

ರಾಜ್ಯದ ಉಪ ನೋಂದಣಿ ಕಚೇರಿಯಲ್ಲಿ ನೋಂದಾಯಿತ ಕರಾರುಗಳ ದೃಢೀಕೃತ ನಕಲು (ಸರ್ಟಿಫೈಡ್) ದಾಖಲೆಗಳು ಸಾಮಾನ್ಯ ಜನರಿಗೆ ಕೈಗೆಟುಕುವುದಿಲ್ಲ. ಬದಲಿಗೆ ಏಜೆಂಟ್ ಅಥವಾ ಸೈಬರ್ ಸೆಂಟರ್ಗಳ ಮೊರೆ ಹೋಗಿ ದುಪ್ಪಟ್ಟು ಹಣ ನೀಡಿ ಪಡೆದುಕೊಳ್ಳಬೇಕಾಗಿದೆ.
ಸಬ್ರಿಜಿಸ್ಟ್ರಾರ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ಪಡೆಯುವ ಸೇವೆಯನ್ನು ರದ್ದು ಮಾಡಲಾಗಿದ್ದು, 2004ರ ನಂತರ ನೋಂದಣಿ ಆಗಿರುವ ಎಲ್ಲ ದಾಖಲೆಗಳ ನಕಲು ಪ್ರತಿಗಳನ್ನು ಇನ್ಮುಂದೆ ಆನ್ಲೈನ್ನಲ್ಲಿಯೇ ಪಡೆಯಬೇಕಿದೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಈ ನಿರ್ಧಾರದಿಂದ ಸಾಮಾನ್ಯ ಜನ ಪರದಾಡಬೇಕಿದೆ.
ಆನ್ಲೈನ್ನಲ್ಲಿ ಮಾತ್ರ: ರಾಜ್ಯದ 250 ಉಪ ನೋಂದಣಿ ಕಚೇರಿಗಳಲ್ಲಿ ಆಸ್ತಿ ಕ್ರಯ, ಮಾರಾಟ ಕರಾರು, ವರ್ಗಾವಣೆ ಪತ್ರ, ಅಡಮಾನ ಪತ್ರ, ಮದುವೆ ನೋಂದಣಿ ಸೇರಿ ಹಲವು ಕರಾರುಗಳು ನಿತ್ಯ ಸಾವಿರಾರು ನಡೆಯುತ್ತವೆ. 2004ರ ನಂತರ ನೋಂದಣಿ ದಾಖಲೆಗಳನ್ನು ಸ್ಕಾ್ಯನ್ ಮಾಡಿ ಸರ್ವರ್ನಲ್ಲಿ ಸಂಗ್ರಹಿಸಲಾಗಿದೆ. ಅದಕ್ಕೂ ಮೊದಲು ನೋಂದಣಿ ಆಗಿರುವ ಕರಾರು ದಾಖಲೆಗಳು ಕಾಗದ ರೂಪದಲ್ಲಿವೆ. ದೃಢೀಕೃತ ನಕಲು ಪ್ರತಿ ಪಡೆಯಲು ಸಂಬಂಧಪಟ್ಟ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ಅಥವಾ ಆನ್ಲೈನ್ನಲ್ಲಿ ಅರ್ಜಿ ಹಾಕಿ ನಿಗದಿತ ಶುಲ್ಕ ಪಾವತಿ ಮಾಡಿ ಪಡೆಯಲು ಅವಕಾಶವಿತ್ತು. ಇದೀಗ 2004ರ ನಂತರದ ನೋಂದಾಯಿತ ದಾಖಲೆಗಳ ದೃಢೀಕೃತ ಪತ್ರಗಳನ್ನು ಪಡೆಯ ಬೇಕಾದರೆ ಕಾವೇರಿ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಬೇಕು. ಸಂಬಂಧಪಟ್ಟ ಸಬ್ರಿಜಿಸ್ಟ್ರಾರ್ ಕಚೇರಿ ಅಧಿಕಾರಿಗಳು ಅರ್ಜಿ ಪರಿಶೀಲನೆ ನಡೆಸಿದ ಬಳಿಕ ಮೂರ್ನಾಲ್ಕು ದಿನಗಳ ನಂತರ ಸರ್ವರ್ನಲ್ಲಿ ಅಪ್ಲೋಡ್ ಮಾಡುತ್ತಾರೆ.
ಆಫ್ಲೈನ್ ಸೇವೆ ಅಗತ್ಯವೇಕೆ?
