

ಹಾವೇರಿ: ಕಬ್ಬು ಬೆಳೆಗಾರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಜಿಲ್ಲೆಯ ಸಕ್ಕರೆ ಕಾರ್ಖಾನೆಯನ್ನು ಅಕ್ಟೋಬರ್ 1ರಿಂದ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ರಾಜ್ಯ ಕಬ್ಬು ಬೆಳೆಗಾರರ ಸಂದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಗುರುವಾರದಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯಲ್ಲಿ ಅನೇಕ ವರ್ಷಗಳಿಂದ ಸೆಪ್ಟಂಬರ್ ತಿಂಗಳ ಕೊನೆಯ ವಾರ ಅಥವಾ ಅಕ್ಟೋಬರ್ 1ರಿಂದ ಸಕ್ಕರೆ ಕಾರ್ಖಾನೆಯನ್ನು ಪ್ರಾರಂಭ ಮಾಡುತ್ತ ಬರಲಾಗಿದೆ. ಆದರೆ, ಈ ಬಾರಿ ಸಕ್ಕರೆ ಸಚಿವರು ನವೆಂಬರ್ ತಿಂಗಳಲ್ಲಿ ಕಾರ್ಖಾನೆ ಆರಂಭಿಸುವ ಕುರಿತು ಆದೇಶ ಹೊರಡಿಸಿದ್ದಾರೆ.
ಈ ಸಮಯದಲ್ಲಿ ರೈತರು ಬೆಳೆದ ಕಬ್ಬು ಒಣಗಲು ಶುರು ಮಾಡಿರುತ್ತವೆ. ಕಳೆದ ಎರಡೂವರೆ ತಿಂಗಳಿಂದ ಚೆನ್ನಾಗಿ ಮಳೆಯಾಗಿರುವುದರಿಂದ ಕಬ್ಬಿನ ಬೆಳೆಯು ಚೆನ್ನಾಗಿ ಬಂದಿದೆ. ಆದ್ದರಿಂದ ಆದಷ್ಟು ಬೇಗ ಕಬ್ಬು ಕಟಾವು ಮಾಡಿದರೆ ರೈತರಿಗೆ ಅನುಕೂಲ ಆಗಲಿದೆ. ಆದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಸಕ್ಕರೆ ಸಚಿವರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.