ಕಬ್ಬಿಗೆ ನಿಗದಿ ಮಾಡಿರುವ ದರ ರೈತರಿಗೆ ಕೊಡಿಸುವುದು ಸರ್ಕಾರದ ಕರ್ತವ್ಯ; ಬೊಮ್ಮಾಯಿ

10-RNR-10
Published on

ಹಾವೇರಿ: ಕಬ್ಬಿಗೆ ನಿಗದಿ ಪಡಿಸಿದ ದರವನ್ನು ರೈತರಿಗೆ ಕೊಡಿಸಲು ಸರ್ಕಾರದ ಆಜ್ಞೆ ಪಾಲನೆ ಆಗುವಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಬ್ಬು ಬೆಳೆಗಾರರಿಗೆ ಸರ್ಕಾರ ನಿಗದಿ ಮಾಡಿರುವ ದರವನ್ನು ಕಾರ್ಖಾನೆ ಮಾಲೀಕರು ಕೊಡುವಂತೆ, ಸರ್ಕಾರದ ಆಜ್ಞೆ ಪಾಲನೆ ಆಗುವಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯ. ಕಾರ್ಖಾನೆ ಮಾಲೀಕರು ಮುಖ್ಯಮಂತ್ರಿ ಸಭೆಯಲ್ಲಿ ಭಾಗವಹಿಸಿದ್ದರೂ ಅಷ್ಟೊಂದು ಹಣ ಆಗಲ್ಲ ಅಂತ ಹೇಳಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ಪಷ್ಟನೆ ನೀಡಲಿ. ಕಾರ್ಖಾನೆ ಮಾಲೀಕರಿಗೆ ಕೇವಲ ಹೇಳಿದ್ದಾರೊ ಅಥವಾ ಒಪ್ಪಿಸಿದ್ದಾರೋ ಎಂದು ಸ್ಪಷ್ಟಪರಿಸಲಿ ಎಂದು ಆಗ್ರಹಿಸಿದರು.

ಎಸ್​ಎಪಿ ಜಾರಿ ಮಾಡಲಿ...-

ರಾಜ್ಯದಲ್ಲಿ ಎಸ್​ಎಪಿ ಕಾನೂನು ಇದೆ. ನಮ್ಮ ಸರ್ಕಾರ ಇದ್ದಾಗ ಅದನ್ನು ಜಾರಿ ಮಾಡಿದ್ದೇವೆ. ಎಸ್​ಎಪಿ ಕಾನೂನಿನಲ್ಲಿ ಬಹಳ ಸ್ಪಷ್ಟವಾಗಿದ್ದು, ಸಕ್ಕರೆ ಮತ್ತು ಇತರೆ ಉತ್ಪಾದನೆಯ ಖರ್ಚುಗಳು ಎಷ್ಟು, ಲಾಭದಲ್ಲಿ ರೈತನಿಗೆ ಎಷ್ಟು , ಕಾರ್ಖಾನೆ ಎಷ್ಟು ಅನ್ನುವುದು ಇದೆ. ಎಸ್​ಎಪಿ ಕಾನೂನು ತೆಗೆದು ನೋಡಲು ಮುಖ್ಯಮಂತ್ರಿ ತಯಾರಿಲ್ಲ. ಸಿಎಂ ಒಂದು ರೀತಿ ಖಾಜಿ ನ್ಯಾಯ ಮಾಡಲು ಹೋಗುತ್ತಿದ್ದಾರೆ. ಖಾಜಿ ನ್ಯಾಯ ಮಾಡಲು ಮುಖ್ಯಮಂತ್ರಿನೇ ಬೇಕಾ ಎಂದು ಪ್ರಶ್ನಿಸಿದರು.

ಬೆಳಗಾವಿ ಜಿಲ್ಲಾಧಿಕಾರಿ ಪ್ರತಿ ಟನ್​ ಕಬ್ಬಿಗೆ 2900 ರೂ. ಇದ್ದದನ್ನು 3200 ರೂ. ಮಾಡಿದ್ದರು. ವಿಧಾನಸೌಧದಲ್ಲಿ ಕುಳಿತು ಮುಖ್ಯಮಂತ್ರಿ 50 ರೂ. ಹೆಚ್ಚಳ ಮಾಡಿದರು. ಜಿಲ್ಲಾಧಿಕಾರಿಗೆ ಇರುವ ಬದ್ದತೆ ಮುಖ್ಯಮಂತ್ರಿಗೆ ಇಲ್ಲವೇ. ಇವರು ಯಾರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಸರ್ಕಾರ ನಿಗದಿ ಮಾಡಿರುವ ದರವನ್ನು ರೈತರಿಗೆ ಕೊಡಿಸುವುದು ಸರ್ಕಾರದ ಕರ್ತವ್ಯ. ಮಹಾರಾಷ್ಟ್ರ ಮತ್ತು ಗುಜರಾತ್​ ರಾಜ್ಯಗಳಲ್ಲಿ ಯಾಕೆ ಗಲಾಟೆ ಇಲ್ಲ ಎಂದು ಪ್ರಶ್ನಿಸಿದ ಅವರು, ರಿಕವರಿ ಟೆಸ್ಟ್​ ಕೂಡ ಮಾಡುವುದು ರಾಜ್ಯ ಸರ್ಕಾರ. ರಿಕವರಿ ಪರೀಕ್ಷೆಯನ್ನೂ ಪಾರದರ್ಶಕವಾಗಿ ಮಾಡಲಿ, ಬೆಳಗಾವಿ ಡಿಸಿ, ವಿಜಯಪುರ ಡಿಸಿ ಕೆಲಸ ಮಾಡಿದಂತೆ ಹಾವೇರಿ ಡಿಸಿ ಕೆಲಸ ಮಾಡಲಿ, ರಾಜಕೀಯವಾಗಿ ಡಿಸಿಯವರಿಗೆ ಹೇಳುವವರು ಕೇಳುವವರು ಇಲ್ವಾ. ರಾಜ್ಯ ಸರ್ಕಾರಕ್ಕೆ ತೆರಿಗೆ ಬರುತ್ತದೆ, ಆ ಪ್ರಕಾರ ನ್ಯಾಯ ಕೊಡಿಸಲಿ ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net