ಸುಧಾಮೂರ್ತಿ ಹೆಸರು ದುರ್ಬಳಕೆ ಪ್ರಕರಣ: ಆರೋಪಿ ಬಂಧಿಸಿದ ಪೊಲೀಸರು

arrest-new15384158611634987641
Published on

ಬೆಂಗಳೂರು: ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾಮೂರ್ತಿ ಅವರ ಹೆಸರು ದುರ್ಬಳಕೆ ಮಾಡಿಕೊಂಡು ವಂಚನೆ ಮಾಡಿದ್ದ ಆರೋಪಿಯನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.


ರಾಜಾಜಿನಗರ ನಿವಾಸಿ ಅರುಣ್ ಸುದರ್ಶನ್(೪೦) ಬಂಧಿತ. ಅಮೇರಿಕಾದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಸುಧಾಮೂರ್ತಿ ಮುಖ್ಯ ಅತಿಥಿಯಾಗಿ ಬರಲಿದ್ದಾರೆ ಎಂದು ಸುಳ್ಳು ಪ್ರಚಾರ ಮಾಡಿ ತಲಾ ೪೦ ಡಾಲರ್ ಪಡೆದು ಟಿಕೆಟ್ ಮಾರಾಟ ಮಾಡಿ ವಂಚಿಸಿದ ಆರೋಪದಡಿ ಲಾವಣ್ಯ ಮತ್ತು ಶೃತಿ ಎಂಬುವವರ ವಿರುದ್ಧ ಸುಧಾಮೂರ್ತಿ ಅವರ ಎಕ್ಸಿಕ್ಯೂಟಿವ್ ಅಸಿಸ್ಟೆಂಟ್ ಮಮತಾ ಸಂಜಯ್ ದೂರು ನೀಡಿದ್ದರು. ಈ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ದ್ವೇಷ ಸಾಧಿಸಲು ಕೃತ್ಯ:
ಬಂಧಿತ ಆರೋಪಿ ಅರುಣ್ ಹಾಗೂ ಅಮೇರಿಕಾದಲ್ಲಿ ನೆಲೆಸಿರುವ ಶೃತಿ ಪತಿ ಹತ್ತಿರದ ಸಂಬಂಧಿಕರು. ಬಾಲ್ಯದಲ್ಲಿ ಅರುಣ್ ಮತ್ತು ಶೃತಿಯ ಪತಿ ಜತೆಯಲ್ಲಿ ಬೆಳೆದಿದ್ದರು. ವರ್ಷಗಳು ಕಳೆದಂತೆ ಎರಡೂ ಕುಟುಂಬಗಳು ದೂರುವಾಗಿದ್ದವು. ಅಮೇರಿಕಾದಲ್ಲಿ ನೆಲೆಸಿದ್ದ ಶೃತಿ ದಂಪತಿ ಕಳೆದ ೧೦ ವರ್ಷಗಳಿಂದ ಅರುಣ್ ಜತೆಗೆ ಸಂಪರ್ಕ ಕಡಿದುಕೊಂಡಿದ್ದರು. ಹೀಗಾಗಿ ಅರುಣ್, ಶೃತಿ ದಂಪತಿ ವಿರುದ್ಧ ಅಂದಿನಿಂದ ದ್ವೇಷ ಕಾರುತ್ತಿದ್ದ. ಈ ನಡುವೆ ಕನ್ನಡ ಕೂಟ ಆಫ್ ನಾರ್ತ್ ಕ್ಯಾಲಿಫೋನಿರ್ಯಾ(ಕೆಕೆಎನ್‌ಸಿ) ವತಿಯಿಂದ ಅಮೇರಿಕಾದ ಸೇವಾ ಮಿಲ್ಪಿಟಸ್‌ನಲ್ಲಿ ಸೆ.೨೬ರಂದು ಡಾ.ಸುಧಾಮೂರ್ತಿ ಜತೆಗೆ ಮೀಟ್ ಆ್ಯಂಡ್ ಗ್ರೀಟ್ ವಿತ್ ಡಾ.ಸುಧಾಮೂರ್ತಿ ಎಂಬ ಕಾರ್ಯಕ್ರಮ ಆಯೋಜಿಸಲು ಶೃತಿ ಆಸಕ್ತರಾಗಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿದ್ದ ಸಂಬಂಧಿ ಅರುಣ್‌ಗೆ ಕರೆ ಮಾಡಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ್ದರು. ಈ ಕಾರ್ಯಕ್ರಮಕ್ಕೆ ಸುಧಾಮೂರ್ತಿ ಅವರನ್ನು ಮುಖ್ಯಅತಿಥಿಯಾಗಿ ಕರೆತರಲು ಸಾಧ್ಯವೇ ಎಂದು ಕೇಳಿಕೊಂಡಿದ್ದರು. ಅದಕ್ಕೆ ಒಪ್ಪಿದ್ದ ಅರುಣ್, ಈ ವಿಚಾರ ಇರಿಸಿಕೊಂಡು ಅಮೇರಿಕಾದಲ್ಲಿ ನೆಲೆಸಿರುವ ಶೃತಿ ದಂಪತಿ ಮರ್ಯಾದೆ ತೆಗೆಯಲು ತೀರ್ಮಾನಿಸಿದ್ದ.


