‘ವೈಬ್ರಂಟ್ ಬೆಂಗಳೂರು’ ಸಲಹೆಗಳ ಅಧ್ಯಯನ: ನೋಡಲ್ ಅಧಿಕಾರಿ ಜಯರಾಮ್ ರಾಯಪುರ ಹೇಳಿಕೆ

Published on

ಬೆಂಗಳೂರು: ಬ್ರ್ಯಾಂಡ್ ಬೆಂಗಳೂರು ಅಡಿಯಲ್ಲಿ ರಚಿತವಾಗಿರುವ ‘ವೈಬ್ರಂಟ್ ಬೆಂಗಳೂರು’ ವಿಷಯಕ್ಕೆ ಸ್ವೀಕರಿಸಿರುವ ಸಲಹೆಗಳನ್ನು ಸೃಷ್ಟಿ ಮಣಿಪಾಲ್ ಇನ್‌ಸ್ಟ್ಟಿಟ್ಯೂಟ್ ವಿದ್ಯಾರ್ಥಿಗಳಿಂದ ಅಧ್ಯಯನ ನಡೆಸಿ ವರದಿ ಪಡೆಯಲಾಗುವುದು ಎಂದು ಬಿಬಿಎಂಪಿ ವಿಶೇಷ ಆಯುಕ್ತ, ನೋಡಲ್ ಅಧಿಕಾರಿ ಜಯರಾಮ್ ರಾಯಪುರ ಹೇಳಿದ್ದಾರೆ.
ವೈಬ್ರಂಟ್ ಬೆಂಗಳೂರು ವಿಷಯಕ್ಕೆ ಸಂಬಂಧಿಸಿದಂತೆ ಸೃಷ್ಟಿ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆ್ ಡಿಸೈನ್ ಆ್ಯಂಡ್ ಟೆಕ್ನಾಲಜಿ ಸಂಸ್ಥೆಯಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವೈಬ್ರಂಟ್ ಬೆಂಗಳೂರು ಕುರಿತು ಸಾರ್ವಜನಿಕರಿಂದ ದೊಡ್ಡ ಸಂಖ್ಯೆಯಲ್ಲಿ ಸಲಹೆಗಳು ಬಂದಿವೆ. ಈ ಸಲಹೆಗಳ ಪ್ರ್ಯಾತ್ಯಕ್ಷಿಕೆಯ ಮೂಲಕ ಮಾಹಿತಿ ಪಡೆಯಲಾಯಿತು. ನಂತರ ಡಿಸೈನಿಂಗ್ ವಿದ್ಯಾರ್ಥಿಗಳನ್ನು 8 ಪ್ರತ್ಯೇಕ ತಂಡಗಳನ್ನಾಗಿ ಮಾಡಿ, ಆ ತಂಡಗಳಿಗೆ ವಿವಿಧ ವಿಷಯಗಳ ಕುರಿತು ಸಲಹೆಗಳನ್ನು ನೀಡಲು ಸೂಚಿಸಲಾಯಿತು ಎಂದರು.

ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ 7 ವಿವಿಧ ವಿಭಾಗಗಳಲ್ಲಿ ನಾಗರಿಕರಿಂದ ಸಲಹೆಗಳನ್ನು ಪಡೆಯಲಾಗಿದೆ. ಅದನ್ನು ಕಾರ್ಯಗತಗೊಳಿಸುವ ಸಲುವಾಗಿ ಶೈಕ್ಷಣಿಕ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಹೊಂದಲಾಗಿದೆ. ಸಲಹೆಗಳ ಜತೆಗೆ ವಿದ್ಯಾರ್ಥಿಗಳ ಆಲೋಚನೆಗಳಲ್ಲಿ ಬೆಂಗಳೂರು ಹೇಗಿರಬೇಕು ಎಂಬ ಸಲಹೆಗಳನ್ನು ಪಡೆದು ಎಲ್ಲ ಸಲಹೆಗಳನ್ನು ಕ್ರೋಢೀಕರಿಸಿ ವರದಿ ನೀಡಿದ ಬಳಿಕ, ಆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ನಗರದಲ್ಲಿ ಮೇಲ್ಸೇತುವೆಗಳ ಕೆಳಭಾಗದ ಸೌಂದರ್ಯೀಕರಣ, ಬೆಂಗಳೂರು ಹಬ್ಬ/ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ, ಪಾರಂಪರಿಕ ಕಾರಿಡಾರ್ ನಿರ್ಮಾಣ, ಸಾರ್ವಜನಿಕ/ತೆರೆದ ಪ್ರದೇಶಗಳ ಅಭಿವೃದ್ಧಿ, ಗೋಡೆಗಳ ಮೇಲೆ ಆಕರ್ಷಕ ರೀತಿಯಲ್ಲಿ ಚಿತ್ರ ಬಿಡಿಸುವುದು, ಆ್ಯಂಪಿ ಥಿಯೇಟರ್‌ಗಳ ನಿರ್ಮಾಣ, ತೆರೆದ/ಸಾರ್ವಜನಿಕ ಸ್ಥಳಗಳಲ್ಲಿ ವಾಚನಾಲಯಗಳ ಆರಂಭ ಸೇರಿದಂತೆ ಇತರ ವಿಷಯಗಳ ಬಗ್ಗೆ ಉತ್ತಮ ಸಲಹೆಗಳು ಬಂದರೆ ಅದನ್ನು ಸರ್ಕಾರದ ಗಮನಕ್ಕೆ ತಂದು ಅಭಿವೃದ್ಧಿಪಡಿಸಲಾಗುವುದು ಎಂದು ಜಯರಾಮ್ ರಾಯಪುರ ವಿವರಿಸಿದರು.

