ಚೆಕ್ ಮೊತ್ತಕ್ಕಿಂತ ಎರಡರಷ್ಟು ದಂಡ ವಿಧಿಸಲು ಸೂಕ್ತ ಕಾರಣ ಅಗತ್ಯ: ಹೈಕೋರ್ಟ್ ಮಹತ್ವದ ಆದೇಶ

highcourt
Published on

ಬೆಂಗಳೂರು: ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಕಾಯ್ದೆಯ ಸೆಕ್ಷನ್ 138ರ ಪ್ರಕಾರ ಶಿಕ್ಷಾರ್ಹ ಅಪರಾಧಕ್ಕಾಗಿ ಆರೋಪಿಯನ್ನು ತಪ್ಪಿತಸ್ಥರೆಂದು ಪರಿಗಣಿಸಲು ಹಾಗೂ ಚೆಕ್ ಮೊತ್ತಕ್ಕಿಂತ ಎರಡರಷ್ಟು ಮೊತ್ತವನ್ನು ದಂಡವಾಗಿ ವಿಧಿಸುವಾಗ ವಿಚಾರಣಾ ನ್ಯಾಯಾಲಯವು ಕಡ್ಡಾಯವಾಗಿ ವಿಶೇಷ ಕಾರಣಗಳನ್ನು ನಿಗದಿಪಡಿಸಬೇಕು ಎಂದು ಹೈಕೋರ್ಟ್ ಹೇಳಿದೆ.

ವಿಚಾರಣಾ ನ್ಯಾಯಾಲಯ ಚೆಕ್‌ನ ದುಪ್ಪಟ್ಟು ಮೊತ್ತವನ್ನು ದಂಡವಾಗಿ ವಿಧಿಸುವಂತೆ ನೀಡಿದ್ದ ಆದೇಶ ಪ್ರಶ್ನಿಸಿ ಸರ್ಜಾಪುರ ನಿವಾಸಿ ಫ್ರಾನ್ಸಿಸ್ ಕ್ಸೇವಿಯರ್ ಡಬ್ಲ್ಯೂ ಎಂಬುವವರು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ವಿ. ಶ್ರೀಷಾನಂದ ಅವರ ಏಕಸದಸ್ಯ ಪೀಠ ಭಾಗಶ: ಮಾನ್ಯ ಮಾಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ತಮ್ಮ ಕಕ್ಷಿದಾರರ ವಿರುದ್ಧ ಚೆಕ್ ಮೊತ್ತದ ದುಪ್ಪಟ್ಟು ಹಣ ಒಟ್ಟಾರೆಯಾಗಿ 3 ಲಕ್ಷ ರೂ. ಪಾವತಿಸುವಂತೆ ಸೂಚನೆ ನೀಡಿದೆ. ಆದರೆ ಈ ಬಗ್ಗೆ ಯಾವುದೇ ರೀತಿಯ ಸೂಕ್ತ ಕಾರಣಗಳನ್ನು ಉಲ್ಲೇಖಿಸಿಲ್ಲ. ಹಾಗಾಗಿ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸುವಂತೆ ನ್ಯಾಯಪೀಠವನ್ನು ಮನವಿ ಮಾಡಿದರು.

ವಾದ - ಪ್ರತಿವಾದ ಆಲಿಸಿದ ಹಾಗೂ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ಆರೋಪಿಗೆ ಶಿಕ್ಷೆ ವಿಧಿಸುವಾಗ ನ್ಯಾಯಾಲಯವು ಪ್ರಮುಖ ಪಾತ್ರ ವಹಿಸುತ್ತದೆ. ಸೂಕ್ತ ಕಾರಣವಿದ್ದಲ್ಲಿ, ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ದುಪ್ಪಟ್ಟು ದಂಡ ವಿಧಿಸುವ ಅಧಿಕಾರವಿದೆ. ಆದರೆ, ಪ್ರಸ್ತುತ ಪ್ರಕರಣದಲ್ಲಿ ವಿಚಾರಣಾ ನ್ಯಾಯಲಯವು ಚೆಕ್ ಮೊತ್ತದ ದುಪ್ಪಟ್ಟು ದಂಡ ವಿಧಿಸಿ ಅದೇಶಿಸಿದ್ದು, ಸಮರ್ಪಕ ಕಾರಣ ನೀಡಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ವಿಚಾರಣಾ ನ್ಯಾಯಾಲಯ ಹೊರಡಿಸಿರುವ ಆದೇಶವನ್ನು ಮಾರ್ಪಡು ಮಾಡಿದೆ.

ಅದರಂತೆ ಅರ್ಜಿದಾರರು ದೂರುದಾರರಿಗೆ 3 ಲಕ್ಷ ವಿಧಿಸುವ ಬದಲಾಗಿ 2.25 ಲಕ್ಷ ಮೊತ್ತವನ್ನು ಪಾವತಿಸುವಂತೆ ತಿಳಿಸಿದೆ. ಅಷ್ಟೇ ಅಲ್ಲದೆ, ಪ್ರಕರಣದಲ್ಲಿ ರಾಜ್ಯ ಸರ್ಕಾರದ ಯಾವುದೇ ಪಾತ್ರವಿಲ್ಲ. ಹಾಗಾಗಿ ರಾಜ್ಯ ಸರ್ಕಾರಕ್ಕೆ 10 ಸಾವಿರ ರೂ. ಪಾವತಿ ಮಾಡಬೇಕಿಲ್ಲ ಎಂದು ಹೇಳಿದೆ. ಮಾತ್ರವಲ್ಲದೇ ಆದೇಶದಂತೆ ದೂರುದಾರರಿಗೆ 2.25 ಲಕ್ಷ ರೂ ವಿಧಿಸುವಂತೆ ಹೇಳಿದೆ. ತಪ್ಪಿದಲ್ಲಿ ಅರ್ಜಿದಾರರು ಒಂದು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕಾದಿತು ಎಚ್ಚರಿಕೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net