ಆಶೀರ್ವಾದ ಪಡೆದು ಕಬ್ಬಿನ ಹಾಲು ಕುಡಿದು ಸ್ವಾಮೀಜಿಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದ ಜನರು!

Swamiji
Published on

ಬೀದರ್​: ಸ್ವಾಮೀಜಿಯ ಆರ್ಶಿವಾದ ಪಡೆದು, ಕಬ್ಬಿನ ಹಾಲು ಕುಡಿದು, ಸ್ವಾಮೀಜಿಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಜನರು ಮುಗಿಬಿದ್ದ ಘಟನೆ ಬೀದರ್​ನ ಕೇಂದ್ರ ಬಸ್​ ನಿಲ್ದಾಣದ ಮುಂಭಾಗದಲ್ಲಿ ನಡೆದಿದೆ.

ಹೌದು, ಕಲ್ಯಾಣ ಕರ್ನಾಟಕ ಭಾಗದ ಪ್ರತಿಷ್ಠಿತ ಸ್ವಾಮೀಜಿ ಹವಾ ಮಲ್ಲಿನಾಥ ಮಹಾರಾಜರು ಬೀದರ್​ ನಗರದ ಕೇಂದ್ರಿಯ ಬಸ್ ನಿಲ್ದಾಣದ ಮುಂಭಾಗದಲ್ಲಿ ಕಾಣಿಸಿಕೊಂಡಿದ್ದೇ ತಡ ಜನರು ಆರ್ಶಿವಾದ ಪಡೆಯಲು ಹಾಗೂ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು.

ಎರಡು ಟ್ರ್ಯಾಕ್ಟರ್​ನಲ್ಲಿ ಕಬ್ಬು ತುಂಬಿಕೊಂಡು, ಕಬ್ಬು ನುರಿಯುವ ಯಂತ್ರದೊಂದಿಗೆ ಆಗಮಿಸಿದ ಮಹಾರಾಜರು, ಸಾವಿರಾರು ಜನ ಭಕ್ತರಿಗೆ ಬೆಳ್ಳಂಬೆಳಗ್ಗೆ ತಾಜಾ ಕಬ್ಬಿನ ಹಾಲನ್ನು ಪ್ರಸಾದದ ರೂಪದಲ್ಲಿ ನೀಡುವ ಮೂಲಕ ಗಮನ ಸೆಳೆದರು. ಸಾವಿರಾರು ಜನರು ಸಾಲು ಸಾಲಾಗಿ ಬಂದು ಕಬ್ಬಿನ ಹಾಲು ಕುಡಿದು, ಸ್ವಾಮೀಜಿಗಳ ಆರ್ಶಿವಾದ ಪಡೆದುಕೊಂಡರು.

ಬೀದರ್​ ಭಾಗದಲ್ಲಿ ಪವಾಡ ಪುರುಷರು ಎಂದೇ ಖ್ಯಾತಿ ಪಡೆದ ಹವಾ ಮಲಿನಾಥ ಮಹಾರಾಜರ ದರ್ಶನ ಮತ್ತು ಸೆಲ್ಫಿ ಪೊಟೋಗಳು ತೆಗೆಸಿಕೊಳ್ಳುವುದಕ್ಕೆ ಜನರು ಮುಗಿಬಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net