ಮಕ್ಕಳು ಉತ್ತಮರಾಗಲು ತಾಳ್ಮೆ ಬಹಳ ಮುಖ್ಯ; ಶಲವಡಿಮಠ

16-RNR-03
Published on

ರಾಣೆಬೆನ್ನೂರ: ಕಾಡುಕಲ್ಲಾಗಿರುವಂತಹ ವಿದ್ಯಾಥಿರ್ಗಳಿಗೆ ಶಿಲೆಯಾಗುವ ಬಯಕೆಯಿದ್ದರೆ ಕೆತ್ತಿಸಿಕೊಳ್ಳುವ ತಾಳ್ಮೆಯಿರಬೇಕು ಎಂದು ಪ್ರಾಧ್ಯಾಪಕಿ ಡಾ. ಪುಷ್ಪಾವತಿ ಶಲವಡಿಮಠ ಹೇಳಿದರು.

ತಾಲೂಕಿನ ಸುಣಕಲ್ಲಬಿದರಿಯ ಶ್ರೀ ಅರಳಿ ಶಿದ್ಲಿಂಗಪ್ಪ ಬಸಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್​ನ ಆಂತರಿಕ ಗುಣಮಟ್ಟ ಭರವಸಾ ಕೋಶ(ಐ. ಕ್ಯೂಎ.ಸಿ.) ವತಿಯಿಂದ ಸೋಮವಾರ ಆಯೋಜಿಸಿದ್ದ ವಿದ್ಯಾಥಿರ್ಗಳ ವ್ಯಕ್ತಿತ್ವ ವಿಕಸನ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಾಲೇಜ್​ಗಳು ವಿದ್ಯಾಥಿರ್ಗಳಿಗೆ ಕೇವಲ ಅಂಕಪಟ್ಟಿಗಳನ್ನು ಕೊಡುವುದಿಲ್ಲ. ವಿದ್ಯಾಥಿರ್ಗಳ ವ್ಯಕ್ತಿತ್ವದ ವಿಕಸನಕ್ಕೆ ಪೂರಕವಾಗುವ ವಾತಾವರಣವನ್ನೂ ನೀಡುತ್ತವೆ. ವಿದ್ಯಾಥಿರ್ಗಳು ವ್ಯಕ್ತಿತ್ವ ವಿಕಸನಕ್ಕೆ ಒತ್ತುಕೊಟ್ಟಾಗ ತಮ್ಮ ಓದಿಗೆ ವಿಶೇಷ ಮಹತ್ವ ಒದಗುತ್ತದೆ. ನಮ್ಮೊಳಗಿನ ಕೊರತೆಗಳನ್ನು ಮೀರಿ ವಿವೇಚಿಸುವ ಗುಣ ರೂಢಿಸಿಕೊಳ್ಳುವುದರಿಂದ ವ್ಯಕ್ತಿತ್ವದ ವಿಕಸನವಾಗುತ್ತದೆ. ಅವಕಾಶಗಳು ಎಲ್ಲರಿಗೂ ಹುಡುಕಿಕೊಂಡು ಬರುವುದಿಲ್ಲ. ವ್ಯಕ್ತಿತ್ವದ ವಿಕಸನಕ್ಕೆ ಒತ್ತುಕೊಟ್ಟು, ಆ ದಾರಿಯಲ್ಲಿ ನಡೆದವರಿಗೆ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಸಾಮರ್ಥ್ಯ ಬರುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಆರ್​. ಎಫ್​. ಅಯ್ಯನಗೌಡ್ರ ಮಾತನಾಡಿ, ಸೋಲಿಗೆ ಎದೆಗುಂದದೆ, ಹತಾಶೆಗಳಿಗೆ ಕೊರಗದೆ, ಸಾಧನೆಯತ್ತ ಮುಖಮಾಡಬೇಕಾದರೆ ತಾಳ್ಮೆ ಬೇಕಾಗುತ್ತದೆ. ಇದನ್ನು ವ್ಯಕ್ತಿತ್ವದ ವಿಕಸನದಿಂದ ಸಾಧಿಸಬಹುದು ಎಂದರು.

ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಸ್​.ಪಿ. ಗೌಡರ, ಡಾ. ಹನುಮಂತರಾಜು ಎನ್​.ಬಿ., ಅಂಬಿಕಾ ಹೊಸಮನಿ, ಡಾ. ರವಿ ಎಂ., ಡಾ. ನಾಗರಾಜ ಗೋಡಿಹಾಳ, ರವಿಕುಮಾರ ಎಸ್​.ಯು., ಕಚೇರಿ ಮೇಲ್ವಿಚಾರಕ ಸತೀಶ್​ ಎಸ್​.ಎಂ. ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net