ಮಹಿಳೆ ಬೆತ್ತಲೆಗೊಳಿಸಿ ಹಲ್ಲೆ ಪ್ರಕರಣ: ಸಿಐಡಿಯಿಂದ ಚಾರ್ಜ್‌ಶೀಟ್ ಸಲ್ಲಿಕೆ

Crime Logo
Published on

ಬೆಂಗಳೂರು: ಬೆಳಗಾವಿಯ ಹೊಸ ವಂಟಮೂರಿ ಗ್ರಾಮದಲ್ಲಿ ಮಹಿಳೆಯೊಬ್ಬರ ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಸಿಐಡಿ ನ್ಯಾಯಾಲಕ್ಕೆ ೧,೧೦೦ ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದೆ.


ಬೆಳಗಾವಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ೧೨ ಮಂದಿ ಆರೋಪಿಗಳ ವಿರುದ್ಧ ಸಿಐಡಿ ಅಧಿಕಾರಿಗಳು ಬುಧವಾರ ಆರೋಪಪಟ್ಟಿ ಸಲ್ಲಿಸಿದ್ದಾರೆ. ಪ್ರಕರಣದಲ್ಲಿ ಮತ್ತೊಬ್ಬ ಕಾನೂನು ಸಂಘರ್ಷಕ್ಕೊಳಗಾದವನಿದ್ದು, ಆತನ ವಿರುದ್ಧ ಫೆ.೮ರಂದು ವರದಿ ಸಲ್ಲಿಸಲಾಗುತ್ತದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.


ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಸಿಐಡಿ ಅಧಿಕಾರಿಗಳು, ೫೦ ಮಂದಿ ಸಾಕ್ಷಿಗಳು ಹೇಳಿಕೆ ಸೇರಿದಂತೆ ೧,೧೦೦ ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದಾರೆ.
ಹೊಸ ವಂಟಮೂರಿ ಗ್ರಾಮದ ಒಂದೇ ಸಮುದಾಯದ ಯುವಕ-ಯುವತಿ ಪ್ರೀತಿಸುತ್ತಿದ್ದು, ೨೦೨೩ ಡಿ.೧೧ರಂದು ತಡರಾತ್ರಿ ಮನೆ ಬಿಟ್ಟು ಓಡಿ ಹೋಗಿದ್ದರು. ಬಳಿಕ ಮರು ದಿನ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡಿದ್ದರು. ಮತ್ತೊಂದೆಡೆ ಯುವತಿ ಕಡೆಯವರು ಯುವಕನ ಮನೆಗೆ ಬಂದು ಗಲಾಟೆ ಮಾಡಿದ್ದು, ಚಾರ್ಜ್‌ಶೀಟ್‌ನಲ್ಲಿ ಹೇಳಲಾಗಿದೆ.


ಈ ವೇಳೆ ಮನೆಯಲ್ಲಿದ್ದ ಯುವಕನ ತಾಯಿ ಮೇಲೆ ದೌರ್ಜನ್ಯ ಎಸಗಿ, ಆಕೆಯನ್ನು ವಿವಸ್ತ್ರಗೊಳಿಸಿ ವಿದ್ಯುತ್ ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ್ದರು. ತಡರಾತ್ರಿ ೧ ಗಂಟೆಯಿಂದ ಮುಂಜಾನೆ ೪ ಗಂಟೆವರೆಗೂ ಮಹಿಳೆ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದರು. ಸಹಾಯಕ್ಕೆ ಮಹಿಳೆ ಕೇಳಿಕೊಂಡರೂ ಯಾರು ಸಹಾಯಕ್ಕೆ ಬರಲಿಲ್ಲ. ಈ ವಿಚಾರ ತಿಳಿದ ಕಾಕತಿ ಪೊಲೀಸ್ ಠಾಣೆ ಅಧಿಕಾರಿ-ಮಹಿಳಾ ಸಿಬ್ಬಂದಿ ಸ್ಥಳಕ್ಕೆ ಬಂದು, ಮಹಿಳೆಗೆ ಬಟ್ಟೆ ಕೊಟ್ಟು ರಕ್ಷಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಒಬ್ಬ ಅಪ್ರಾಪ್ತ ಸೇರಿ ೧೩ ಮಂದಿಯನ್ನು ಬಂಧಿಸಲಾಗಿತ್ತು.


ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಹೆಚ್ಚಿನ ತನಿಖೆಗಾಗಿ ಸಿಐಡಿಗೆ ವರ್ಗಾವಣೆ ಮಾಡಿತ್ತು. ಇದೀಗ ತನಿಖೆ ಪೂರ್ಣಗೊಳಿಸಿರುವ ಪೊಲೀಸರು, ೧೨ ಮಂದಿ ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದಾರೆ. ಈ ನಡುವೆ ಹೈಕೋರ್ಟ್ ಕೂಡ ಸ್ವಯಂ ಪ್ರೇರಿತ ದೂರು ದಾಖಲಿಸಕೊಂಡು ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಪೊಲೀಸ್ ಇಲಾಖೆಗೆ ನಿರ್ದೇಶ ನೀಡಿತ್ತು. ಜತೆಗೆ ಈ ಪ್ರಕರಣ ರಾಜ್ಯ ಸರ್ಕಾರಕ್ಕೆ ಮುಜುಗರ ತಂದೊಟ್ಟಿತ್ತು.ಕೇಂದ್ರ ಮಹಿಳಾ ಆಯೋಗ, ಬಿಜೆಪಿಯ ಸತ್ಯಶೋಧನ ಸಮಿತಿ ಕೂಡ ಸ್ಥಳಕ್ಕೆ ಬಂದು ಪರಿಶೀಲಿಸಿತ್ತು. ಅಲ್ಲದೆ, ಘಟನಾ ಸ್ಥಳಕ್ಕೆ ತಡವಾಗಿ ಬಂದು ಕರ್ತವ್ಯ ಲೋಪ ಎಸಗಿದ ಕಾಕತಿ ಠಾಣೆಯ ಪಿಐ ವಿಜಯ ಕುಮಾರ ಸಿನ್ನೂರ ಅವರನ್ನು ಅಮಾನತುಗೊಳಿಸಿತ್ತು. ಸಂತ್ರಸ್ತೆಗೆ ರಾಜ್ಯ ಸರ್ಕಾರ ೫ ಲಕ್ಷ ರೂ. ಪರಿಹಾರ ಹಾಗೂ ೨ ಎಕರೆ ಜಮೀನು ಘೋಷಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net