ಹೊಸ ಆಲೋಚನೆಗಳಿಂದ ಜೀವನದಲ್ಲಿ ಯಶಸ್ಸು

jnnc
ಶಿವಮೊಗ್ಗದ ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಹ್ಯಾಕಥಾನ್‌ಅನ್ನು ನಿವೇದನ್ ನೆಂಪೆ ಉದ್ಘಾಟಿಸಿದರು. ಎಸ್.ಎನ್.ನಾಗರಾಜ, ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ, ಡಾ. ವೈ.ವಿಜಯಕುಮಾರ್, ಡಾ. ಎಸ್.ವಿ.ಸತ್ಯನಾರಾಯಣ ಇತರರಿದ್ದರು.
Published on

ಶಿವಮೊಗ್ಗ: ಬದುಕಿನಲ್ಲಿ ಎದುರಾಗುವ ಅವಮಾನಗಳಿಂದ ಕುಗ್ಗದೇ ಸ್ಪೂರ್ತಿಯಿಂದ ಮುನ್ನುಗ್ಗಬೇಕು. ನಾವು ಆರಂಭಿಸುವ ನಾವೀನ್ಯ ಯೋಜನೆ ಕೆಲವರಿಗೆ ಇಷ್ಟವಾಗದೇ ಇರಬಹುದು. ಆದರೆ ಮುಂದೊಂದು ದಿನ ಯಶಸ್ಸು ಪಡೆಯಲು ಸಾಧ್ಯ ಎಂದು ಯುವ ಉದ್ಯಮಿ ನಿವೇದನ್ ನೆಂಪೆ ಹೇಳಿದರು.

ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನ ನಾವೀನ್ಯತೆ ಮತ್ತು ಉದ್ಯಮಶೀಲ ಕೇಂದ್ರದಿಂದ ಶನಿವಾರ ಏರ್ಪಡಿಸಿದ್ದ ಎರಡು ದಿನಗಳ ರಾಷ್ಟ್ರ ಮಟ್ಟದ ಫಾಸ್ ಹ್ಯಾಕ್ -2024 ಉದ್ಘಾಟಿಸಿ ಮಾತನಾಡಿ, ಯಾವುದೇ ಯಶಸ್ವಿ ವ್ಯಕ್ತಿ ಸಾಧನೆಗಳಿಂದ ಪಡೆವ ಪ್ರೇರಣೆ ಕ್ಷಣಿಕ. ನಮ್ಮ ಆತ್ಮವಿಶ್ವಾಸ ಮತ್ತು ನಂಬಿಕೆ ಶಾಶ್ವತ ಎಂದು ತಿಳಿಸಿದರು.
ಪ್ರತಿಯೊಬ್ಬರು ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಬೇಕು. ನಮ್ಮನ್ನು ಹೀಯಾಳಿಸುವವರಿಗೆ ಹೆದರಿ ಬದುಕು ಹಾಗೂ ನಿರ್ಧಾರ ಬದಲಿಸುವ ಅವಶ್ಯಕತೆಯಿಲ್ಲ. ಹೊಸತನದ ಪ್ರಯೋಗಗಳನ್ನು ನಿರಂತರವಾಗಿ ಮಾಡಬೇಕು. ಬದುಕು ಉತ್ತಮವಾಗಿಸಿಕೊಳ್ಳಬೇಕು ಎಂದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ವಿಶಿಷ್ಟ ವ್ಯಕ್ತಿತ್ವಗಳಿಂದ ಪಡೆದ ಪ್ರೇರಣೆ ಬದುಕಿನಲ್ಲಿ ವೈಶಿಷ್ಟ್ಯಪೂರ್ಣ ಬದಲಾವಣೆ ತರುತ್ತದೆ. ಹ್ಯಾಕಥಾನ್‌ನಂತಹ ವೇದಿಕೆ ನಮ್ಮಲ್ಲಿ ಸೃಜನಶೀಲತೆ, ಸಂಶೋಧನಾರ್ಥಿಗಳೊಂದಿಗೆ ಸಂಪರ್ಕ, ಪ್ರಯೋಗಶೀಲ ಗುಣಗಳನ್ನು ಉತ್ತೇಜಿಸಲಿದೆ. ವೃತ್ತಿಪರ ಕ್ಷೇತ್ರದಲ್ಲಿ ಪ್ರಯೋಗಗಳು ಕಷ್ಟವಿರಬಹುದು. ಅದರೆ ವಿದ್ಯಾರ್ಥಿ ಜೀವನದಲ್ಲಿ ಮಾಡುವ ಪ್ರಯೋಗಗಳಿಗೆ ಸೋಲಿನ ಭೀತಿ ಇರುವುದಿಲ್ಲ ಎಂದು ತಿಳಿಸಿದರು.
ಎನ್‌ಇಎಸ್ ನಿರ್ದೇಶಕ ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ ಮಾತನಾಡಿ, ಆವಿಷ್ಕಾರಿ ಪ್ರಯೋಗಗಳ ವಿಚಾರದಲ್ಲಿ ಶಿವಮೊಗ್ಗ ವಿಶಿಷ್ಟ ಸ್ಥಾನ ಪಡೆದಿದೆ. ಕಾರುಗಳಿಗೆ ಬಳಕೆಯಾಗುವ ನಿರ್ದಿಷ್ಟ ಬಿಡಿಭಾಗಗಳು ಉತ್ಪಾದನೆಯಾಗುವುದು ಶಿವಮೊಗ್ಗದ ಫೌಂಡ್ರಿಗಳಿಂದ ಎಂಬುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಅಹೋರಾತ್ರಿ ನಡೆಯುವ ಹ್ಯಾಕಥಾನ್‌ನಲ್ಲಿ ಶಿವಮೊಗ್ಗ, ಉಡುಪಿ, ಮಂಗಳೂರು, ಚಿಕ್ಕಮಗಳೂರು, ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಗಳ 40ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು.
ಪ್ರಾಚಾರ್ಯ ಡಾ. ವೈ.ವಿಜಯಕುಮಾರ್, ನಾವೀನ್ಯತೆ ಮತ್ತು ಉದ್ಯಮಶೀಲತೆ ಕೇಂದ್ರದ ಯೋಜನಾ ವ್ಯವಸ್ಥಾಪಕ ಕೆ.ಎಲ್.ಅರುಣ್ ಕುಮಾರ್, ಸಂಶೋಧನಾ ಡೀನ್ ಡಾ. ಎಸ್.ವಿ.ಸತ್ಯನಾರಾಯಣ, ಕಾರ್ಯಕ್ರಮ ಸಂಯೋಜಕ, ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿದ್ಯಾರ್ಥಿ ಆರ್.ಶಶಾಂಕ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net