ಆಪ್ತ ಸಹಾಯಕಿ ಹೆಸರಿನಲ್ಲಿ ವಂಚನೆ:
ಅರುಣ್, ಸುಧಾಮೂರ್ತಿ ಅವರ ಆಪ್ತಸಹಾಯಕಿ ಲಾವಣ್ಯ ಎಂಬುವವರೊಂದಿಗೆ ಮಾತನಾಡಿದ್ದೇನೆ. ಸುಧಾಮೂರ್ತಿ ಅವರು ಕಾರ್ಯಕ್ರಮಕ್ಕೆ ಬರಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಶೃತಿ ದಂಪತಿಗೆ ಹೇಳಿದ್ದ. ಸುಧಾಮೂರ್ತಿ ಅವರನ್ನು ಅಮೇರಿಕಾಗೆ ಕರೆತರಲು ಖರ್ಚು ವೆಚ್ಚಕ್ಕಾಗಿ ೫ ಲಕ್ಷ ರೂ. ಸಹ ಪಡೆದಿದ್ದ. ವಾಸ್ತವದಲ್ಲಿ ಸುಧಾಮೂರ್ತಿಗೆ ಲಾವಣ್ಯ ಹೆಸರಿನ ಆಪ್ತ ಸಹಾಯಕಿಯೇ ಇಲ್ಲ. ಆರೋಪಿ ಅರುಣ್, ಲಾವಣ್ಯ ಹೆಸರಿನಲ್ಲಿ ಶೃತಿ ದಂಪತಿಗೆ ಸಂದೇಶ ಕಳುಹಿಸಿ ನಂಬಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಸುಳ್ಳು ಹೇಳಿ ಅವಾಂತರ ಸೃಷ್ಟಿಸಿದ:
ಈತನ ಮಾತು ನಂಬಿದ ಶೃತಿ ದಂಪತಿ ಅಮೇರಿಕಾದಲ್ಲಿ ಮೀಟ್ ಆ್ಯಂಡ್ ಗ್ರೀಟ್ ವಿತ್ ಡಾ.ಸುಧಾಮೂರ್ತಿ ಎಂಬ ಕಾರ್ಯಕ್ರಮಕ್ಕೆ ಸಿದ್ಧತೆ ಆರಂಭಿಸಿದ್ದರು. ಈ ಕಾರ್ಯಕ್ರಮದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ಸಹ ನೀಡಿದ್ದರು. ಈ ಕಾರ್ಯಕ್ರಮಕ್ಕೆ ಟಿಕೆಟ್ ದರ ತಲಾ ೪೦ ಡಾಲರ್ ನಿಗದಿಗೊಳಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಇದನ್ನು ಗಮನಿಸಿದ್ದ ಸುಧಾಮೂರ್ತಿ ಅವರ ಎಕ್ಸಿಕ್ಯೂಟಿವ್ ಅಸಿಸ್ಟೆಂಟ್ ಮಮತಾ ಸಂಜಯ್ ಆಶ್ಚರ್ಯಗೊಂಡು ಕಾರ್ಯಕ್ರಮ ಆಯೋಜಕರನ್ನು ಸಂಪರ್ಕಿಸಿದಾಗ ಲಾವಣ್ಯ ಮತ್ತು ಶೃತಿ ಹೆಸರು ಹೇಳಿದ್ದರು.
ಹೀಗಾಗಿ ಮಮತಾ ಸಂಜಯ್ ಅವರು ಡಾ.ಸುಧಾಮೂರ್ತಿ ಅವರ ಹೆಸರು ದುರ್ಬಳಕೆ ಮಾಡಿಕೊಂಡು ಹಣ ಸಂಗ್ರಹಿಸಿ ವಂಚಿಸಿದ ಆರೋಪದಡಿ ಶೃತಿ ಮತ್ತು ಲಾವಣ್ಯ ವಿರುದ್ಧ ದೂರು ನೀಡಿದ್ದರು. ಈ ದೂರಿನ ಮೇರೆಗೆ ತನಿಖೆ ಮಾಡಿದಾಗ ಆರೋಪಿ ಅರುಣ್ ಸುದರ್ಶನ್, ಶೃತಿ ದಂಪತಿ ಮೇಲೆ ತನ್ನ ಹಳೇ ದ್ವೇಷ ತೀರಿಸಿಕೊಳ್ಳಲು ಡಾ.ಸುಧಾಮೂರ್ತಿ ಅವರು ಕಾರ್ಯಕ್ರಮಕ್ಕೆ ಬರಲು ಒಪ್ಪಿದ್ದಾರೆ ಎಂದು ಸುಳ್ಳು ಹೇಳಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net