

ಬೆಂಗಳೂರು: ಇಂದು ತಮ್ಮ ಜನ್ಮದಿನ ಆಚರಿಸಿಕೊಂಡ ಚಿತ್ರನಟಿ, ಮಾಜಿ ಸಂಸದೆ ಸುಮಲತಾ ಅಂಬರೀಶ್, ತಮ್ಮ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ಅಭಿಮಾನಿಗಳಿಗೆ ಧನ್ಯವಾದ ತಿಳಿಸುವ ವೇಳೆ ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಡಿ ಜೈಲಿನಲ್ಲಿರುವ ನಟ ದರ್ಶನ್ ವಿಚಾರಕ್ಕೆ ಕಡೆಗೂ ಪ್ರತಿಕ್ರಿಯಿಸಿದ್ದಾರೆ. ಇತ್ತೀಚೆಗಷ್ಟೇ ಜೈಲಿನೊಳಗೆ ದರ್ಶನ್ ಇತರೆ ರೌಡಿಗಳ ಜತೆ ಕುಳಿತು ಸಿಗರೇಟ್ ಸೇದುತ್ತ, ಕಾಫಿ ಕುಡಿಯುತ್ತಿರುವ ಫೋಟೋ ಸಾಮಾಜಿಕ ಜಾಲತಾಣ ಸೇರಿದಂತೆ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಈ ಕುರಿತು ಮಾತನಾಡಿದ ಸುಮಲತಾ, ಮಾಹಿತಿ ಇಲ್ಲದ ವಿಷಯದ ಬಗ್ಗೆ ನಾನು ಹೆಚ್ಚು ಮಾತನಾಡಲು ಬಯಸಲ್ಲ. ಆದ್ರೆ, ಸಾಮಾನ್ಯವಾಗಿ ಹೇಳುವುದಾದರೆ ಇಂತಹ ಘಟನೆ ಇದೇ ಮೊದಲ ಎಂದು ಪ್ರಶ್ನಿಸಿದರು.
ಮಾಧ್ಯಮದವರಲ್ಲಿ ಈ ಪ್ರಶ್ನೆಯನ್ನು ಕೇಳಲು ನಾನು ಬಯಸುತ್ತೀನಿ, ಜೈಲಿನಲ್ಲಿ ಇದೇ ಮೊದಲ ಈ ರೀತಿ ನಡೆದಿರೋದು? ನೀವೇ ಹೇಳಿ. ಎಷ್ಟು ವರ್ಷಗಳಿಂದ ಇಂತಹ ಘಟನೆಗಳು ನಡೀತಿದೆ. ಆದ್ರೆ, ದರ್ಶನ್ ಜೈಲಿನೊಳಗೆ ಇದ್ದಾರೆ ಎಂಬ ಕಾರಣಕ್ಕೆ ನೀವ್ಯಾಕೆ ಪ್ರತ್ಯೇಕವಾಗಿ ಇದನ್ನು ಇವಾಗ ಒತ್ತಿ ಹೇಳ್ತಿದ್ದೀರಾ? ಏಕೆ ದರ್ಶನ್ರದ್ದೇ ತಪ್ಪು ಎಂದು ತೋರಿಸುತ್ತಿದ್ದೀರಿ? ಎಂದು ತೀವ್ರ ಅಸಮಾಧಾನ ಹೊರಹಾಕಿದರು.
ಜೈಲಿನ ಅಕ್ರಮಗಳ ಕುರಿತು ಬೆಳಕು ಚೆಲ್ಲಿದ್ದ ಐಪಿಎಸ್ ಅಧಿಕಾರಿ ಡಿ ರೂಪಾ ಅವರು ಇದೇ ವಿಚಾರವನ್ನು ಅಂದು ಹೊರತಂದಿದ್ದರು. ಆದ್ರೆ, ಆಗ ನೀವ್ಯಾರು ಈ ಬಗ್ಗೆ ಫೋಕಸ್ ಮಾಡಲಿಲ್ಲ. ಈಗ ದರ್ಶನ್ ವಿಚಾರವನ್ನು ಪದೇ ಪದೇ ಹೈಲೈಟ್ ಮಾಡಿ ತೋರಿಸುತ್ತಿದ್ದೀರಾ. ಜೈಲಿನ ಅಕ್ರಮಗಳ ಬಗ್ಗೆ ಮಾತನಾಡಿದ ಡಿ ರೂಪಾರನ್ನು ಆ ಕಾಲದಲ್ಲೇ ವರ್ಗಾವಣೆ ಮಾಡಿದರು ಎಂದು ಹೇಳಿದರು.