

ಶಿವಮೊಗ್ಗ: ಭಾರತ ಮುಂದಿನ ದಿನಗಳಲ್ಲಿ ವಿಶ್ವದಲ್ಲಿ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ. ಬ್ಯಾಂಕಿಂಗ್ ಕ್ಷೇತ್ರವು ಈ ಸಾಧನೆ ಮಾಡುವಲ್ಲಿ ಮಹತ್ವಪೂರ್ಣ ಪಾತ್ರ ವಹಿಸಲಿದೆ ಎಂದು ಕರ್ಣಾಟಕ ಬ್ಯಾಂಕ್ ಸಿಇಒ ಮತ್ತು ಮಾಜಿ ಚೇರ್ಮನ್ ಡಾ. ಮಹಾಭಲೇಶ್ವರ ಭಟ್ ವಿಶ್ವಾಸ ವ್ಯಕ್ತಪಡಿಸಿದರು.
ಜೆಎನ್‌ಎನ್‌ಸಿ ಕಾಲೇಜಿನ ಎಂಬಿಎ ವಿಭಾಗದಲ್ಲಿ ಶುಕ್ರವಾರ ಎರಡು ದಿನಗಳ ಆಧುನಿಕ ಬ್ಯಾಂಕಿಂಗ್ ಕ್ಷೇತ್ರದ ಸಮಕಾಲಿನ ಸವಾಲುಗಳು ಹಾಗೂ ಸಾಧ್ಯತೆ ವಿಷಯದ ಮೇಲೆ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಸಿದ ಅವರು, ಭಾರತದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಕೇಂದ್ರ ಬ್ಯಾಂಕ್ ಸಮರ್ಪಕವಾಗಿ ನಿರ್ವಹಿಸುತ್ತಿದೆ ಹಾಗೂ ನಿಯಂತ್ರಿಸುತ್ತಿದೆ ಎಂದರು.
ಇಂದು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ತಂತ್ರಜ್ಞಾನ ಆಧಾರಿತ ಬ್ಯಾಂಕಿಂಗ್ ವ್ಯವಸ್ಥೆಯನ್ನು ಗ್ರಾಹಕ ಸ್ನೇಹಿ ಸೇವೆಗಳನ್ನು ನೀಡುತ್ತಿದೆ. ಇಂದಿನ ಜಾಗತೀಕರಣ ಯುಗದಲ್ಲಿ ಪ್ರತಿಯೊಂದು ಉದ್ಯಮವು ತನ್ನನ್ನು ಪರಿವರ್ತನೆಗೆ ತೊಡಗಿಸಿಕೊಂಡಾಗ ಮಾತ್ರ ಯಶಸ್ಸು ಗಳಿಸಲು ಸಾಧ್ಯ ಎಂದು ಹೇಳಿದರು.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆದ ಬದಲಾವಣೆ ಮತ್ತು ಭವಿಷ್ಯದಲ್ಲಿ ಕೃತಕ ಬುದ್ಧಿಮತ್ತೆಯ ಮೂಲಕ ಬ್ಯಾಂಕಿಂಗ್ ಸೇವೆ ನೀಡುವ ಕುರಿತು ಒಮಾನದ ಪೋಸ್ಟ್ ಗ್ರೇಜ್ಯುಯೇಷನ್ ಸ್ಟಡೀಸ್ ಕಾಲೇಜು ಆಫ್ ಬ್ಯಾಂಕಿಂಗ್ ಆ್ಯಂಡ್ ಫೈನಾಶ್ಸಿಯಲ್ ಸ್ಟಡೀಸ್ ನಿರ್ದೇಶಕ ಡಾ. ಆನಂದ ಮಾಹಿತಿ ನೀಡಿದರು.
ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ್ ಮಾತನಾಡಿ, ಜಾಗತೀಕರಣದ ಸವಾಲುಗಳು ಹಾಗೂ ಆರ್ಥಿಕ ಬೆಳವಣಿಗೆ ಪೂರಕವಾಗಿ ವ್ಯವಸ್ಥೆ ರೂಪಗಳಬೇಕೆಂದು ಹೇಳಿದರು. ಕಾಲೇಜಿನ ಪ್ರಾಚಾರ್ಯ ಡಾ. ಪಿ.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನದಲ್ಲಿ ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ನೂರಕ್ಕೂ ಅಧಿಕ ಪ್ರಬಂಧ ಮಂಡಿಸಲಾಯಿತು. ಸಹಾಯಕ ಪ್ರಾಧ್ಯಾಪಕರಾದ ಡಾ. ಜಿ.ಪಿ.ನಾಗೇಶ್, ಡಾ. ವಿಕ್ರಮ್, ಎಂಬಿಎ ವಿಭಾಗದ ನಿರ್ದೇಶಕ ಡಾ. ಸಿ.ಶ್ರೀಕಾಂತ್, ಡಾ. ಹರ್ಷ ಮಠದ್, ಡಾ. ಪ್ರವೀಣ್‌ಕುಮಾರ್ ಇದ್ದರು.