

ನವದೆಹಲಿ: 2020-21ರಲ್ಲಿ ದೆಹಲಿ ಸರ್ಕಾರ ಜಾರಿಗೆ ತಂದಿದ್ದ ಅಬಕಾರಿ ನೀತಿಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಶುಕ್ರವಾರ ಸಮನ್ಸ್ ಜಾರಿ ಮಾಡಿತ್ತು.
ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಅರವೀಂದ್ ಕೇಜ್ರಿವಾಲ್ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿರುವ ಸರ್ಕಾರಿ ಸಂಸ್ಥೆಗಳ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡುವುದಾಗಿ ತಿಳಿಸಿದ್ಧಾರೆ.
ಸಿಬಿಐ ಹಾಗೂ ಇಡಿ ವಶದಲ್ಲಿರುವ ನಮ್ಮ ನಾಯಕರಿಗೆ ಚಿತ್ರ ಹಿಂಸೆ ನೀಡಲಾಗುತ್ತಿದೆ. ಅಕ್ರಮಕ್ಕೆ ಸಂಬಂಧಿಸಿದಂತೆ ಪುರಾವೆಗಳು ಸಿಗದ ಕಾರಣ ನ್ಯಾಯಾಲಯದಲ್ಲಿ ಸುಳ್ಳು ಸಾಕ್ಷಿ ಹೇಳುವಂತೆ ಮಾಡಲಾಗುತ್ತಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.
ಸರ್ಕಾರಿ ತನಿಖಾ ಸಂಸ್ಥೆಗಳಾದ ಸಿಬಿಐ ಹಾಗೂ ಇಡಿ ಮೂಲಕ ಕೇಂದ್ರ ಬಿಜೆಪಿ ಸರ್ಕಾರವು ವಿರೋಧ ಪಕ್ಷದವರನ್ನು ಮುಗಿಸಲು ಹೊರಟಿದೆ. ಮುಂದಿನ ದಿನಗಳಲ್ಲಿ ಜನತೆ ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದ್ಧಾರೆ.
ಅಬಕಾರಿ ನೀತಿಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಗಳು ಇಲ್ಲಿಯವರೆಗೆ 14 ಪೋನುಗಳನ್ನು ನಾಶಪಡಿಸಲಾಗಿದೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಡೆವಿಟ್ನಲ್ಲಿ ತಿಳಿಸಿವೆ. ಆದರೆ, ಅಲ್ಲಿ ಅದ್ಯಾವುದು ನಡೆದಿಲ್ಲ ಮತ್ತು ಬಂಧಿತರನ್ನು ಬೆದರಿಸಿ ಸುಳ್ಳು ಸಾಕ್ಷಿ ಹೇಳುವಂತೆ ಮಾಡಲಾಗುತ್ತಿದೆ.
ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಅವರ ಬಂಧನದ ನಂತರ ಅಬಕಾರಿ ನೀತಿಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೂ ಒಂದು ನಯಾ ಪೈಸೆಯನ್ನು ಮುಟ್ಟುಗೋಲು ಹಾಕಿಕೊಂಡಿಲ್ಲ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.
ನಮ್ಮ ಪಕ್ಷದ ನಾಯಕರ ಮನೆ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಅವರ ಮನೆಯಲ್ಲಿ ಏನು ದೊರೆಯದಿದ್ದಾಗ ಹಣವನ್ನು ಗೋವಾ ಹಾಗು ಪಂಜಾಬ್ನಲ್ಲಿ ಚುನಾವಣಾ ಪ್ರಚಾರಕ್ಕೆ ಬಳಸಲಾಗಿದೆ ಎಂದು ಆರೋಪಿಸಲಾಗಿದೆ. ಆದರೆ ನಾವು ಆ ಹಣವನ್ನು ಬಳಸಿರುವ ಬಗ್ಗೆ ಪುರಾವೆಗಳು ಎಲ್ಲಿವೆ ನಾವು ಪ್ರತಿಯೊಂದಕ್ಕೂ ಚೆಕ್ ಮೂಲಕ ಪಾವತಿ ಮಾಡಿದ್ದೇವೆ. ನಿಮಗೆ ಸಿಕ್ಕಿರುವ 100 ಕೋಟಿ ರೂಪಾಯಿ ಅಲ್ಲಿ ಒಂದು ರೂಪಾಯಿಯನ್ನು ನನಗೆ ತೋರಿಸಿ ಎಂದು ಸವಾಲ್ ಎಸೆದಿದ್ದಾರೆ.
ನಾನು ಸೆಪ್ಟೆಂಬರ್ 17ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ 1,000 ಕೋಟಿ ರೂಪಾಯಿ ನೀಡಿದ್ದೇನೆ ಎಂದು ಹೇಳಿದ ತಕ್ಷಣ ನೀವು ಅವರನ್ನು ಬಂಧಿಸುತ್ತೀರಾ. ಸರ್ಕಾರಿ ತನಿಖಾ ಸಂಸ್ಥೆಗಳ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡುವುದಾಗಿ ತಿಳಿಸಿದ್ದಾರೆ.