ಸಕ್ಕರೆ ಕಾರ್ಖಾನೆ ಪರಭಾರೆಗೆ ಅವಕಾಶ ನೀಡಲ್ಲ

kampli
ಕಂಪ್ಲಿಯಲ್ಲಿ ಏರ್ಪಡಿಸಿದ್ದ ಕ್ಯಾನ್ಸರ್ ಸೇರಿ ವಿವಿಧ ಕಾಯಿಲೆಗಳ ಉಚಿತ ತಪಾಸಣೆ ಶಿಬಿರವನ್ನು ಶಾಸಕ ಜೆ.ಎನ್.ಗಣೇಶ್ ಉದ್ಘಾಟಿಸಿದರು. ಪ್ರಮುಖರಾದ ಕೆ.ಎಸ್.ಚಾಂದ್‌ಬಾಷಾ, ಭಟ್ಟ ಪ್ರಸಾದ್, ವೀರಾಂಜನೇಯಲು, ಹೊನ್ನೂರವಲಿ, ಹಬೀಬ್ ರೆಹಮಾನ್ ಇತರರಿದ್ದರು.
Published on

ಕಂಪ್ಲಿ: ಸಕ್ಕರೆ ಕಾರ್ಖಾನೆಯ 176.51ಎಕರೆ ಭೂಮಿಯನ್ನು ಸರ್ಕಾರದ ಅಧೀನಕ್ಕೆ ಪಡೆಯುವಂತೆ ಕ್ಯಾಬಿನೆಟ್‌ನಲ್ಲಿ ಚರ್ಚಿಸುವಂತೆ ಸಿಎಂ ಅವರನ್ನು ಒತ್ತಾಯಿಸುವುದಾಗಿ ಶಾಸಕ ಜೆ.ಎನ್.ಗಣೇಶ್ ತಿಳಿಸಿದರು.

ಇಲ್ಲಿನ ಬಿಎಸ್‌ವಿ ಶಾಲೆ ಆವರಣದಲ್ಲಿ ಭಾನುವಾರ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯ ಆಶ್ರಯದಲ್ಲಿ ಹೃದಯರೋಗ, ನರರೋಗ, ಕ್ಯಾನ್ಸರ್, ಮೂತ್ರಪಿಂಡದ ಕಲ್ಲು ಸೇರಿ ನಾನಾ ಕಾಯಿಲೆಗಳ ಉಚಿತ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಸಕ್ಕರೆ ಕಾರ್ಖಾನೆಯ 176.51ಎಕರೆ ಭೂಮಿ ಸರ್ಕಾರದ ಆಸ್ತಿಯಾಗಿದ್ದು, ಇದನ್ನು ಖಾಸಗಿಯವರಿಗೆ ಪರಭಾರೆ ಮಾಡಲು ಬಿಡುವುದಿಲ್ಲ.

ಸರ್ಕಾರಿ ಭೂಮಿಯಾಗಿ ಪರಿವರ್ತಿಸಿದ ನಂತರ ರೈತ ಹಿತಾಸಕ್ತಿಯ ಷರತ್ತುಗಳಡಿ ಖಾಸಗಿ, ಸಹಕಾರಿ ಇಲ್ಲವೇ ಸರ್ಕಾರಿ ವಲಯದ ಸಕ್ಕರೆ ಕಾರ್ಖಾನೆ ಸ್ಥಾಪನೆಯಾಗಲಿದೆ ಎಂದರು. ಕುರುಗೋಡಿನಲ್ಲಿ ಮನೆಮನೆಗೂ ಶುದ್ಧ ಕುಡಿವ ನೀರು ಪೂರೈಕೆಗಾಗಿ 150 ಕೋಟಿ ರೂ. ವೆಚ್ಚದಲ್ಲಿ ಕೆರೆ ನಿರ್ಮಿಸುವ ಪ್ರಸ್ತಾವನೆ ಸಲ್ಲಿಸಲಾಗಿದೆ. ತುಂಗಭದ್ರಾ ನದಿ ಸೇತುವೆ ನಿರ್ಮಾಣಕ್ಕೆ ಹಣಕಾಸು ಇಲಾಖೆಯಿಂದ ಅನುಮೋದನೆ ದೊರೆತಿಲ್ಲ.

ಮೊದಲ ಹಂತದಲ್ಲಿ 24 ಸೇತುವೆಗಳ ನಿರ್ಮಾಣದಲ್ಲಿ ಕಂಪ್ಲಿ ಸೇತುವೆ ನಿರ್ಮಾಣಕ್ಕೆ ಆದ್ಯತೆ ನೀಡುವಂತೆ ಸಿಎಂ, ಕನಕಗಿರಿ ಶಾಸಕರನ್ನು ಒತ್ತಾಯಿಸಲಾಗಿದೆ. ಗ್ರಾಮೀಣ ಜನತೆಯ ಹಿತಾಸಕ್ತಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದ್ದಾಗಿ ತಿಳಿಸಿದರು.

ಹೃದಯರೋಗ ತಜ್ಞ ಡಾ.ನೀಲೇಶ್ ಲಾಲ್ವಾನಿ, ಮೂತ್ರಪಿಂಡ ತಜ್ಞ ಡಾ.ಜೋಬಿನ್, ನರರೋಗ ತಜ್ಞ ಡಾ.ನಿಂಗರಾಜ, ಕ್ಯಾನ್ಸರ್ ತಜ್ಞ ಡಾ.ಪರ್ವೀನ್, 450ಕ್ಕೂ ಹೆಚ್ಚು ರೋಗಿಗಳ ತಪಾಸಣೆ ಮಾಡಿದರು. ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯ ಸಂಚಾಲಕ ವಿಶ್ವನಾಥರೆಡ್ಡಿ, ಪುರಸಭೆ ಸದಸ್ಯರಾದ ಕೆ.ಎಸ್.ಚಾಂದ್‌ಬಾಷಾ, ಭಟ್ಟಪ್ರಸಾದ್, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಮಸ್ತಾನ್‌ಸಾಬ್, ಯುವಘಟಕ ಅಧ್ಯಕ್ಷ ಆರ್.ಪಿ.ಶಶಿಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net