ಬಸ್​ ಬಾಗಿಲಲ್ಲಿ ನೇತಾಡಿಕೊಂಡು ಪ್ರಯಾಣ! ವಿದ್ಯಾರ್ಥಿಗಳ ಈ ಪಾಡು ನೋಡೋಕಾಗಲ್ಲ

bus
Published on

ರಾಯಚೂರು: ಕರೊನಾ ಸಮಸ್ಯೆ ತಿಳಿಯಾಗಿ ಶಾಲೆಕಾಲೇಜುಗಳೇನೋ ಶುರುವಾಗಿದೆ. ಆದರೆ ಎಷ್ಟೋ ಕಡೆ ಸಮರ್ಪಕ ಸಾರಿಗೆ ವ್ಯವಸ್ಥೆಯಿಲ್ಲದೆ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಅವಸ್ಥೆ ಪಡುವಂತಾಗಿದೆ. ಇದೇ ರೀತಿಯಲ್ಲಿ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ವಿದ್ಯಾರ್ಥಿಗಳು ಬಸ್ಸಿಗಾಗಿ ನಿತ್ಯ ಪರದಾಡುತ್ತಿದ್ದಾರೆ.

ನಿತ್ಯ ನೂರಾರು ವಿದ್ಯಾರ್ಥಿಗಳು ಸಿರವಾರಕ್ಕೆ ಶಾಲೆಕಾಲೇಜಿಗೆ ಬರುತ್ತಾರೆ. ಆದರೆ, ನಾರಬಂಡದಿಂದ ಸಿರವಾರಕ್ಕೆ ಒಂದೇ ಬಸ್ ಬಿಟ್ಟಿರುವುದರಿಂದ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಕೆಲವು ವಿದ್ಯಾರ್ಥಿಗಳಿಗೆ ಬಸ್ಸಿನೊಳಗೆ ಜಾಗ ಸಿಕ್ಕರೆ ಇನ್ನೂ ಕೆಲ ವಿದ್ಯಾರ್ಥಿಗಳು ಬಸ್ಸಿನ ದ್ವಾರದಲ್ಲೇ ಜೋತು ಬಿದ್ದು ಪ್ರಯಾಣಿಸುವ ಅನಿವಾರ್ಯತೆ ಎದುರಾಗಿದೆ. ಹೀಗೆ ನೇತಾಡಿಕೊಂಡು ಜೀವಭಯದಲ್ಲೇ ಶಾಲಾ-ಕಾಲೇಜುಗಳಿಗೆ ವಿದ್ಯಾರ್ಥಿಗಳು ಹಾಜರಾಗುತ್ತಿದ್ದಾರೆ. ನಾರಬಂಡ, ನಾರಬಂಡ ತಾಂಡಾ, ಹುಣಚೇಡ್, ಅಲ್ಕೋಡ್, ಶಾವಂತಗಲ್, ವಡವಟ್ಟಿ ಸೇರಿದಂತೆ ಹತ್ತಾರು ಗ್ರಾಮಗಳ ವಿದ್ಯಾರ್ಥಿಗಳ ಪರಿಸ್ಥಿತಿ ಹೇಳತೀರದು.

ಸಮರ್ಪಕ ಬಸ್ ಬಿಡದಿರುವ ಬಗ್ಗೆ ಬೇಸರಗೊಂಡ ವಿದ್ಯಾರ್ಥಿಗಳು ಇಂದು ನಾರಬಂಡ ಬಸ್​ ನಿಲ್ದಾಣದ ