ಕನ್ನಡದ ‘ಸು ಫ್ರಮ್ ಸೋ’ ಚಿತ್ರದ ಮೂಲಕ ಜನಮನ್ನಣೆ ಗಳಿಸಿದ್ದ ನಟ, ನಿರ್ದೇಶಕ ಜೆ.ಪಿ.ತೂಮಿನಾಡು ಇತ್ತೀಚೆಗೆ ಗೆಳತಿ ರಶ್ಮಿಕಾ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟು ಸಿಹಿ ಸುದ್ದಿ ನೀಡಿದ್ದರು. ಸದ್ಯ ಅವರು ದಾಂಪತ್ಯ ಸವಿಯಲ್ಲಿರುವಾಗಲೇ ಮತ್ತೊಂದು ಸಂಭ್ರಮ ಅವರನ್ನರಸಿಕೊಂಡು ಬಂದಿದೆ. ಹೌದು, ಕನ್ನಡ ಚಿತ್ರರಂಗದಲ್ಲಿ ನಟ, ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಜೆ.ಪಿ. ತೂಮಿನಾಡು ಇದೀಗ ಮಲಯಾಳಂ ಚಿತ್ರರಂಗಕ್ಕೆ ಡೆಬ್ಯೂ ಮಾಡುತ್ತಿದ್ದಾರೆ. ಇತ್ತೀಚೆಗೆ ಸಿನಿಮಾ ಘೋಷಣೆಯಾಗಿದ್ದು, ಅದಕ್ಕೆ ‘ಹ್ಯಾಪಿ ಲೂಪ್’ ಎಂದು ಹೆಸರಿಡಲಾಗಿದೆ. ಜೆಪಿ ಜತೆಗೆ ಮಲಯಾಳಂ ನಟ ಮುಕೇಶ್ ಹಾಗೂ ನಟಿ ಮಂಜು ವಾರಿಯರ್ ಕಲಾಬಳಗದಲ್ಲಿದ್ದಾರೆ. ಈ ಮೂಲಕ ಮಲಯಾಳಂನ ಸ್ಟಾರ್ ಕಲಾವಿದರ ಜತೆ ಕನ್ನಡದ ನಟ ತೆರೆ ಹಂಚಿಕೊಳ್ಳುತ್ತಿರುವುದು ವಿಶೇಷ. ಮಲಯಾಳಂನ ‘ಗೌತಮಂಟೆ ರಾಧಂ’ ಖ್ಯಾತಿಯ ಆನಂದ್ ಮೆನೆನ್ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಈಗಾಗಲೇ ಶೂಟಿಂಗ್ ಆರಂಭವಾಗಿದೆ ಎಂದು ತಿಳಿದುಬಂದಿದೆ. ಇನ್ನು ‘ಸು ಫ್ರಮ್ ಸೋ’ ಚಿತ್ರವು ಮೊದಲು ಕನ್ನಡದಲ್ಲಿ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಂಡ ಬಳಿಕ ಮಲಯಾಳಂ, ತೆಲುಗು, ತಮಿಳಿಗೆ ಡಬ್ ಆಗಿತ್ತು. ಹಾಗೆಯೇ, ಮಾಲಿವುಡ್‌ನಲ್ಲಿ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ, ಜೆಪಿ ಕೇರಳ ಚಿತ್ರರಂಗಕ್ಕೆ ಪರಿಚಯವಾಗಿದ್ದರು. ಇದೀಗ ನೇರ ಮಲಯಾಳಂ ಚಿತ್ರದ ಮೂಲಕ ಮಾಲಿವುಡ್‌ನಲ್ಲಿ ಕಮಾಲ್ ಮಾಡಲು ನಟ ಮುಂದಾಗುತ್ತಿದ್ದಾರೆ. -ಏಜೆನ್ಸೀಸ್.