ಕಾರ್ಯಕ್ರಮದಲ್ಲಿ ಸೃಷ್ಟಿ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆ್ ಡಿಸೈನ್ ಆ್ಯಂಡ್ ಟೆಕ್ನಾಲಜಿಯ ಅಧ್ಯಕ್ಷ ಡಾ. ಅರಿಂದಮ್ ದಾಸ್, ಆಕರ್ಷಕ ಬೆಂಗಳೂರಿನ ಸದಸ್ಯರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಂದ ಬಂದಿರುವ ಸಲಹೆಗಳು:

  • ಬೆಂಗಳೂರಿನ ಪಾರಂಪರಿಕತೆ, ಸಂಸ್ಕೃತಿ ಬಗ್ಗೆ ಕ್ಯಾಲೆಂಡರ್ ಮುದ್ರಣ. ಅದರಲ್ಲಿ ನಗರದಲ್ಲಾಗುವ ಮೇಳ, ಜಾತ್ರೆ, ಹಬ್ಬಗಳ ಬಗ್ಗೆ ಮಾಹಿತಿ ನೀಡುವುದು.
  • ಮೇಲ್ಸೇತುವೆ ಕೆಳಭಾಗದಲ್ಲಿ ಸೌಂದರ್ಯೀಕರಣ, ಉದ್ಯಾನ ನಿರ್ಮಾಣ, ಆಟಿಕೆಗಳ ಅಳವಡಿಕೆ, ಪ್ರಾಣಿಗಳಿಗಾಗಿ ತಂಗುದಾಣ ನಿರ್ಮಾಣ, ಪಾರ್ಕಿಂಗ್ ವ್ಯವಸ್ಥೆ.
  • ತೆರೆದ ಪ್ರದೇಶಗಳಲ್ಲಿ ವಿಶ್ರಾಂತಿಗೆ ಆಸನಗಳ ವ್ಯವಸ್ಥೆ , ಪ್ರಮುಖ ಸ್ಥಳಗಳಲ್ಲಿ ಚೆಸ್ ಇನ್ನಿತರ ಆಟಿಕೆಗಳನ್ನಿಟ್ಟು ಸಾರ್ವಜನಿಕರಿಗೆ ಆಟವಾಡಲು ಅವಕಾಶ.
  • ತೆರೆದ ಸ್ಥಳಗಳಲ್ಲಿ ಸಾರ್ವಜನಿಕ ಶೌಚಾಲಯಗಳ ನಿರ್ಮಾಣ ಮಾಡುವುದು.
  • ಪಾದಚಾರಿ ಮಾರ್ಗಗಳಲ್ಲಿ ಪ್ರತ್ಯೇಕವಾಗಿ ಸೈಕಲ್ ಲೈನ್ ವ್ಯವಸ್ಥೆ.
  • ವಲಸೆ ಕಾರ್ಮಿಕ ಮಕ್ಕಳ ವ್ಯಾಸಂಗಕ್ಕಾಗಿ ಶೈಕ್ಷಣಿಕ ಕಿಯೋಸ್ಕ್ ತೆರೆಯುವುದು.
  • ರಸ್ತೆ ಬದಿಯ ಖಾಲಿ ಜಾಗಗಳಿಗೆ ಕಾಂಪೌಂಡ್ ಗೋಡೆ ನಿರ್ಮಿಸುವುದು.
  • ಮಹಾನಗರಕ್ಕೆ ಸಮಗ್ರ ಪರಂಪರೆ ಸಂರಕ್ಷಣಾ ಕಾನೂನು ರೂಪಿಸುವುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net