ಲೋಕಸಭೆ ಚುನಾವಣೆ: ಬಿಜೆಪಿ-ಜೆಡಿಎಸ್​ ಮೈತ್ರಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ! ಇಲ್ಲಿವೆ ಫೋಟೋಗಳು

1 fibnalt
Published on

ಬೆಂಗಳೂರು: ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಬಿಜೆಪಿ ಕರ್ನಾಟಕದಲ್ಲಿ ಜೆಡಿಎಸ್‌ ಜೊತೆ ಸೇರಿ 28 ಕ್ಷೇತ್ರಗಳನ್ನು ಗೆಲ್ಲುವ ಗುರಿಯನ್ನು ಹೊಂದಿದೆ. ಇಂದು (ಸೋಮವಾರ) ಲೋಕಸಭೆ ಚುನಾವಣೆಗೆ ಕರ್ನಾಟಕದಿಂದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದರು.

ಮೈಸೂರು-ಕೊಡುಗು ಲೋಕಸಭಾ ಕ್ಷೇತ್ರಕ್ಕೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಬೆಂಗಳೂರು ಕೇಂದ್ರದಲ್ಲಿ ಪಿ.ಸಿ. ಮೋಹನ್, ತುಮಕೂರಿನಲ್ಲಿ ವಿ.ಸೋಮಣ್ಣ, ಚಿಕ್ಕಬಳ್ಳಾಪುರದಲ್ಲಿ ಡಾ.ಕೆ.ಸುಧಾಕರ್, ಕೋಲಾರ ಮಲ್ಲೇಶ್​ ಬಾಬು ಸೇರಿ ಹಲವು ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.

ಯದುವೀರ್‌ ಒಡೆಯರ್​ ನಾಮಿನೇಷನ್‌:  ಮೈಸೂರು-ಕೊಡುಗು ಬಿಜೆಪಿ-ಜೆಡಿಎಸ್​ ಮೈತ್ರಿ ಅಭ್ಯರ್ಥಿ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಶುಭ ಗಳಿಗೆಯಲ್ಲಿ ನಾಮಪತ್ರ ಸಲ್ಲಿಸಿದರು. ಈ ವೇಳೆ ತಾಯಿ ಪ್ರಮೋದಾದೇವಿ ಒಡೆಯರ್, ಶಾಸಕ‌ ಶ್ರೀವತ್ಸ, ಮುಖಂಡರಾದ ರಘು ಜತೆ ಸೇರಿ ಪ್ರಮುಖರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಮೇದುವಾರಿಕೆ ಸಲ್ಲಿಸಿದರು. ಏಪ್ರಿಲ್‌ 3ರಂದು ಬೃಹತ್‌ ರ‍್ಯಾಲಿ ಮೂಲಕ ಅವರು ಮತ್ತೊಂದು ಸೆಟ್​ ನಾಮಪತ್ರ ಸಲ್ಲಿಸಿದ್ದಾರೆ.

ಪಿಸಿ ಮೋಹನ್ ನಾಮ ಪತ್ರ ಸಲ್ಲಿಕೆ

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಪಿಸಿ ಮೋಹನ್ ನಾಮ ಪತ್ರ ಸಲ್ಲಿಕೆ ಮಾಡಿದರು. ಬಿಬಿಎಂಪಿ ಕಚೇರಿಗೆ ಆಗಮಿಸಿದ ಪಿಸಿ ಮೋಹನ್ ತಮ್ಮ ಉಮೇದುವಾರಿಕೆ ಸಲ್ಲಿಕೆ ಮಾಡಿದರು. ನಾಮಪತ್ರ ಸಲ್ಲಿಕೆಗೂ ಮೊದಲು ಮುತ್ಯಾಲಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಕಾರ್ಯಕರ್ತರ ಜೊತೆಗೆ ರೋಡ್ ಶೋ ನಡೆಸುವ ಮೂಲಕ ಶಕ್ತಿ ಪ್ರದರ್ಶನ ಮಾಡಿದರು. ಬಳಿಕ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಆರ್. ಅಶೋಕ್, ಅರವಿಂದ ಲಿಂಬಾವಳಿ, ಗಾಲಿ ಜನಾರ್ದನ ರೆಡ್ಡಿ, ಸುರೇಶ್ ಕುಮಾರ್ ಜೊತೆಗೆ ಬಂದು ನಾಮಪತ್ರ ಸಲ್ಲಿಕೆ ಮಾಡಿದರು.

