ಪ್ರೇಕ್ಷಕರಿಂದ ಜೈ, ಭರ್ಜರಿ ಕಲೆಕ್ಷನ್​ಗೆ ಸೈ! ಇಲ್ಲಿಯವರೆಗೆ ರಾಜ್​ ಬಿ. ಶೆಟ್ಟಿ ಚಿತ್ರ ಗಳಿಸಿದ್ದೆಷ್ಟು? ಹೀಗಿದೆ ವಿವರ | Su From So

ವಿಜಯವಾಣಿ - 2025-08-03T124359.954
Published on

Su From So: ವರ್ಷದ ಮೊದಲಾರ್ಧದಲ್ಲಿ ಅಷ್ಟಾಗಿ ಸದ್ದು ಮಾಡದ ಕನ್ನಡ ಚಿತ್ರರಂಗದ ಸಿನಿಮಾಗಳು, ದ್ವಿತೀಯಾರ್ಧದಲ್ಲಿ ಸಖತ್​ ಸದ್ದು ಮಾಡುತ್ತಿವೆ. ಬಾಕ್ಸ್​ ಆಫೀಸ್​ನಲ್ಲಿಯೂ ಕಮಾಲ್ ಮಾಡದೆ ಸಿನಿಪ್ರಿಯರ ನೆನಪಿನಂಗಳದಿಂದ ಕಣ್ಮರೆಯಾಗಿದ್ದ ಕನ್ನಡ ಚಿತ್ರಗಳು ಇದೀಗ ಭರ್ಜರಿ ಕಮ್​ಬ್ಯಾಕ್ ಮಾಡಿವೆ. ಇದು ಇತರೆ ಚಿತ್ರರಂಗದ ಸಿನಿಮಾಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಬೇರೆ ಭಾಷೆಯ ಫಿಲಂಗಳಿಗೆ ಟಕ್ಕರ್​ ಕೊಡುವುದಿರಲಿ, ನಮ್ಮ ಚಿತ್ರಗಳೊಂದಿಗೆ ಪೈಪೋಟಿ ಕೊಡುವ ಮಟ್ಟಿಗೆ ಸ್ಯಾಂಡಲ್​ವುಡ್ ಮುಂಚೂಣಿಯಲ್ಲಿರುವುದು ಗಮನಾರ್ಹ. ಈ ಸಾಲಿನಲ್ಲಿ ರಾಜ್​ ಬಿ. ಶೆಟ್ಟಿ ನಟಿಸಿ, ನಿರ್ಮಿಸಿರುವ 'ಸು ಫ್ರಮ್ ಸೋ' ಮೊದಲಿಗಿದೆ.

ಜೆ.ಪಿ. ತುಮಿನಾಡು ಬರೆದು, ನಟಿಸಿ, ನಿರ್ದೇಶಿಸಿರುವ ಸು ಫ್ರಮ್ ಸೋ, ಇದೇ ಜುಲೈ 25ರಂದು ರಾಜ್ಯದ ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಕಂಡಿತು. ಸದ್ದಿಲ್ಲದೇ ಕನ್ನಡ ಸಿನಿರಸಿಕರ ಮುಂದೆ ಹಾಜರಾದ ಈ ಚಿತ್ರಕ್ಕೆ ಮೊದಲ ದಿನವೇ ಉತ್ತಮ ಓಪನಿಂಗ್ ಹಾಗೂ ವಿಮರ್ಶೆಗಳು ಲಭಿಸಿತು. ಸು ಫ್ರಮ್ ಸೋ ನೋಡಿದ ಪ್ರೇಕ್ಷಕರು, ನಗೆಗಡಲಲ್ಲಿ ತೇಲಾಡಿದ ಚಿತ್ರಮಂದಿರದ ದೃಶ್ಯಗಳು ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತು. ಇದೀಗ ಬಿಡುಗಡೆಗೊಂಡು ಒಂದು ವಾರ ಕಳೆಯುತ್ತಿದ್ದಂತೆ ಚಿತ್ರವು ಉತ್ತಮ ಗಳಿಕೆಯನ್ನು ಕಂಡಿದೆ.

ಸಿನಿ ವರದಿ ಪ್ರಕಾರ, ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ಚಿತ್ರವು ದಾಖಲೆಯ ಗಳಿಕೆಯನ್ನೇ ಕಂಡಿದೆ. ಹಾಸ್ಯ, ಡ್ರಾಮಾ ಜಾನರ್​ನಲ್ಲಿ ಮೂಡಿಬಂದ 'ಸು ಫ್ರಮ್ ಸೋ', ಮೊದಲ ವಾರದಲ್ಲಿ 20.80 ಕೋಟಿ ರೂ. ಕಲೆಕ್ಷನ್ ಮಾಡಿದೆ. ಚಿತ್ರವು 2ನೇ ಶುಕ್ರವಾರದಂದು 3.80 ಕೋಟಿ ರೂ. ಗಳಿಕೆ ಕಂಡಿದ್ದು, ಎರಡನೇ ಶನಿವಾರ, ಅಂದಾಜು 5.50 ಕೋಟಿ ರೂ. ಎಣಿಸಿದೆ. ಇದು ಶುಕ್ರವಾರದ ಕಲೆಕ್ಷನ್​ಗಿಂತ ಹೆಚ್ಚಿದೆ. ಇನ್ನೂ ಶನಿವಾರ ಮತ್ತು ಭಾನುವಾರ ವಾರಂತ್ಯವಾದ ಹಿನ್ನಲೆ ನಿರೀಕ್ಷೆಗಿಂತ ಹೆಚ್ಚಿನ ಮಟ್ಟಿಗೆ ಪ್ರೇಕ್ಷಕರು ಚಿತ್ರಮಂದಿರಗಳನ್ನು ತುಂಬುತ್ತಿರುವುದು ಖುಷಿ ವಿಷಯ.

ಹೀಗಿದೆ ಒಟ್ಟು ಕಲೆಕ್ಷನ್ ವಿವರ

  • ಮೊದಲ ವಾರ: 20.80 ಕೋಟಿ ರೂ.
  • 2ನೇ ಶುಕ್ರವಾರ (ಆ.01) 3.80 ಕೋಟಿ ರೂ.
  • 2ನೇ ಶನಿವಾರ (ಆ.02) 5.50 ಕೋಟಿ ರೂ. (ಅಂದಾಜು)
  • 9 ದಿನಗಳಲ್ಲಿ ಒಟ್ಟು 30.10 ಕೋಟಿ ರೂ. ಕಲೆಕ್ಷನ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net