ಕಬ್ಬಿನ ಕೊರತೆ, ಸ್ಥಗಿತದತ್ತ ಆಲೆಮನೆ!

Alemane
Published on

ಉಡುಪಿ: ಬ್ರಹ್ಮಾವರದ ದ.ಕ.ಜಿಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆ ಅಂಗಳದಲ್ಲಿ 15 ವರ್ಷ ಬಳಿಕ, ಮೂರು ತಿಂಗಳ ಹಿಂದೆ ಆರಂಭಗೊಂಡಿದ್ದ ಸಾವಯವ ಬೆಲ್ಲ ಉತ್ಪಾದಿಸುವ ಆಲೆಮನೆ ಸ್ಥಗಿತಗೊಳ್ಳುವ ಹಂತಕ್ಕೆ ತಲುಪಿದೆ. ಬೇಡಿಕೆಗೆ ತಕ್ಕಂತೆ ಸ್ಥಳೀಯವಾಗಿ ಕಬ್ಬು ಸಿಗದಿರುವುದೇ ಇದಕ್ಕೆ ಕಾರಣ.

ಜನವರಿಯಿಂದ ಈ ತನಕ 10-12 ಎಕರೆ ಪ್ರದೇಶದಲ್ಲಿ ಬೆಳೆದ 350 ಟನ್ ಕಬ್ಬು ಅರೆದು 25 ಟನ್ ಬೆಲ್ಲ ಹಾಗೂ ಜೋನಿ ಬೆಲ್ಲ ಉತ್ಪಾದಿಸಲಾಗಿದೆ. 3 ತಿಂಗಳಲ್ಲಿ 12 ಲಕ್ಷ ರೂ. ವಹಿವಾಟು ಕೂಡ ನಡೆದಿದೆ. ಕೃಷ್ಣ ಮಠಕ್ಕೆ 1 ಟನ್ ಬೆಲ್ಲ ಸರಬರಾಜು ಮಾಡಲಾಗಿದೆ. ಕಾರ್ಖಾನೆ ಹೊರಗೆ ನಿರ್ಮಿಸಿದ ಮಳಿಗೆಯಲ್ಲೇ ಮಾರಾಟ ಮಾಡಲಾಗಿದೆ. ಸಾವಯವ ಬೆಲ್ಲಕ್ಕೆ ಬೇಡಿಕೆಯಿದ್ದರೂ, ಕಬ್ಬು ಬೆಳೆ ಹೆಚ್ಚಾದರೆ ಮಾತ್ರ ಮಾರುಕಟ್ಟೆಗೆ ಬಿಡುಗಡೆ ಸಾಧ್ಯ.

ಡಿಸೆಂಬರ್‌ನಿಂದ ಮಾರ್ಚ್‌ವರೆಗೆ ಕಬ್ಬು ಬೆಳೆ ಕಟಾವಿಗೆ ಬರುತ್ತದೆ. ಬೆಲ್ಲ ತಯಾರಿ ಪೂರ್ವನಿರ್ಧರಿತವಲ್ಲದ ಕಾರಣ ಕಳೆದ ವರ್ಷ ರೈತರು ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಬೆಳೆದಿಲ್ಲ. ಆದರೆ ಈ ಬಾರಿ ಕಬ್ಬು ಬೆಳೆಯುವ ಪ್ರದೇಶ ದ್ವಿಗುಣಗೊಂಡಿದೆ. 20 ಎಕರೆ ಪ್ರದೇಶದಲ್ಲಿ ಕಬ್ಬು ಬೀಜ ಬಿತ್ತನೆ ನಡೆದಿದೆ. ಸಕ್ಕರೆ ಕಾರ್ಖಾನೆ ವತಿಯಿಂದಲೇ ರೈತರಿಗೆ ಗುಣಮಟ್ಟದ ಬೀಜ ಸರಬರಾಜು ಮಾಡಲಾಗಿದ್ದು, ಎಕರೆಗೆ 12 ಸಾವಿರ ರೂ.ವೆಚ್ಚವಾಗಿದೆ.

ಒಂದು ಟನ್ ಕಬ್ಬಿಗೆ 3 ಸಾವಿರ ರೂ.: ಜಿಲ್ಲೆಯಲ್ಲಿ ಕಬ್ಬು ಬೆಳೆ ಪ್ರೋತ್ಸಾಹಿಸಲು ಕಾರ್ಖಾನೆ ಆಡಳಿತ ಮಂಡಳಿ ತೀರ್ಮಾನಿಸಿದೆ. ಬೆಲ್ಲದ ಆಲೆಮನೆಗೆ ಖರೀದಿಸುವ ಕಬ್ಬು ಒಂದು ಟನ್‌ಗೆ 3000 ರೂ.ಇದೆ. ಕೇಂದ್ರ ಸರ್ಕಾರ ಒಂದು ಟನ್ ಕಬ್ಬಿಗೆ 2800 ರೂ. ಬೆಂಬಲಬೆಲೆ ನಿಗದಿಪಡಿಸಿದ್ದು, ಇದಕ್ಕಿಂತಲೂ 200 ರೂ.ಅಧಿಕ ಬೆಲೆಗೆ ಕಬ್ಬನ್ನು ಖರೀದಿಸಲಾಗುತ್ತಿದೆ.

ಕಾರ್ಖಾನೆ ಪುನರಾರಂಭ ತನಕ ರೈತರಿಗೆ ಉತ್ತೇಜನ ನೀಡಲು ಕಾರ್ಖಾನೆ ಆವರಣದಲ್ಲಿ ಬೆಲ್ಲ ತಯಾರಿ ಘಟಕ ತೆರೆಯಲಾಗಿದೆ. ಮುಂದಿನ ವರ್ಷ ಘಟಕವನ್ನು ವಿಸ್ತರಿಸಲಾಗುವುದು. ಬೆಲ್ಲಕ್ಕೆ ಬೇಡಿಕೆ ಇರುವುದರಿಂದ ತೀರ್ಥಹಳ್ಳಿ, ಶಿವಮೊಗ್ಗದಿಂದ ಕಬ್ಬು ಆಮದು ಮಾಡಿಕೊಳ್ಳಲು ಸಾಧ್ಯವೇ ಎಂಬುದನ್ನೂ ಪರಿಶೀಲಿಸುತ್ತಿದ್ದೇವೆ. | ಬೈಕಾಡಿ ಸುಪ್ರಸಾದ್ ಶೆಟ್ಟಿ ಅಧ್ಯಕ್ಷರು, ದ.ಕ. ಸಹಕಾರಿ ಸಕ್ಕರೆ ಕಾರ್ಖಾನೆ ಬ್ರಹ್ಮಾವರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net