

ತುಮಕೂರು: 224 ಶಾಸಕರನ್ನ ತನಿಖೆ ಮಾಡಬೇಕು ಎಂದು ಸಚಿವ ಸುಧಾಕರ್ ಸಿಎಂಗೆ ಪತ್ರ ಬರೆಯಲಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಬಿ.ಸುರೇಶ್‌ಗೌಡ ಹೇಳಿದರು.
ಸುಧಾಕರ್ ಆರೋಗ್ಯ ಸಚಿವ. ಹಾಗಾಗಿ ಎಲ್ಲರ ಶೀಲ ಪರೀಕ್ಷೆ ಮಾಡುವಂತೆ ಸಿಎಂಗೆ ಪತ್ರ ಬರೆಯಲಿ. ಮನುಷ್ಯನ ದೇಹದ ಅಂಗಾಂಗಗಳ ಬಗ್ಗೆ ಆರೋಗ್ಯ ಸಚಿವರಿಗೆ ಅರಿವಿದೆ. ಅವು ಹೇಗೆ ಕೆಲಸ ಮಾಡುತ್ತವೆ ಅನ್ನೋದು ಅವರಿಗೆ ತಿಳಿದಿದೆ. ಹಾಗಾಗಿ ಅವರೇ ಮುಖ್ಯಮಂತ್ರಿಗೆ ಹೇಳಿ ಪರೀಕ್ಷೆ ಮಾಡಿಸಲಿ ಎಂದು ತುಮಕೂರಿನಲ್ಲಿಂದು ಸುದ್ದಿಗಾರರ ಪ್ರಶ್ನೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಕಳ್ಳನ ಮನಸು ಹುಳ್ ಹುಳ್ಗೇ: ಸಚಿವ ಸುಧಾಕರ್ ಅವರದ್ದು ಕಳ್ಳನ ಮನಸು ಹುಳ್ ಹುಳ್ಗೆ ಅನ್ನುವಂತೆ ಕಾಣುತ್ತಿದೆ. ಯಾರು ಇದರಲ್ಲಿ ಭಾಗಿಯಾಗಿದ್ದಾರೋ ಅವರು ಈ ರೀತಿ ಹೇಳಿಕೆ ಕೊಡ್ತಾರೆ ಎಂದು ಜೆಡಿಎಸ್ ಶಾಸಕ, ಮಾಜಿ ಸಚಿವ ಎಸ್.ಆರ್.ಶ್ರೀನಿವಾಸ್ ತಿರುಗೇಟು ನೀಡಿದ್ದಾರೆ.
224 ಶಾಸಕರನ್ನು ತನಿಖೆ ಮಾಡೋದಾದ್ರೆ ನನ್ನೇ ಮೊದಲು ತನಿಖೆ ಮಾಡಲಿ. ಸುಧಾಕರ್ ರಾಜೀನಾಮೆ ಕೊಡಲಿ ಅವರು ತನಿಖೆಗೆ ಒಳಪಡಲಿ. ಎಲ್ಲರನ್ನು ತನಿಖೆ ಮಾಡಲಿ, ಎಲ್ಲರ ಸಾಚತನ ಗೊತ್ತಾಗಲಿದೆ ಎಂದರು.
ಇವರೆದೆಲ್ಲಾ ಏನೋ ಇದೆ ಹಾಗಾಗಿ ಹೆದರಿಕೊಂಡು ಕೋರ್ಟ್ ಗೆ ಹೋಗಿ ತಡೆಯಾಜ್ಞೆ ತಂದಿದ್ದಾರೆ. ಇವರ ಹೆಂಡತಿ ಮಕ್ಕಳೆ ಕೇಳಿರುತ್ತಾರೆ ಯಾಕೆ ತಡೆಯಾಜ್ಞೆ ತಂದಿದ್ದೀರಾ ಅಂತ. ಏನು ಇಲ್ಲದಿದ್ರೆ ಯಾಕೆ ತಡೆಯಾಜ್ಞೆ ತೆಗೆದುಕೊಂಡರು. ನಾವು ನಮ್ಮ ಮನಸಾಕ್ಷಿಗೆ ಸರಿಯಾಗಿರಬೇಕು. ಸುಧಾಕರ್ ಹೇಳುವ ಪ್ರಕಾರ ಬೇರೆಯೊಬ್ಬರು ತಪ್ಪು ಮಾಡಿದ್ದಾರೆ, ಹಾಗಾಗಿ ನಾನು ಮಾಡ್ತೀನಿ ಅಂತ ಅರ್ಥನಾ ಎಂದು ಪ್ರಶ್ನಿಸಿದರು.