

ಬೆಂಗಳೂರು: ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಕರ್ನಾಟಕ ಮುದ್ರಾಂಕ ಕಾಯ್ದೆ ಕಲಂ 10ಎ ರದ್ದುಪಡಿಸಿ ಅಧಿಸೂಚನೆ ಹೊರಡಿಸಿದ್ದರೂ ಸಬ್ ರಿಜಿಸ್ಟ್ರಾರ್‌ಗಳು ನೋಂದಣಿ ಪತ್ರದಲ್ಲಿ ರುಜು ಮಾಡಿ ಎಡವಟ್ಟು ಮಾಡುತ್ತಿದ್ದಾರೆ. ಆದರೆ ಕಾಯ್ದೆ ರದ್ದುಪಡಿಸಿದ ಮೇಲೆ ಇಲಾಖೆಯು ಕಾವೇರಿ 2.0ರಲ್ಲಿ ಅಪ್‌ಡೇಟ್ ಮಾಡದಿರುವುದು ಅಧಿಕಾರಿಗಳಲ್ಲೂ ಗೊಂದಲ ಮೂಡಿಸಿದೆ.
ದಸ್ತಾವೇಜು ನೋಂದಣಿ ವೇಳೆ ಪಕ್ಷಕಾರರು ನಿಗದಿತ ಮುದ್ರಾಂಕ ಶುಲ್ಕ ಪಾವತಿ ಮಾಡಲಿದ್ದಾರೆ. ‘1957ರ ಕರ್ನಾಟಕ ಮುದ್ರಾಂಕ ಕಾಯ್ದೆಯ ಕಲಂ 10ಎ ಅಡಿಯಲ್ಲಿ’ ಮುದ್ರಾಂಕ ಶುಲ್ಕ ವಸೂಲಿ ಮಾಡಿರುವುದಾಗಿ ಸಬ್ ರಿಜಿಸ್ಟ್ರಾರ್ ಸಹಿ ಮಾಡುವ ಮೂಲಕ ದೃಢೀಕರಿಸಿ ಪ್ರಮಾಣ ಪತ್ರ ನೀಡುತ್ತಿದ್ದರು. ಆದರೆ, ಕಾವೇರಿ 2.0ಕ್ಕೆ ಸ್‌ಟಾವೇರ್ ಅಪ್‌ಡೇಟ್ ಆದ ಮೇಲೆ ಜನರು ಖಜಾನೆ-2ಗೆ ನೇರವಾಗಿ ಆನ್‌ಲೈನ್‌ನಲ್ಲಿ ಮುದ್ರಾಂಕ ಶುಲ್ಕ ಪಾವತಿಸುತ್ತಿದ್ದಾರೆ. ಆದ್ದರಿಂದ ದೃಢೀಕರಣ ಪತ್ರ ಅಗತ್ಯ ಇಲ್ಲವೆಂದು ಕಲಂ 10ಎ ರದ್ದುಪಡಿಸಿ ಏಪ್ರಿಲ್‌ನಲ್ಲಿ ವಿಧಾನಮಂಡಲ ಅಧಿವೇಶನದಲ್ಲಿ ಬಿಲ್ ಪಾಸ್ ಮಾಡಲಾಯಿತು. ಇದಾದ ಮೇಲೆ ಅಧಿಸೂಚನೆ ಹೊರಡಿಸಿತು. ಮೇ 23ಕ್ಕೆ ಕಂದಾಯ ಇಲಾಖೆ ಉಪ ಕಾರ್ಯದರ್ಶಿ (ನೋಂದಣಿ ಮತ್ತು ಮುದ್ರಾಂಕ ಇಲಾಖೆ) ಎಸ್.ಆರ್. ಶಿವಶಂಕರ್, ಕಲಂ 10ಎ ರದ್ದುಪಡಿಸಲಾಗಿದೆ ಎಂದು ಸಬ್‌ರಿಜಿಸ್ಟ್ರಾರ್‌ಗಳಿಗೆ ಮಾಹಿತಿ ರವಾನಿಸಿದ್ದರು.
