ಓದಿದ್ದು, ಐಐಐಟಿನಲ್ಲಿ ಕೆಲಸ ಮಾತ್ರ ಗಿಫ್ಟ್ ವೋಚರ್‌ಗೆ ಕನ್ನ..!

CP
Published on

ಬೆಂಗಳೂರು: ವೆಬ್‌ಸೈಟ್ ಹ್ಯಾಕ್ ಮಾಡಿ ಗ್ರಾಹಕರ ಕೋಟ್ಯಂತರ ರೂ. ಮೌಲ್ಯದ ಗಿಫ್ಟ್ ವೋಚರ್‌ಗಳನ್ನು ದೋಚಿ ವಿದೇಶಕ್ಕೆ ಎಸ್ಕೆಪ್ ಆಗಲು ಸಜ್ಜಾಗಿದ್ದ ಹ್ಯಾಕರ್‌ನನ್ನು ಆಗ್ನೇಯ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದು, 4.16 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಬದಲೂರು ಲಕ್ಷ್ಮೀಪತಿ (33) ಬಂಧಿತ. ಇತ್ತೀಚಿಗೆ ರಿವಾರ್ಡ್ಸ್- 360 ಕಂಪನಿ ವೆಬ್ಸೈಟ್ ಅನ್ನು ಹ್ಯಾಕ್ ಮಾಡಿ ಕೋಟ್ಯಂತರ ರೂ. ಮೊತ್ತದ ಚಿನ್ನ, ಬೆಳ್ಳಿಯನ್ನು ಖರೀದಿಸಿದ್ದ. ಈ ಬಗ್ಗೆ ತನಿಖೆ ಕೈಗೊಂಡ ಇನ್‌ಸ್ಪೆಕ್ಟರ್ ವಿ.ಹರೀಶ್ ನೇತೃತ್ವದ ತಂಡ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

ಆಂಧ್ರಪ್ರದೇಶದಲ್ಲಿ ಪಿಯುಸಿ ಮುಗಿಸಿ ಅಲ್ಲಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫಾರ್ಮೆಷನ್ ಟೆಕ್ನಾಲಜಿ (ಐಐಐಟಿ)ಯಲ್ಲಿ ಇಂಜಿನಿಯರಿಂಗ್ ಪದವಿ ಪೂರೈಸಿದ್ದ ಲಕ್ಷ್ಮೀಪತಿ, ಬೆಂಗಳೂರು ಮತ್ತು ದುಬೈನಲ್ಲಿ ಖಾಸಗಿ ಕಂಪನಿಗಳಲ್ಲಿ ಕೆಲಕಾಲ ಕೆಲಸ ಮಾಡಿದ್ದ. ಎಥಿಕಲ್ ಹ್ಯಾಕಿಂಗ್ ಕಲಿತು ಕ್ರಿಪ್ಟೋ ಕರೆನ್ಸಿಯಲ್ಲಿ ಕೆಲಕಾಲ ಹೂಡಿಕೆ ಮಾಡಿದ್ದ. ಇದಾದ ಮೇಲೆ ಸುಲಭವಾಗಿ ಹಣ ಸಂಪಾದನೆ ಮಾಡಿ ವಿದೇಶದಲ್ಲಿ ವಾಸ್ತವ್ಯ ಹೂಡಲು ಪ್ಲ್ಯಾನ್ ಮಾಡಿ ಹ್ಯಾಕಿಂಗ್ ಶುರು ಮಾಡಿದ್ದ. ರಿವಾರ್ಡ್ಸ್-360 ಕಂಪನಿ ವೆಬ್‌ಸೈಟ್ ಹ್ಯಾಕ್ ಮಾಡಿ ಗ್ರಾಹಕರಿಗೆ ವಿತರಿಸಲು ಮೀಸಲಿಟ್ಟಿದ್ದ ವೋಚರ್‌ಗಳನ್ನು ಕದ್ದು ಅದನ್ನೇ ಬಳಸಿಕೊಂಡು ಲಕ್ಷ್ಮೀಪತಿ, ಇ-ಕಾಮರ್ಸ್‌ನಲ್ಲಿ ಚಿನ್ನಾಭರಣ, ದ್ವಿಚಕ್ರ ವಾಹನಗಳು, ಎಲೆಕ್ಟ್ರಾನಿಕ್ ಉಪಕರಣಗಳನ್ನು ಖರೀದಿಸಿದ್ದ.

ಇತ್ತ ವೋಚರ್ ಸ್ವೀಕರಿಸಿದ ಗ್ರಾಹಕರು ಬಳಕೆ ಮಾಡದಿದ್ದರೂ ರಿವಾರ್ಡ್ ಪಾಯಿಂಟ್ಸ್ ಖಾಲಿ ಆಗುತ್ತಿತ್ತು. ಈ ಬಗ್ಗೆ ಕಂಪನಿಗೆ ಕೆಲ ಗ್ರಾಹಕರು ದೂರು ನೀಡಿದರು. ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು, ಕಂಪನಿ ವೆಬ್‌ಸೈಟ್ ಪರಿಶೀಲನೆ ನಡೆಸಿದಾಗ ಹ್ಯಾಕ್ ಆಗಿರುವುದು ಬೆಳಕಿಗೆ ಬಂದಿದೆ. ರಿವಾರ್ಡ್ಸ್- 360 ಕಂಪನಿ ನಿರ್ದೇಶಕ ಆಗ್ನೇಯ ಸಿಇಎನ್ ಠಾಣೆಗೆ ದೂರು ನೀಡಿದರು. ಇದರ ಅನ್ವಯ ತನಿಖೆ ನಡೆಸಿದ ಪೊಲೀಸರು, ಹಣ ವರ್ಗಾವಣೆ ಸೇರಿ ತಾಂತ್ರಿಕ ಮಾಹಿತಿ ಆಧರಿಸಿ ಹ್ಯಾಕರ್‌ನನ್ನು ಬಂಧಿಸಿದ್ದಾರೆ ಎಂದು ಬಿ.ದಯಾನಂದ್ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net