ಸಬ್ರಿಜಿಸ್ಟ್ರಾರ್ ಕಚೇರಿಯಲ್ಲಿ ದೃಢೀಕೃತ ನಕಲು ಪ್ರತಿ ಪಡೆಯಲು ಆಫ್ಲೈನ್, ಆನ್ಲೈನ್ ಸೇವೆ ಇತ್ತು. ಕಂಪ್ಯೂಟರ್ ಜ್ಞಾನ ಇಲ್ಲದವರು ನೇರವಾಗಿ ಕಚೇರಿಗೆ ಬಂದು ದಾಖಲೆ ನೋಂದಣಿ ಸಂಖ್ಯೆ, ದಿನಾಂಕ , ಹೆಸರು ಕೊಟ್ಟು ನಿಗದಿತ ಶುಲ್ಕ ತುಂಬಿ ಕೆಲವೇ ನಿಮಿಷಗಳಲ್ಲಿ ನಕಲು ಪ್ರತಿ ಪಡೆಯುತ್ತಿದ್ದರು. ಆದರೆ, ಇದೀಗ ಅನಿವಾರ್ಯವಾಗಿ ಕಾವೇರಿ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಲು ಸೈಬರ್ ಸೆಂಟರ್ ಮೊರೆ ಹೋಗಬೇಕಾಗಿದೆ. ದುಪ್ಪಟ್ಟು ಹಣ ಕೊಟ್ಟು ದಾಖಲೆ ಪಡೆಯಬೇಕಿದೆ. ನಾಡ ಕಚೇರಿ, ಬೆಂಗಳೂರು ಒನ್, ಕರ್ನಾಟಕ ಒನ್ಗಳಲ್ಲಿ ಕಾವೇರಿ ವೆಬ್ಸೈಟ್ ಸೇವೆ ದೊರಕುವ ಕುರಿತು ಯಾವುದೇ ಸ್ಪಷ್ಟನೆ ಇಲ್ಲ.
ಸಾಮರ್ಥ್ಯವಿಲ್ಲ
ಆನ್ಲೈನ್ ಸೇವೆ ಒದಗಿಸಲು ಕಾವೇರಿ ತಂತ್ರಾಂಶ ಮತ್ತು ಸಬ್ರಿಜಿಸ್ಟ್ರಾರ್ ಕಚೇರಿಗಳಲ್ಲಿ ಬಳಸುತ್ತಿರುವ ಕಂಪ್ಯೂಟರ್ಗಳು ಹೆಚ್ಚಿನ ಸಾಮರ್ಥ್ಯ ಹೊಂದಿಲ್ಲ. ದಿನವೊಂದಕ್ಕೆ 1 ಸಬ್ರಿಜಿಸ್ಟ್ರಾರ್ ಕಚೇರಿಗೆ ಅಂದಾಜು 20 ರಿಂದ 25 ದೃಢೀಕೃತ ನಕಲು ಪ್ರತಿಗೆ ಅರ್ಜಿ ಬರುತ್ತಿವೆ. ಅಷ್ಟು ಅರ್ಜಿಗಳನ್ನು ವಿಲೇವಾರಿ ಮಾಡುವಷ್ಟು ಶಕ್ತವಾಗಿಲ್ಲ. ಇದರಿಂದ ಅಧಿಕಾರಿ, ಸಿಬ್ಬಂದಿ ಮೇಲೆ ಮತ್ತಷ್ಟು ಒತ್ತಡ ಹೆಚ್ಚಾಗಲಿದೆ. ಮೊದಲ ರೀತಿ ಆನ್ಲೈನ್ ಮತ್ತು ಆಫ್ಲೈನ್ ಎರಡೂ ಸೇವೆ ಇದ್ದರೇ ಒಳಿತು ಎಂದು ಅಧಿಕಾರಿಗಳೇ ಹೇಳುತ್ತಾರೆ.
ಸಹಿ ಗೊಂದಲ
ಬ್ಯಾಂಕ್ಗಳಲ್ಲಿ ಸಾಲ ಪಡೆಯಲು, ಕೋರ್ಟ್ಗೆ ದಾಖಲೆ ಒದಗಿಸಲು ಅಥವಾ ಆಸ್ತಿ ಕ್ರಯದ ವೇಳೆ ದೃಢೀಕೃತ ದಾಖಲೆಗಳಿಗೆ ಹೆಚ್ಚು ಬಳಕೆ ಮಾಡಲಾಗುತ್ತದೆ. ಕೆಲ ಬ್ಯಾಂಕು ಮತ್ತು ಕೋರ್ಟ್ಗಳಲ್ಲಿ ಡಿಜಿಟಲ್ ಸಹಿಯನ್ನು ಮಾನ್ಯ ಮಾಡುತ್ತಿಲ್ಲ. ಮತ್ತೆ ಸಬ್ರಿಜಿ ಸ್ಟ್ರಾರ್ ಸಹಿ ಮತ್ತು ಸೀಲು ಹಾಕಿಸುವ ಅನಿವಾರ್ಯತೆ ಇದೆ.