ಕರ್ವಾ ಚೌತ್‌ಗೂ ಮುನ್ನ ಬಿಜೆಪಿ ಶಾಸಕ ಸೀತಾರಾಮ್‌ ವರ್ಮಾ ಪತ್ನಿ ಇದ್ದಕ್ಕಿದ್ದಂತೆ ನಾಪತ್ತೆ; ದೂರು ದಾಖಲು

MLA
Published on

ಲಕ್ನೋ: ಸುಲ್ತಾನಪುರದ ಲಂಬುವಾ ಕ್ಷೇತ್ರದ ಬಿಜೆಪಿ ಶಾಸಕ ಸೀತಾರಾಮ್ ವರ್ಮಾ ಅವರ ಪತ್ನಿ ಮಂಗಳವಾರ ಬೆಳಗ್ಗೆ ಲಕ್ನೋದ ಇಂದಿರಾನಗರದಲ್ಲಿರುವ ತಮ್ಮ ಮನೆಯಿಂದ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ. ಅವರ ಮಗ ಗಾಜಿಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ. ಹಲವು ಪೊಲೀಸ್ ತಂಡಗಳು  ವರ್ಮಾ ಅವರ ಪತ್ನಿಗಾಗಿ ಹುಡುಕಾಟ ನಡೆಸುತ್ತಿವೆ.

ಘಾಜಿಪುರ ಸೆಕ್ಟರ್-8ರಲ್ಲಿ ಶಾಸಕ ಸೀತಾರಾಮ್ ವರ್ಮಾ ಮನೆ ಹೊಂದಿದ್ದಾರೆ ಎಂದು ಉತ್ತರ ಡಿಸಿಪಿ ಖಾಸಿಂ ಅಬ್ದಿ ಹೇಳಿದ್ದಾರೆ. ಸೀತಾರಾಮ್  ಅವರ 65 ವರ್ಷದ ಪತ್ನಿ ಪುಷ್ಪಾ ವರ್ಮಾ ಕುಟುಂಬದೊಂದಿಗೆ ಇಲ್ಲಿ ವಾಸಿಸುತ್ತಿದ್ದಾರೆ. ಮಂಗಳವಾರ ಬೆಳಗ್ಗೆ ಆರು ಗಂಟೆಗೆ ಪುಷ್ಪಾ ಯಾರಿಗೂ ಏನೂ ಹೇಳದೆ ಮನೆಯಿಂದ ಹೊರಟು ಹೋಗಿದ್ದಾರೆ. ಸಾಕಷ್ಟು ಹುಡುಕಾಟದ ನಂತರವೂ ಪತ್ತೆಯಾಗದಿದ್ದಾಗ, ಮಗ ತನ್ನ ತಂದೆಗೆ ಮಾಹಿತಿ ನೀಡಿದ್ದಾರೆ.

ನಾಪತ್ತೆ ದೂರು ನೀಡಿದ ಮಗ

ಈ ಮಧ್ಯೆ, ಮಗ ಪಂಕಜ್ ಘಾಜಿಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ. ಶಾಸಕ ಸೀತಾರಾಮ್ ವರ್ಮಾ ಅವರು ಸುಲ್ತಾನ್‌ಪುರದಿಂದ ಲಕ್ನೋ ತಲುಪಿದ್ದಾರೆ. ಶಾಸಕರು ಡಿಸಿಪಿಯನ್ನು ಭೇಟಿ ಮಾಡಿ ತಮ್ಮ ಪತ್ನಿಯನ್ನು ಹುಡುಕಲು ಸಹಾಯ ಕೇಳಿದರು. ಪುಷ್ಪಾ ಪತ್ತೆಗೆ ಡಿಸಿಪಿ ಗಾಜಿಪುರ ಮತ್ತು ಇಂದಿರಾನಗರ ಪೊಲೀಸರ ತಂಡಗಳನ್ನು ನಿಯೋಜಿಸಿದ್ದಾರೆ.

ಆಲ್ಝೈಮರ್ ಕಾಯಿಲೆ

ಬೆಳಗ್ಗೆ 9 ಗಂಟೆ ಸುಮಾರಿಗೆ ಇಂದಿರಾನಗರದ ಅರಬಿಂದೋ ಪಾರ್ಕ್ ಔಟ್ ಪೋಸ್ಟ್ ಬಳಿ ಪುಷ್ಪಾ ಕಾಣಿಸಿಕೊಂಡಿದ್ದಾರೆ ಎಂದು ಡಿಸಿಪಿ ತಿಳಿಸಿದ್ದಾರೆ. ಪೊಲೀಸರು ಸಿಸಿ ಕ್ಯಾಮೆರಾಗಳು ಮತ್ತು ಅಂತರ್ಜಾಲ ಮಾಧ್ಯಮಗಳ ಸಹಾಯದಿಂದ ಅವರನ್ನು ಹುಡುಕುತ್ತಿದ್ದಾರೆ. ಪುಷ್ಪಾ ವರ್ಮಾ ಅವರು ವಿಸ್ಮೃತಿ(ಆಲ್ಝೈಮರ್) ಯಿಂದ ಬಳಲುತ್ತಿದ್ದು, ಚಿಕಿತ್ಸೆ ಕೂಡ ಪಡೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net