ವಿ.ಸೋಮಣ್ಣ ಉಮೇದುವಾರಿಕೆ ಸಲ್ಲಿಕೆ 

ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ವಿ.ಸೋಮಣ್ಣ ನಾಮ ಪತ್ರ ಸಲ್ಲಿಕೆ ಮಾಡಿದರು. ಜಿಲ್ಲಾದಿಕಾರಿಗಳ ಕಚೇರಿಗೆ ಆಗಮಿಸಿದ ಸೋಮಣ್ಣ ತಮ್ಮ ಉಮೇದುವಾರಿಕೆ ಸಲ್ಲಿಕೆ ಮಾಡಿದರು. ಶಾಸಕರಾದ ಜ್ಯೋತಿ ಗಣೇಶ್, ಸುರೇಶ್ ಗೌಡ, ಸುರೇಶ್ ಬಾಬು, ಮಾಜಿ ಶಾಸಕ ಸುಧಾಕರ್ ಲಾಲ್, ಬಿಜೆಪಿ ಮುಖಂಡ ಅನಿಲ್ ಕುಮಾರ್ ಅವರೊಂದಿಗೆ ತುಮಕೂರು ಡಿಸಿ ಕಚೇರಿಗೆ ತೆರಳಿದ ಅವರು ನಾಮಪತ್ರ ಸಲ್ಲಿಸಿದರು. ಇದಕ್ಕೂ ಮೊದಲು ಅವರು ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ್ದರು.

ಎಂ. ಮಲ್ಲೇಶ್ ಬಾಬು ನಾಮಪತ್ರ ಸಲ್ಲಿಕೆ

ಬಿಜೆಪಿ-ಜೆಡಿಎಸ್ ಮೈತ್ರಿ ಜೆಡಿಎಸ್ ಅಭ್ಯರ್ಥಿ ಎಂ. ಮಲ್ಲೇಶ್ ಬಾಬು ಅವರು ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ಕೋಲಾರ ಪರಿಶಿಷ್ಟ ಜಾತಿ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಕೆ ಮಾಡಿದರು. ಚುನಾವಣೆ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರು ನಾಮಪತ್ರ ಸ್ವೀಕರಿಸಿದರು. ಈ ಸಂದರ್ಭ ಮಲ್ಲೇಶ್ ಬಾಬು ಅವರ ತಾಯಿ ಮಂಗಮ್ಮ ಮುನಿಸ್ವಾಮಿ ಮತ್ತು ಕುಟುಂಬ ಸದಸ್ಯರು ಜೊತೆಗಿದ್ದರು.

ನಾಮಪತ್ರ ಸಲ್ಲಿಸಿದ ಡಾ.ಕೆ ಸುಧಾಕರ್‌

ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆ ವೇಳೆ ಮಾಜಿ ಸಚಿವ ಎಂ.ಟಿ.ಬಿ. ನಾಗರಾಜ್‌ ಅವರ ಆಶೀರ್ವಾದ ಪಡೆದರು. ನಾಗರಾಜ್‌ ಅವರು ನಾಮಪತ್ರ ಶುಲ್ಕವಾದ 25 ಸಾವಿರ ರೂ. ನೀಡಿ ಆಶೀರ್ವಾದ ಮಾಡಿದರು. ಈ ವೇಳೆ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು, ಮಾಜಿ ಶಾಸಕ ವರ್ತೂರು ಪ್ರಕಾಶ್, ನಿಸರ್ಗ ನಾರಾಯಣಸ್ವಾಮಿ ಸಾಥ್ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net