ತರಕಾರಿ ವ್ಯಾಪಾರಿಗಳಿಗೆ ಸ್ಥಳ ನಿಗದಿಗೆ ಉಪ-ಸಮಿತಿ ರಚನೆ

26 KRN-2
Published on

ಕೆ.ಆರ್.ನಗರ: ಮೇ 23ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪಟ್ಟಣಕ್ಕೆ ಆಗಮಿಸಿದ್ದ ವೇಳೆ ಇಲ್ಲಿನ ಬಜಾರ್ ರಸ್ತೆ ಮತ್ತು ಹುಣಸೂರು ರಸ್ತೆಯಲ್ಲಿದ್ದ ತರಕಾರಿ ವ್ಯಾಪಾರಸ್ಥರನ್ನು ಎಲ್‌ಐಸಿ ಕಚೇರಿ ಮುಂಭಾಗಕ್ಕೆ ಸ್ಥಳಾಂತರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ಪರ್ಯಾಯ ಸ್ಥಳ ನಿಗದಿ ಮಾಡಲು ಸೋಮವಾರ ಪುರಸಭೆ ಕಚೇರಿಯಲ್ಲಿ ಅಧ್ಯಕ್ಷ ಶಿವುನಾಯಕ್ ನೇತೃತ್ವದಲ್ಲಿ ಸಮಾಲೋಚನಾ ಸಭೆ ನಡೆಸಲಾಯಿತು.

ಸಭೆಯಲ್ಲಿ ಮಾತನಾಡಿದ ಅಧ್ಯಕ್ಷರು, ಬಜಾರ್ ರಸ್ತೆಯಲ್ಲಿ ವ್ಯಾಪಾರಿಗಳು ಈ ಹಿಂದೆ ರಸ್ತೆ ತುಂಬೆಲ್ಲ ತಮ್ಮ ವಸ್ತುಗಳನ್ನು ಇಟ್ಟುಕೊಂಡಿದ್ದರಿಂದ ಸಂಚಾರಕ್ಕೆ ಸಮಸ್ಯೆಯಾಗಿತ್ತು. ಹಾಗಾಗಿ ಇದಕ್ಕೆ ಪರಿಹಾರಕ್ಕಾಗಿ ಸಭೆ ಆಯೋಜಿಸಿದ್ದು, ಸದಸ್ಯರಿಂದ ಸಲಹೆ ಪಡೆಯಲಾಗಿದೆ. ಜತೆಗೆ ಪುರಸಭೆಗೆ ಸೇರಿದ ತರಕಾರಿ ಸಂಕುಲ ಕಳೆದ ಒಂದು ವರ್ಷದಿಂದ ಖಾಲಿ ಬಿದ್ದಿದ್ದು, ಇಲ್ಲಿಗೆ ಎಲ್ಲ ವ್ಯಾಪಾರಿಗಳನ್ನು ಸ್ಥಳಾಂತರ ಮಾಡುವುದಲ್ಲದೆ ಹೂವು, ಹಣ್ಣು ಹಾಗೂ ಇತರೆ ವಸ್ತುಗಳನ್ನು ಮಾರಾಟ ಮಾಡಲು ಪರ್ಯಾಯ ಸ್ಥಳಗಳನ್ನು ಗುರುತಿಸಲು ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

ಸದಸ್ಯ ಕೋಳಿ ಪ್ರಕಾಶ್ ಮಾತನಾಡಿ, ಪಟ್ಟಣದ ಪುರಸಭೆ ಆಡಳಿತ ಮಂಡಳಿ ಬಗ್ಗೆ ಸಾರ್ವಜನಿಕರು ಟೀಕೆ ಮಾಡುತ್ತಿದ್ದು. ಇದು ನಮಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಎಲ್ಲರೂ ಒಟ್ಟಿಗೆ ಕುಳಿತು ತರಕಾರಿ ವ್ಯಾಪಾರಿಗಳಿಗೆ ಪರ್ಯಾಯ ಸ್ಥಳ ನಿಗದಿ ಸೇರಿದಂತೆ ಇತರ ವಿಚಾರಗಳಲ್ಲಿ ಜನ ಸ್ನೇಹಿಯಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಸದಸ್ಯ ಉಮೇಶ್ ಮಾತನಾಡಿ, ಮುಖ್ಯಮಂತ್ರಿಗಳು ಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಬಜಾರ್ ಮತ್ತು ಹುಣಸೂರು ರಸ್ತೆಯಲ್ಲಿದ್ದ ತರಕಾರಿ ವ್ಯಾಪಾರಿಗಳನ್ನು ಸ್ಥಳಾಂತರ ಮಾಡಿದ್ದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಅವರಿಗೆ ಶಾಶ್ವತ ಸ್ಥಳ ನಿಗದಿ ಮಾಡಿ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಸದಸ್ಯ ಜಾವಿದ್ ಪಾಷಾ ಮಾತನಾಡಿ, ಬಸ್ ನಿಲ್ದಾಣದ ಸುತ್ತಮುತ್ತ ಹಣ್ಣು ಮತ್ತು ಹೂವು ವ್ಯಾಪಾರ ಮಾಡುವವರಿಗೆ ಸ್ಥಳ ನಿಗದಿ ಮಾಡಿದರೆ ಸಾರ್ವಜನಿಕರಿಗೆ ಅನುಕೂಲವಾಗಲಿದ್ದು ಈ ವಿಚಾರದ ಬಗ್ಗೆ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳು ಗಂಭೀರವಾಗಿ ಚಿಂತಿಸಬೇಕು ಎಂದರು.

ಬಳಿಕ ಸಭೆಯಲ್ಲಿ ತರಕಾರಿ ಹೂವು ಹಣ್ಣು ಮತ್ತು ಇತರೆ ವ್ಯಾಪಾರಿಗಳಿಗೆ ಸ್ಥಳ ನಿಗದಿಪಡಿಸಲು ಉಪ-ಸಮಿತಿ ರಚಿಸಲು ನಿರ್ಧರಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಶಂಕರ್, ಸದಸ್ಯ ಸೈಯದ್ ಸಿದ್ದಿಕ್, ನಟರಾಜು, ಕೆ.ಎಲ್.ಜಗದೀಶ್, ಸಂತೋಷ್‌ಗೌಡ, ತೋಂಟದಾರ್ಯ, ಶಂಕರ್ ಸ್ವಾಮಿ, ಮುಖ್ಯಾಧಿಕಾರಿ ಬಿ.ವಿ.ವೆಂಕಟೇಶ್, ಕಂದಾಯಾಧಿಕಾರಿ ರಮೇಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net