

ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಆಭರಣಗಳ ಪರಿಶುದ್ಧತೆ ಗುಣಮಟ್ಟ ದೃಢೀಕರಿಸಲು ರಾಜ್ಯದಲ್ಲಿ ಜೂ.16ರಿಂದ ಹಾಲ್ಮಾರ್ಕ್ ನಿಯಮ ಜಾರಿಗೆ ಬರಲಿದೆ. ಹೀಗಾಗಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ ಪರವಾನಗಿ ಪಡೆಯುವ ಅವಕಾಶ ಕಲ್ಪಿಸಲಾಗಿದೆ.
ರಾಜ್ಯದಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಆಭರಣ ಮಳಿಗೆಗಳಿದ್ದು, ಶೇ.90 ಚಿನ್ನಾಭರಣ ತಯಾರಕರು ಹಾಗೂ ಮಾಲೀಕರು ಹಾಲ್ಮಾರ್ಕ್ ಪರವಾನಗಿ ಪಡೆದಿಲ್ಲ. ಈವರೆಗೆ ಶೇ.10 ಮಾಲೀಕರು ಮಾತ್ರವೇ ಹೊಂದಿದ್ದಾರೆ. ಉಳಿದವರು ಪರವಾನಗಿ ಪಡೆಯುವುದು ಕಡ್ಡಾಯವಾಗಿದೆ. ಆದ್ದರಿಂದ, ಈಗಾಗಲೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲಾಗುತ್ತದೆ ಎಂದು ರಾಜ್ಯ ಆಭರಣ ವರ್ತಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಿ.ರಾಮಾಚಾರಿ ತಿಳಿಸಿದ್ದಾರೆ. ಈ ಹಿಂದೆ ಕೆಲ ಮಾಲೀಕರು ಆಭರಣ ಖರೀದಿಸುವ ಸಂದರ್ಭದಲ್ಲಿ ಕಡಿಮೆ ಗುಣಮಟ್ಟ ಇರುವ ಚಿನ್ನವನ್ನು ಗ್ರಾಹಕರಿಗೆ ಪರಿಶುದ್ಧ ಚಿನ್ನವೆಂದು ನಂಬಿಸಿ ಮಾರಾಟ ಮಾಡುತ್ತಿದ್ದರು.
14,18 ಮತ್ತು 22 ಕ್ಯಾರಟ್ ಬಂಗಾರದಲ್ಲಿ ಕಡಿಮೆ ಪ್ರಮಾಣದಲ್ಲಿ ಬೇರೆ ಲೋಹದ ಮಿಶ್ರಿಣ ಮಾಡುತ್ತಿರುವ ಆರೋಪವಿತ್ತು. ಆ ಚಿನ್ನವನ್ನು ಖರೀದಿಸಿದ ನಂತರ ಮರು ಮಾರಾಟ ಸಂದರ್ಭದಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು. ಹಾಲ್ಮಾರ್ಕ್ ನಿಯಮ ಜಾರಿಯಾದರೆ ಇಂತಹ ಅಕ್ರಮಗಳಿಗೆ ಕಡಿವಾಣ ಬೀಳಲಿದೆ.