇತ್ರದಿಂದ ಸಂಸದರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಡೇವಿಡ್ ಕ್ಯಾಮರೂನ್, ತೆರೆಸಾ ಮೇ ಹಾಗೂ ಬೋರಿಸ್ ಜಾನ್ಸನ್ ಸಂಪುಟದಲ್ಲಿ ವಿವಿಧ ಸಚಿವ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net