ಸಂಘಟಿತ ಕೆಲಸಕ್ಕೆ ಒಲಿಯಿತು ಯಶಸ್ಸು

sor bjp
ಸೊರಬ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಮುಖಂಡರ ಸಭೆಯಲ್ಲಿ ತಾಲೂಕು ಘಟಕದ ಅಧ್ಯಕ್ಷ ಬಿ.ಎಸ್.ಪ್ರಕಾಶ್, ಶಿವಕುಮಾರ್, ಪ್ರಕಾಶ್, ಎಂ.ಡಿ.ಉಮೇಶ್, ದೇವೇಂದ್ರಪ್ಪ ಇದ್ದರು.
Published on

ಸೊರಬ: ಲೋಕಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾರ್ಯಕರ್ತರು ಹಾಗೂ ಮುಖಂಡರು ಸಂಘಟಿತವಾಗಿ ಕೆಲಸ ಮಾಡಿದ್ದರಿಂದ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ ಎಂದು ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಬಿ.ಎಸ್.ಪ್ರಕಾಶ್ ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಶಿಕ್ಷಕರು ಹಾಗೂ ಪದವೀಧರ ಮತದಾರರು ಮೈತ್ರಿ ಅಭ್ಯರ್ಥಿಗಳಾದ ಡಾ. ಧನಂಜಯ ಸರ್ಜಿ, ಎಸ್.ಎಲ್.ಬೋಜೇಗೌಡ ಅವರನ್ನು ನಿರೀಕ್ಷೆಯಂತೆ ಗೆಲ್ಲಿಸಿದ್ದಾರೆ ಎಂದರು.
30 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪ್ರಚಾರದ ಅವಧಿ ಕಡಿಮೆ ಇದ್ದರೂ ಶಿಕ್ಷಕರು ಹಾಗೂ ಪದವೀಧರರು ನಿರೀಕ್ಷೆಗೂ ಮೀರಿ ಬೆಂಬಲಿಸಿದ್ದಾರೆ. ಇದರಿಂದ ಬಿಜೆಪಿಯ ಶಕ್ತಿ ಮತ್ತಷ್ಟು ಹೆಚ್ಚಾಗಿದೆ. ಪ್ರತಿ 20 ಮತದಾರರ ವಿಶ್ವಾಸ ಪಡೆಯಲು ಪಕ್ಷದಿಂದ ಒಬ್ಬರನ್ನು ನೇಮಿಸಿದ್ದರಿಂದ ಅಧಿಕ ಮತಗಳ ಗೆಲುವು ಪಡೆಯಲು ಸಾಧ್ಯವಾಗಿದೆ. ಚುನಾವಣಾ ಪರ್ವ ಮುಗಿದಿದೆ. ತಾಲೂಕಿನ ಅಭಿವೃದ್ಧಿ ಬಗ್ಗೆ ಗಮಹರಿಸಿ ಜನರ ಕಷ್ಟ ಹಾಗೂ ಸಮಸ್ಯೆಗಳಿಗೆ ಧ್ವನಿಯಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ತಾಲೂಕಿನಲ್ಲಿ ಆಡಳಿತ ವ್ಯವಸ್ಥೆ ಕುಸಿದಿದೆ. ತಮ್ಮನ್ನು ಆಯ್ಕೆ ಮಾಡಿದ ಜನರಿಗೆ ಒಳ್ಳೆಯದು ಮಾಡಲು ಶಾಸಕರು ಮುಂದಾಗಬೇಕು. ನಮ್ಮ ಸರ್ಕಾರದ ಅವಧಿಯಲ್ಲಿ ತಾಲೂಕು, ಪಟ್ಟಣ ಸೇರಿ ಅನೇಕ ಕಾಮಗಾರಿಗಳು ಪ್ರಾರಂಭವಾಗಿದ್ದವು. ಆದರೆ ಅವು ಆಮೆಗತಿಯಲ್ಲಿ ಸಾಗುತ್ತಿವೆ. ಅಲ್ಲಿಯ ಅವ್ಯವಸ್ಥೆ ಬಗ್ಗೆ ಗಮನ ನೀಡುತ್ತಿಲ್ಲ. ಶಾಸಕರು ಒಂದು ವರ್ಷದಲ್ಲಿ ನಯಾಪೈಸೆಯನ್ನೂ ಅನುದಾನ ತಂದಿಲ್ಲ. ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ನಮ್ಮ ಸರ್ಕಾರದ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳಿಗೆ ಅನುದಾನ ತರಲು ಶ್ರಮಿಸಬೇಕು. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ನೀಗಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ಶಿವಕುಮಾರ್, ಪ್ರಕಾಶ್, ಪುರಸಭೆ ಸದಸ್ಯ ಎಂ.ಡಿ.ಉಮೇಶ್, ಮುಖಂಡರಾದ ದೇವೇಂದ್ರಪ್ಪ, ಸುರೇಶ್, ಅಶೋಕ್ ಶೇಟ್, ಗುರುಮೂರ್ತಿ, ಗೌರಮ್ಮ ಭಂಡಾರಿ, ಜಾನಕಪ್ಪ ಒಡೆಯರ್, ಅಶೋಕ ಪೈ, ಕೊಟ್ರೇಶ್ ಸ್ವಾಮಿ, ಓಂಕಾರಪ್ಪ, ಡಿ.ಶಿವಯೋಗಿ, ವಿನಯ್ ಗುತ್ತೇರ್, ಶೆರ್ವಿ ವಿನಯ್, ಹರೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net