ಆತ್ಮಹತ್ಯೆ ಅನೈತಿಕ, ಪಾಪದ ಕ್ರಿಯೆ: ಡಾ. ಸಿ.ಆರ್.ಚಂದ್ರಶೇಖರ್

World suicide Prevention day
ನಗರದ ರೋಟರಿ ಕ್ಲಬ್ ಮಿಡ್ ಟೌನ್‌ನಲ್ಲಿ ಪದ್ಮಶ್ರೀ ಪುರಸ್ಕೃತ, ಮನೋರೋಗ ತಜ್ಞ ಡಾ. ಸಿ.ಆರ್.ಚಂದ್ರಶೇಖರ್ ಮಾತನಾಡಿದರು. ಪುಷ್ಪಲತಾ, ಡಿ.ಸುರೇಶ ಕುಮಾರ್, ಡಾ. ರಜನಿ ಪೈ, ಡಾ. ಪ್ರೀತಿ ಶಾನ್‌ಭೋಗ್ ಇದ್ದರು.
Published on

ಶಿವಮೊಗ್ಗ: ಆತ್ಮಹತ್ಯೆ ಎಂಬುದು ಅನೈತಿಕ ಮತ್ತು ಪಾಪದ ಕ್ರಿಯೆ. ಅದನ್ನು ಪ್ರಾಣಿ ಪಕ್ಷಿಗಳೂ ಮಾಡಿಕೊಳ್ಳುವುದಿಲ್ಲ. ಆದರೆ ಮನುಷ್ಯ ಮಾಡಿಕೊಳ್ಳುತ್ತಿರುವುದು ದುರ್ದೈವ ಎಂದು ಪದ್ಮಶ್ರೀ ಪುರಸ್ಕೃತ, ಮನೋರೋಗ ತಜ್ಞ ಡಾ. ಸಿ.ಆರ್.ಚಂದ್ರಶೇಖರ್ ಕಳವಳ ವ್ಯಕ್ತಪಡಿಸಿದರು.

ನಗರದ ರೋಟರಿ ಕ್ಲಬ್ ಮಿಡ್ ಟೌನ್‌ನಲ್ಲಿ ಬುಧವಾರ ಮಾನಸ ಟ್ರಸ್ಟ್‌ನ ಡಿಪಾರ್ಟ್‌ಮೆಂಟ್ ಆಫ್ ಕ್ಲಿನಿಕಲ್ ಸೈಕಾಲಜಿ, ಕಟೀಲು ಅಶೋಕ ಪೈ ಮೆಮೋರಿಯಲ್ ಇನ್‌ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸ್ ಆ್ಯಂಡ್ ಕಟೀಲು ಅಶೋಕ ಪೈ ಮೆಮೋರಿಯಲ್ ಕಾಲೇಜಿನಿಂದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ರೋಟರಿ ಕ್ಲಬ್ ಶಿವಮೊಗ್ಗ ಮಿಡ್‌ಟೌನ್ ಸಹಯೋಗದೊಂದಿಗೆ ವಿಶ್ವ ಆತ್ಮಹತ್ಯೆ ತಡೆ ವಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಆತ್ಮಹತ್ಯೆ ಪ್ರಕರಣಗಳು ಹೆಚ್ಚಳವಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಮನುಷ್ಯ ಜೀವಿಸಬೇಕು. ಜೀವನದಲ್ಲಿ ಹೋರಾಟ ಮಾಡುವ ಮೂಲಕ ಜಯಿಸಬೇಕು. ಕೆಲವರಿಗೆ ಸಾಯಲು ಆಸೆ ಇರಲ್ಲ. ಆದರೆ ಕೋಪ, ನೋವು, ನಿರಾಸೆಯಿಂದ ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ. ಕೌಟುಂಬಿಕ, ಆರೋಗ್ಯ ಸಮಸ್ಯೆ, ಸೋಲುಗಳು, ಬಡತನ, ಆರ್ಥಿಕ ಮತ್ತು ವರದಕ್ಷಿಣೆ ಕಿರುಕುಳಗಳಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಪುರುಷರ ಪ್ರಮಾಣ ಶೇ. 72ರಷ್ಟು ಮತ್ತು ಮಹಿಳೆಯರ ಸಂಖ್ಯೆ ಶೇ. 28ರಷ್ಟಿದೆ ಎಂದರು.
ದೇಶದಲ್ಲಿ ಗಂಟೆಗೊಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಮಾನಸಿಕ ಕಾಯಿಲೆಗಳನ್ನು ಜನತೆ ಒಪ್ಪುವುದಿಲ್ಲ. ಮೂಢನಂಬಿಕೆಯಿಂದ ದೇವರ ಮೊರೆ ಹೋಗುತ್ತಾರೆ. ಸಕಾಲಕ್ಕೆ ಚಿಕಿತ್ಸೆ ಪಡೆದುಕೊಳ್ಳುವುದಿಲ್ಲ. ಮಾನಸಿಕ ಕಾಯಿಲೆಯಿಂದ ಹೊರ ಬರಲು ಒಂಟಿತನ ನಿವಾರಿಸಿಕೊಳ್ಳಬೇಕು. ಸಂಪರ್ಕ, ಸಂವಹನ ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಕಷ್ಟಗಳನ್ನು ಎದುರಿಸುವ ಶಕ್ತಿ ವೃದ್ಧಿಸಿಕೊಳ್ಳಬೇಕು. ಸಕಾರಾತ್ಮಕ ಆಲೋಚನೆ ಮಾಡಬೇಕು. ಜೀವನದಲ್ಲಿ ಆಶಾಭಾವ ಇರಬೇಕು. ಸೋಲನ್ನೇ ಗೆಲುವಿನ ಮೆಟ್ಟಿಲು ಮಾಡಿಕೊಳ್ಳಬೇಕು. ಸಕಾಲಕ್ಕೆ ಮನೋವೈದ್ಯರ ನೆರವು ಪಡೆಯಬೇಕು ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್.ಸಂತೋಷ್ ಮಾತನಾಡಿ, ಜೀವನದಲ್ಲಿ ಅವಮಾನ ಮತ್ತು ಅನುಮಾನ ಸಹಿಸಿಕೊಳ್ಳಬೇಕು. ಅಂದಾಗಲೇ ಸಮಾಜದಲ್ಲಿ ಸನ್ಮಾನ ಸಿಗುತ್ತದೆ. ಕೆಲವರು ಅವಮಾನ ಮತ್ತು ಅನುಮಾನ ಎದುರಿಸಲಾಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಹೇಳಿದರು. ಪ್ರಾಚಾರ್ಯೆ ಪುಷ್ಪಲತಾ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕ್ಲಬ್ ಶಿವಮೊಗ್ಗ ಮಿಡ್‌ಟೌನ್ ಅಧ್ಯಕ್ಷ ಡಿ.ಸುರೇಶ ಕುಮಾರ್, ಡಾ. ರಜನಿ ಪೈ, ಡಾ. ಪ್ರೀತಿ ಶಾನ್‌ಭೋಗ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net