

ಬೆಂಗಳೂರು: ರಾಜ್ಯಾದ್ಯಂತ ವ್ಯಾಪಕ ಮಳೆ, ಪ್ರವಾಹದಿಂದಾಗಿರುವ ನಷ್ಟದ ವರದಿಯನ್ನು ವಾರದೊಳಗೆ ಸಲ್ಲಿಸಬೇಕು. ಹೆಚ್ಚಿನ ಅನಾಹುತಗಳಾಗದಂತೆ ಸಮಾರೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಮಳೆ-ನೆರೆ ಬಾಧಿತ 15 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ಹಾನಿ ಅವಲೋಕನ ಸಭೆ ನಡೆಸಿದ ಅವರು, ಪ್ರವಾಹ ಪರಿಸ್ಥಿತಿ ಎದುರಿಸಲು ಹಣಕಾಸಿನ ಕೊರತೆಯಿಲ್ಲ. ಕೇಂದ್ರ ಸರ್ಕಾರವೂ ಅಗತ್ಯ ನೆರವು ಕೊಡುವುದಾಗಿ ಭರವಸೆ ನೀಡಿದೆ. ತುರ್ತು ಪರಿಹಾರ ಕಾರ್ಯಗಳಿಗೆ 85.49 ಕೋಟಿ ರೂ. ಈಗಾಗಲೇ ಬಿಡುಗಡೆ ಮಾಡಿದ್ದು, ರಕ್ಷಣೆ ಮತ್ತು ಸ್ಥಳಾಂತರ ಕಾರ್ಯಗಳಿಗೆ ಬೇಕಾದ ಸಂಪನ್ಮೂಲಗಳನ್ನು ಜಿಲ್ಲಾಡಳಿತಗಳಿಗೆ ಒದಗಿಸಲಾಗಿದೆ ಎಂದು ವಿವರಿಸಿದರು.
ಮಾನವೀಯ ಸಂವೇದನೆ: ಸಂಕಷ್ಟ ಸನ್ನಿವೇಶದಲ್ಲಿ ಮಾನವೀಯ ಸಂವೇದನೆ, ಎಚ್ಚರಿಕೆಯಿಂದ ಕೆಲಸ ಮಾಡುವುದು ಅಷ್ಟೇ ಮುಖ್ಯವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಮಾರ್ಗದರ್ಶನ ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದು ಬಿಎಸ್ವೈ ತಾಕೀತು ಮಾಡಿದರು. ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜನರ ನೋವಿಗೆ ತಕ್ಷಣ ಸ್ಪಂದಿಸಬೇಕು. ಜನರ ಜತೆಗೆ ಜಾನುವಾರುಗಳ ರಕ್ಷಣೆ ಹಾಗೂ ಅಗತ್ಯ ಮೇವಿನ ವ್ಯವಸ್ಥೆ ಮಾಡಬೇಕು. ಸಂತ್ರಸ್ತರ ರಕ್ಷಣೆ ಹಾಗೂ ಸ್ಥಳಾಂತರ, ಕಾಳಜಿ ಕೇಂದ್ರಗಳಲ್ಲಿ ನೆಲೆ ಕಲ್ಪಿಸುವುದು ಸೇರಿ ಪ್ರತಿಯೊಂದು ಕೆಲಸವನ್ನೂ ಪಾರದರ್ಶಕವಾಗಿ ನಿರ್ವಹಿಸಬೇಕು. ಪ್ರವಾಹಕ್ಕೆ ತುತ್ತಾಗಬಹುದಾದ ಗ್ರಾಮಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಕ್ರಮವಹಿಸಬೇಕು ಎಂದು ಹೇಳಿದರು.
ಕರೊನಾ ವೈರಸ್ ಸೋಂಕು ಹಿನ್ನೆಲೆಯಲ್ಲಿ ಮಾದರಿ ಕಾರ್ಯನಿರ್ವಹಣಾ ಪ್ರಕ್ರಿಯೆ (ಎಸ್ಒಪಿ)ಯನ್ನು ಕಾಳಜಿ ಕೇಂದ್ರಗಳಲ್ಲಿ ಸಂತ್ರಸ್ತರಿಗೆ ಉತ್ತಮ ಗುಣಮಟ್ಟದ ಆಹಾರ ಪೂರೈಸಿ, ಈ ಬಗ್ಗೆ ಯಾವುದೇ ದೂರುಗಳು ಬರಬಾರದು ಎಂದು ಬಿಎಸ್ವೈ ತಾಕೀತು ಮಾಡಿದರು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ಭಾಸ್ಕರ್, ಸಿಎಂ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ, ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್.ಪ್ರಸಾದ್, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅಜುಂ ಪರ್ವೆಜ್ ಇತರರಿದ್ದರು.
ನೀತಿ ಸಂಹಿತೆ ಇರುವ ಕಾರಣ ವಿವರವಾಗಿ ಏನೂ ಹೇಳಲಾಗದು. 15 ಡಿಸಿಗಳ ಜತೆಗೆ ಮಳೆ ಪರಿಸ್ಥಿತಿ ಹಾಗೂ ನೆರವಿನ ಬಗ್ಗೆ ಚರ್ಚಿಸಿ, ಪರಿಹಾರ ಸೇರಿ ಹಲವು ಸೂಚನೆ ನೀಡಿರುವೆ. ಕೇಂದ್ರ ಗೃಹ ಸಚಿವರೊಂದಿಗೆ ಮಾತನಾಡಿದ್ದು, ಅಗತ್ಯ ನೆರವಿನ ಭರವಸೆ ಕೊಟ್ಟಿದ್ದಾರೆ. ರೈತರ ರಕ್ಷಣೆಗೆ ಬದ್ಧವಾಗಿದ್ದೇವೆ, ಎಲ್ಲವನ್ನೂ ಸರಿಪಡಿಸುತ್ತೇವೆ. | ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