ಆದರೂ ಕಾವೇರಿ 2.0 ಸ್‌ಟಾವೇರ್‌ನಲ್ಲಿ ಅಪ್‌ಡೇಟ್ ಆಗಿಲ್ಲ. ಪ್ರಸ್ತುತ ದಸ್ತಾವೇಜು ನೋಂದಣಿ ಆದರೂ ಪ್ರಮಾಣ ಪತ್ರಗಳಲ್ಲಿ ಕಲಂ 10ಎ ಮುದ್ರಣ ಆಗುತ್ತಿದ್ದು, ಸಬ್ ರಿಜಿಸ್ಟ್ರಾರ್‌ಗಳು ವಿಧಿ ಇಲ್ಲದೆ ಸಹಿ ಮಾಡಿ ದೃಢೀಕರಿಸುತ್ತಿದ್ದಾರೆ. ರದ್ದಾಗಿರುವ ಕಾಯ್ದೆ ಹಿಂಪಡೆಯದೆ ಮುಂದುವರಿಸಿರುವುದನ್ನು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದರೆ ಅಧಿಕಾರಿಗಳು ಸಂಕಷ್ಟಕ್ಕೆ ಒಳಗಾಗುತ್ತಾರೆ. ಈ ನಡುವೆ ಮುದ್ರಾಂಕ ಶುಲ್ಕ ಪಾವತಿಸುವ ಸಾರ್ವಜನಿಕರಿಗೂ ಕಾನೂನುಬದ್ಧವಾಗಿ ದಸ್ತಾವೇಜು ನೋಂದಣಿ ಮಾಡಿಕೊಡುವಲ್ಲಿ ಇಲಾಖೆ ವಿಲವಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಕಾಯ್ದೆ ರದ್ದುಪಡಿಸಿದ ಮೇಲೆ ಪರ್ಯಾಯ ವ್ಯವಸ್ಥೆ ತೋರಿಸಬೇಕಾದ ಕೆಲಸ ಇಲಾಖೆಯಿಂದ ಆಗಿಲ್ಲವೆಂದು ಸುಮ್ಮನಾಗುತ್ತಿದ್ದಾರೆ.
ಕಾವೇರಿ 2.0ರಲ್ಲಿ ಇ-ಸ್ಟಾಪ್ ಪೇಪರ್
ಕಾವೇರಿ 2.0 ವೆಬ್‌ಸೈಟ್‌ನಲ್ಲಿಯೇ ಇನ್ನು ಮುಂದೆ ಇ-ಸ್ಟಾಪ್ ಪೇಪರ್ ಸೌಲಭ್ಯ ಪಡೆದುಕೊಳ್ಳಬಹುದು. ಪ್ರಸ್ತುತ, ಸಹಕಾರ ಸಂಘಗಳು ಸರ್ಕಾರದಿಂದ ಅನುಮತಿ ಪಡೆದು ಇ-ಸ್ಟಾಪ್ ಪೇಪರ್ ಮಾರಾಟ ಮಾಡುತ್ತಿದ್ದಾರೆ. ಪ್ರತಿ ಪೇಪರ್‌ಗೆ ಗ್ರಾಹಕರಿಂದ ನಿಗದಿತ ಕಮಿಷನ್ ಪಡೆದು ಸೇವೆ ನೀಡುತ್ತಿದ್ದರು. ಇನ್ನು ಮುಂದೆ ಸಾರ್ವಜನಿಕರೇ ನೇರವಾಗಿ ಶುಲ್ಕ ಪಾವತಿ ಮಾಡಿ ಇ-ಸ್ಟಾಪ್ ಪೇಪರ್ ಪಡೆಯಬಹುದು.
ಡಿಜಿಟಲ್ ಸಹಿ
ದಸ್ತಾವೇಜು ಪತ್ರದಲ್ಲಿ ಸಬ್ ರಿಜಿಸ್ಟ್ರಾರ್‌ಗಳು 6 ಕಡೆ ಸಹಿ ಮಾಡುತ್ತಿದ್ದರು. ಇದೀಗ ಕಲಂ 10ಎ ರದ್ದುಪಡಿಸಿರುವ ಪರಿಣಾಮ ಐದು ಕಡೆ ಸಹಿ ಮಾಡಲಿದ್ದಾರೆ. ಭಾರತೀಯ ನೋಂದಣಿ ಕಾಯ್ದೆಗೆ ತಿದ್ದುಪಡಿ ತರುತ್ತಿರುವ ಕಾರಣ ಸಂಪೂರ್ಣ ಡಿಜಿಟಲ್ ಮಾಡುವ ಸಾಧ್ಯತೆಗಳಿವೆ. ಜಾರಿಯಾದರೆ ಸಬ್ ರಿಜಿಸ್ಟ್ರಾರ್‌ಗಳ ಸಹಿ ಇರುವುದಿಲ್ಲ. ಡಿಜಿಟಲ್ ಸಹಿ ಮಾತ್ರ ಇರಲಿದೆ. ಲಾಗಿನ್ ಐಡಿ, ಪಾಸ್‌ವರ್ಡ್ ಮೇಲೆ ಸಬ್ ರಿಜಿಸ್ಟ್ರಾರ್‌ಗಳು ದೃಢೀಕರಿಸಲಿದ್ದಾರೆ.