

ಶಿವಮೊಗ್ಗ : ಮಕ್ಕಳಲ್ಲಿರುವ ಪ್ರತಿಭೆ ಅನಾವರಣಗೊಳಿಸಿ, ಮನಸ್ಸಿಗೆ ಮುದನೀಡಲು ಬೇಸಿಗೆ ಶಿಬಿರದಂತಹ ಚಟುವಟಿಕೆಗಳು ಅವಶ್ಯಕ. ಮಕ್ಕಳು ಇಂತಹ ಶಿಬಿರಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಬಾಲಭವನ ಸೊಸೈಟಿ ಬೆಂಗಳೂರು, ಜಿಲ್ಲಾ ಬಾಲಭವನ ಸಮಿತಿ ಹಾಗೂ ಜಿಲ್ಲಾಡಳಿತದಿಂದ ಶುಕ್ರವಾರ ಕಾಶಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6ರಿಂದ 16 ವರ್ಷದ ಮಕ್ಕಳಿಗೆ ಆಯೋಜಿಸಿದ್ದ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಲ್ಲಿ ಹುದುಗಿರುವ ಕಲೆ ಹಾಗೂ ಪ್ರತಿಭೆ ಅನಾವರಣಗೊಳಿಸಲು ಇಂತಹ ಚಟುವಟಿಕೆಗಳು ಅವಶ್ಯಕ. ಇಂತಹ ಶಿಬಿರಗಳಿಗೆ ಅನುಕೂಲವಾಗುವಂತೆ 15 ದಿನ ಮಧ್ಯಾಹ್ನದ ಊಟ ವ್ಯವಸ್ಥೆ ಮಾಡುವಂತೆ ಸರ್ಕಾರದೊಂದಿಗೆ ಚರ್ಚಿಸುವುದಾಗಿ ಶಾಸಕರು ಭರವಸೆ ನೀಡಿದರು.
ನಮ್ಮ ಸುತ್ತಮುತ್ತ ಇಂತಹ ಚಟುವಟಿಕೆಗೆ ಪೂರಕವಾದ ಮನಸ್ಸುಗಳು ಹಾಗೂ ಸಂಘ ಸಂಸ್ಥೆಗಳಿವೆ. ಶಿಬಿರಕ್ಕೆ ಅವರ ಸಹಭಾಗಿತ್ವ ಪಡೆಯಬೇಕು. ಆಗ ಶಿಬಿರ ಮತ್ತಷ್ಟು ಯಶಸ್ಸು ಕಾಣಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಆಹಾರ ಸಲಹಾ ತಜ್ಞೆ ಎಚ್.ನೇತ್ರಾವತಿ ಮಾತನಾಡಿ, ಮಕ್ಕಳಿಗೆ ಆರೋಗ್ಯಕರ ಆಹಾರ ನೀಡಬೇಕು. ಕರಿದ ಪದಾರ್ಥಗಳು ಹಾಗೂ ಪ್ಲಾಸ್ಟಿಕ್‌ನಲ್ಲಿ ಸಂಗ್ರಹಿಸಿದ ಆಹಾರ ಸೇವಿಸುವುದನ್ನು ಕಡಿಮೆ ಮಾಡಬೇಕು. ಒಂದು ಬಾರಿ ಕರಿಯಲು ಬಳಸಿದ ಎಣ್ಣೆಯನ್ನು ಹೆಚ್ಚು ಬಾರಿ ಅಡುಗೆಗೆ ಬಳಸಬಾರದು. ಆ ರೀತಿ ಬಳಸಿದ ಎಣ್ಣೆಯ ಪದಾರ್ಥಗಳನ್ನು ತಿನ್ನಬಾರದು. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತವೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಿ.ಎಚ್.ಕೃಷ್ಣಪ್ಪ ಮಾತನಾಡಿ, ಇತ್ತೀಚೆಗೆ ಮಕ್ಕಳು ಹೆಚ್ಚು ಸಮಯ ಮೊಬೈಲ್ ವೀಕ್ಷಿಸುತ್ತಿದ್ದಾರೆ. ಊಟ ಮಾಡುವಾಗಲೂ ಮೊಬೈಲ್ ವೀಕ್ಷಿಸುವುದು ಸರಿಯಲ್ಲ. ಇಂತಹ ವಾತಾವರಣದಿಂದ ಮಕ್ಕಳನ್ನು ಹೊರತರಬೇಕು. ಇಲ್ಲದಿದ್ದರೆ ಮಕ್ಕಳಿಗೆ ಓದು, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಯಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. ಏಕಾಗ್ರತೆಯಿಂದ ಮಕ್ಕಳ ಮನಸ್ಸನ್ನು ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ. ಇದರಿಂದ ದೇಹದಲ್ಲಿನ ಹಾರ್ಮೋನ್ ವ್ಯತ್ಯಾಸವಾಗಿ ಮಕ್ಕಳು ಮಾನಸಿಕ ಹಾಗೂ ದೈಹಿಕವಾಗಿ ಕುಗ್ಗುತ್ತಾರೆ ಎಂದು ಎಚ್ಚರಿಸಿದರು.
ತಹಸೀಲ್ದಾರ್ ಲಿಂಗರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶಶಿರೇಖಾ, ಮುಖ್ಯ ಶಿಕ್ಷಕ ಹಾಲನಾಯ್ಕ ಇತರರಿದ್ದರು.