ಕಲ್ಯಾಣ ಚಾಲುಕ್ಯರ ಕಾಲದ ಶಾಸನ ಅಧ್ಯಯನ

skp shasana
ಕಲ್ಮನೆಯಲ್ಲಿ ದೊರೆತ ಕಲ್ಯಾಣ ಚಾಲುಕ್ಯರ ಕಾಲದ ಎರಡು ಶಾಸನ
Published on

ಶಿಕಾರಿಪುರ: ತಾಲೂಕಿನ ಕಲ್ಮನೆ ಗ್ರಾಮದಲ್ಲಿ ಪತ್ತೆಯಾದ ಕಲ್ಯಾಣ ಚಾಲುಕ್ಯರ ಕಾಲದ ಎರಡು ಶಾಸನಗಳನ್ನು ಅಧ್ಯನ ಮಾಡಲಾಗಿದೆ.

ಹಂಪಿಯ ಪುರಾತತ್ವ ಇಲಾಖೆ ನಿರ್ದೇಶಕ ಆರ್.ಶೇಜೇಶ್ವರ ನಾಯಕ್ ಮತ್ತು ಮಂಜಪ್ಪ ಕ್ಷೇತ್ರ ಕಾರ್ಯ ನಡೆಸುವ ಸಂದರ್ಭದಲ್ಲಿ ಈ ಎರಡು ಶಾಸನಗಳು ದೊರೆತಿವೆ. ಸ್ಥಳೀಯ ಬನ್ನಿಕಾಳಮ್ಮನ ಗುಡಿ ಹತ್ತಿರ ಎರಡು ಕಲ್ಲಿನ ಶಾಸನಗಳು ದೊರೆತಿವೆ. ಕಲ್ಯಾಣ ಚಾಲುಕ್ಯರ ಅರಸ ಆರನೇ ವಿಕ್ರಮಾದಿತ್ಯನ (ಕ್ರಿ.ಶ.1084-1096) ಕಾಲಕ್ಕೆ ಸೇರಿದವು ಎಂದು ಅಂದಾಜಿಸಲಾಗಿದೆ.

ಒಂದನೇ ಶಾಸನದಲ್ಲಿ ಕಲ್ಮನೆಯ ಶ್ರೀ ಮಲ್ಲಿಕಾರ್ಜುನ ದೇವರಿಗೆ ದಾನ ಬಿಟ್ಟ ವಿಷಯವಿದೆ. ಶಾಸನದ ಮೇಲ್ಭಾಗದಲ್ಲಿ ಸೂರ್ಯ, ಚಂದ್ರ, ಲಿಂಗಪೂಜೆ ಮಾಡುತ್ತಿರುವ ಯತಿ, ನೀರಿನ ಕೊಡ, ಹಸು ಮತ್ತು ಕರುವಿನ ಉಬ್ಬು ಶಿಲ್ಪವಿದೆ. ಸಂಕಗೊಣ್ಣನ ಹೆಂಡತಿ ಬೆಳಂಬೆ ಭೂಮಿ ದಾನ ನೀಡಿದ ವಿಷಯವಿದೆ.

ಇನ್ನೊಂದು ಶಾಸನವು ಹದಿನೆಂಟು ಸಾಲುಗಳಿಂದ ಕೂಡಿದೆ. ಇದರ ಮೇಲ್ಭಾಗದಲ್ಲೂ ಶಿವಲಿಂಗ ಮತ್ತು ಹಸು ಚಿತ್ರ ಇವೆ. ಇದು ಬಹಳ ಸವಕಲಾಗಿದೆ. ಇದರಲ್ಲಿ ಇಲ್ಲಿನ ಬೆಟ್ಟೇಶ್ವರ ದೇವರ ನಂದಾದೀಪಕ್ಕೆ 5 ಗದ್ಯಾಣ ದಾನ ಬಿಟ್ಟಿರುವ ವಿಷಯವಿದೆ. ಶಾಸನದಲ್ಲಿ ಕಲ್ಮನೆ ಗ್ರಾಮದ ಹೆಸರು ಕಲ್ಸಲವಾನಿ ಎಂದು ಉಲ್ಲೇಖವಾಗಿದೆ. ಶಾಸನವನ್ನು ಡಾ. ಜಗದೀಶ್ ಓದಿ ಅರ್ಥೈಸಿದ್ದಾರೆ. ಸ್ಥಳೀಯರಾದ ಪರಶುರಾಮ್ಲೋಹಿತಾಚಾರ್, ಮಾಯಾಚಾರ್, ಶಿವಮೂರ್ತೆಪ್ಪ ಸಹಕರಿಸಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net