ಉಪ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ಆಗ್ರಹ; ಡಿಎಸ್​ಎಸ್​ ಪ್ರತಿಭಟನೆ

oplus_2
oplus_2
Published on

ರಾಣೆಬೆನ್ನೂರ: ಪರಿಶಿಷ್ಟ ಜಾತಿಯೊಳಗಿನ ಉಪ ಜಾತಿಗಳಲ್ಲಿ ಅತಿ ಹಿಂದುಳಿದ, ಅಸ್ಪ--ೃಷ್ಯ, ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಿ ಕೊಡಬೇಕು ಎಂದು ಆಗ್ರಹಿಸಿ ರಾಜ್ಯ ಮಾದಿಗ ಸಂಘಟನೆಗಳ ಒಕ್ಕೂಟದ ವತಿಯಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಮೇಡ್ಲೇರಿ ರಸ್ತೆಯಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಪದಾಧಿಕಾರಿಗಳು ಎಂ.ಜಿ. ರಸ್ತೆ, ಪೋಸ್ಟ್​ ವೃತ್ತ, ಕುರುಬಗೇರಿ ಕ್ರಾಸ್​ ಸೇರಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಿದ್ದೇಶ್ವರ ವೃತ್ತಕ್ಕೆ ಬಂದು ಮಾನವ ಸರಪಳಿ ನಿಮಿರ್ಸಿ ರಸ್ತೆಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟಿಸಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ನೀಲಕಂಠಪ್ಪ ಕುಸಗೂರ ಮಾತನಾಡಿ, ಒಳ ಮೀಸಲಾತಿ ಕಲ್ಪಿಸಿ ಕೊಡಲು ರಾಜ್ಯ ಸರ್ಕಾರಕ್ಕೆ ಪರಮಾಧಿಕರ ಇದೆ ಎಂದು ಸುಪ್ರೀಂಕೋರ್ಟ್​ ಐತಿಹಾಸಿಕ ತೀರ್ಪು ನೀಡಿದೆ. ಹಿಂದು ಧರ್ಮದ ಶ್ರೇಣಿಕೃತ ಚಾತುವರ್ಣ ವ್ಯವಸ್ಥೆಯಲ್ಲಿ ಪಂಚಮರು, ಸ್ವಪಚರು, ಅಂತ್ಯಜರು ಎಂದು ಐದು ವರ್ಣವನ್ನಾಗಿಸಿದ ನಂತರದಲ್ಲಿ ಈ ಅಸ್ಪ--ೃಷ್ಯ ಜನಾಂಗವನ್ನು ಗುರುತಿಸಿದ್ದು ಇದೆ. ಈ ಸಮಾಜವು ಶತ-ಶತಮಾನಗಳಿಂದ ತುಳಿತಕ್ಕೆ ಒಳಗಾಗಿದ್ದು 2011ರ ಜಾತಿ ಗಣತಿ ಲಭ್ಯವಿದೆ. ಜತೆಗೆ ಸದಾಶಿವ ಆಯೋಗದ ವರದಿಯೂ ಸಹ ಲಭ್ಯವಿದೆ. ಇಷ್ಟೆಲ್ಲ್ಲ ಮಾಹಿತಿ ಲಭ್ಯವಿದ್ದರೂ ಸರ್ಕಾರ ಒಳ ಮೀಸಲಾಗಿ ಕಲ್ಪಿಸಲು ವಿಳಂಬ ನೀತಿ ಅನುಸರಿಸುತ್ತಿರುವುದು ನಮಗೆ ಅನ್ಯಾಯ ಮಾಡಿದಂತಾಗಿದೆ ಎಂದರು.
ನಗರಸಭೆ ಸದಸ್ಯ ಪುಟ್ಟಪ್ಪ ಮರಿಯಮ್ಮನವರ ಮಾತನಾಡಿ, ಮಾದಿಗ ಸಮಾಜವು ಪರಿಶಿಷ್ಟ ಜಾತಿ ಸಮುದಾಯದಲ್ಲಿಯೇ ಹೆಚ್ಚು ಅನ್ಯಾಯಕ್ಕೆ ಒಳಗಾದ ಸಮಾಜವಾಗಿದೆ. ಕಳೆದ ಚುನಾವಣಾ ಸಂದರ್ಭದಲ್ಲಿ ಸದಾಶಿವ ಆಯೋಗದ ವರದಿ ಜಾರಿಗೊಳಿಸುವುದಾಗಿ ವಾಗ್ದಾನ ಮಾಡಿದ ಸರ್ಕಾರ ವಿನಾಕಾರಣ ಕಾಲ ಹರಣ ಮಾಡದೇ ಸುಪ್ರೀಂಕೋರ್ಟ್​ನ ಆದೇಶದನ್ವಯ ಎಲ್ಲರಂತೆ ನಮ್ಮ ಸಮಾಜಕ್ಕೂ ಸಮಾನತೆ ಕಲ್ಪಿಸಿಕೊಡಬೇಕು. ಇಲ್ಲದಿದ್ದರೆ ಮುಂದಿನ ದಿನಮಾನಗಳಲ್ಲಿ ತೀವ್ರತರನಾದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸ್ಥಳಕ್ಕೆ ಬಂದ ತಹಸೀಲ್ದಾರ್​ ಆರ್​.ಎಚ್​. ಭಾಗವಾನ್​ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪ್ರಮುಖರಾದ ಪ್ರಕಾಶ ಪೂಜಾರ, ಮೈಲಪ್ಪ ಗೋಣಿಬಸಮ್ಮನವರ, ಹೊನ್ನಪ್ಪ ಹೊನ್ನಾಪುರ, ಮೈಲಪ್ಪ ದಾಸಪ್ಪನವರ, ಕೆ.ಆರ್​. ಉಮೇಶ, ವಿಜಯ ಮಾಳಗಿ, ನವೀನ ವಿಕೇತ, ಬಿ.ಡಿ. ಸಾವಕ್ಕಳವರ, ಮಲ್ಲೆಶಪ್ಪ ಮದ್ಲೇರ, ಮಂಜುಳಾ ಮಾದರ, ಪಾರವ್ವ ಹರಿಜನ, ಶೇಖವ್ವ ಚಳಗೇರಿ, ಹೊನ್ನಪ್ಪ ಸಿದ್ದಪ್ಪನವರ, ಶೇಖಪ್ಪ ಕಲ್ಲಜ್ಜೇರ, ಶಶಿಧರ ಚಲವಾದಿ, ರಮೇಶ ಐರಣಿ, ರಾಘವೇಂದ್ರ ಆಡೂರ ಸೇರಿ ನೂರಾರು ಜನ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net