

ಶಿವಮೊಗ್ಗ: ತನಿಖೆಯಲ್ಲಿರುವ ಪ್ರಕರಣಗಳ ವಿಮರ್ಶೆ ನಡೆಸಿ ಕಾಲಮಿತಿಯೊಳಗೆ ಪೂರೈಸಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸುವಂತೆ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ತನಿಖಾಧಿಕಾರಿಗಳಿಗೆ ಸೂಚಿಸಿದರು.
ನಗರದ ಡಿಎಆರ್ ಸಭಾಂಗಣದಲ್ಲಿ ಬುಧವಾರ ಪೊಲೀಸ್ ಉಪಾಧೀಕ್ಷಕರು, ಪೊಲೀಸ್ ವೃತ್ತ ನಿರೀಕ್ಷಕರು ಹಾಗೂ ಠಾಣಾಧಿಕಾರಿಗಳೊಂದಿಗೆ ಅಪರಾಧ ವಿಮರ್ಶನಾ ಸಭೆ ನಡೆಸಿದ ಅವರು, ಈಗಾಗಲೇ ಕಾಲ್ನಡಿಗೆ ಮತ್ತು ಏರಿಯಾ ಡಾಮಿನೇಷನ್ ವಿಶೇಷ ಗಸ್ತನ್ನು ಠಾಣಾ ವ್ಯಾಪ್ತಿಯ ಸೂಕ್ಷ್ಮಪ್ರದೇಶ ಹಾಗೂ ಹೊರವಲಯಗಳಿಗೆ ವಿಸ್ತರಿಸಿ ಸಾರ್ವಜನಿಕವಾಗಿ ಉಪಟಳ ನೀಡುವವರ ಮೇಲೆ ಲಘು ಪ್ರಕರಣ ದಾಖಲಿಸಬೇಕು ಎಂದರು.
ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ, ಸಾಗಣೆ, ಸಂಗ್ರಹ, ಬೆಳೆಯುವ ಬಗ್ಗೆ ತಳಮಟ್ಟದ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿ ಎನ್‌ಡಿಪಿಎಸ್ ಕಾಯ್ದೆಯಡಿ ಹೆಚ್ಚು ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು. ಅನುಮಾನ ಬಂದವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಗಾಂಜಾ ಸೇವನೆ ದೃಢಪಟ್ಟರೆ ಪ್ರಕರಣ ದಾಖಲಿಸಬೇಕು ಎಂದು ಸೂಚಿಸಿದರು.
ಸಂಘಟಿತ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಠಾಣಾ ವ್ಯಾಪ್ತಿಯಲ್ಲಿ ತಳಮಟ್ಟದ ಮಾಹಿತಿ ಕಲೆಹಾಕಿ ದಾಳಿ ನಡೆಸಿ ಕ್ರಮ ಕೈಗೊಳ್ಳಬೇಕು. ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ಅಪಘಾತ ಸ್ಥಳಗಳಿಗೆ ಭೇಟಿ ನೀಡಿ ಜಂಟಿ ಪರಿಶೀಲನೆ ನಡೆಸಿ ಸಂಚಾರ ಸೂಚನಾ ಫಲಕಗಳು, ರಂಬಲ್ ಸ್ಟ್ರಿಪ್ಸ್, ಕ್ಯಾಟ್‌ಐಸ್, ರೋಡ್ ಹಂಪ್ಸ್‌ಗಳನ್ನು ಅಳವಡಿಸುವಂತೆ ಸಲಹೆ ನೀಡಿದರು.
ಮಾದಕ ದ್ರವ್ಯ ವ್ಯಸನದ ಬಗ್ಗೆ ಯುವಜನತೆ ಮತ್ತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಸಂಬಂಧ ಶಾಲಾ ಕಾಲೇಜು ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಹೆಚ್ಚು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡು ವಿದ್ಯಾರ್ಥಿಗಳಲ್ಲಿ ಮಾದಕ ದ್ರವ್ಯ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಸಮುದಾಯದತ್ತ ಪೊಲೀಸ್‌ನ ಭಾಗವಾಗಿ ಠಾಣಾ ವ್ಯಾಪ್ತಿಯಲ್ಲಿ ಬೀಟ್ ಸಮಿತಿ ಸಭೆ, ಮೊಹಲ್ಲಾ ಸಭೆ, ನೊಂದವರ ಸಭೆ, ಯುವಜನ ಸಭೆ, ಪರಿಶಿಷ್ಟ ಜಾತಿ ಮತ್ತು ಪಂಗಡಗಳವರ ಸಭೆ ಮತ್ತು ಜನಸಂಪರ್ಕ ಸಭೆಗಳನ್ನು ನಿರಂತರವಾಗಿ ಮತ್ತು ಕಡ್ಡಾಯವಾಗಿ ನಡೆಸಬೇಕು ಎಂದರು.
ಎಲ್ಲ ಠಾಣೆಗಳಲ್ಲಿ ಕಡ್ಡಾಯವಾಗಿ ಹಗಲು ಗಸ್ತು ಮತ್ತು ರಾತ್ರಿ ಗಸ್ತನ್ನು ಜಾರಿ ಮಾಡಬೇಕು ಹಾಗೂ ಸಿಬ್ಬಂದಿಗಳನ್ನು ಗಸ್ತಿಗೆ ನೇಮಕ ಮಾಡುವ ಸಂದರ್ಭದಲ್ಲಿ ಆಯಾ ಬೀಟ್ ವ್ಯಾಪ್ತಿಯಲ್ಲಿನ ಎಂಓಬಿ, ರೌಡಿ ಹಾಗೂ ಪೂರ್ವ ಸಜಾ ವ್ಯಕ್ತಿಗಳ ಚಟುವಟಿಕೆಗಳ ಬಗ್ಗೆ ಪರಿಶೀಲಿಸುವಂತೆ ಸೂಕ್ತ ನಿರ್ದೇಶನ ನೀಡಬೇಕು. ಗಸ್ತು ಮಾಡುವಾಗ ಎಲ್ಲ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಸ್ಮಾರ್ಟ್ ಇ-ಬೀಟ್, ಎಂಸಿಸಿಟಿಎನ್‌ಎಸ್ ತಂತ್ರಾಂಶಗಳನ್ನು ಕಡ್ಡಾಯವಾಗಿ ಬಳಕೆ ಮಾಡಬೇಕು ಎಂದರು.
ಚೆನ್ನಮ್ಮ ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಶಾಲಾ ಕಾಲೇಜುಗಳ ಪ್ರಾರಂಭ ಮತ್ತು ಮುಕ್ತಾಯದ ಸಂದರ್ಭದಲ್ಲಿ ಶಾಲಾ ಕಾಲೇಜುಗಳ ಹತ್ತಿರ, ಪಾರ್ಕ್, ಬಸ್ ನಿಲ್ದಾಣ ಹಾಗೂ ಇತರೆ ಜನನಿಭಿಡ ಪ್ರದೇಶಗಳಲ್ಲಿ ಗಸ್ತು ಮಾಡಬೇಕು. ಈ ಸಂದರ್ಭದಲ್ಲಿ ಸಾರ್ವಜನಿಕ ಉಪಟಳ ನೀಡುವುದು, ಚುಡಾಯಿಸುವುದು, ತೊಂದರೆ ನೀಡುವುದು ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಎಎಸ್‌ಪಿ ಅನಿಲ್ಕುಮಾರ್ ಭೂಮರಡ್ಡಿ, ಡಿವೈಎಸ್‌ಪಿಗಳಾದ ಬಾಬು ಆಂಜನಪ್ಪ, ಎಂ.ಸುರೇಶ್, ಗೋಪಾಲಕೃಷ್ಣ ಟಿ ನಾಯಕ್, ಗಜಾನನ ವಾಮನ ಸುತಾರ ಮತ್ತು ಜಿಲ್ಲೆಯ ಎಲ್ಲ ಇನ್‌ಸ್ಪೆಕ್ಟರ್‌ಗಳು, ಪಿಎಸ್‌ಐಗಳು ಉಪಸ್ಥಿತರಿದ್ದರು.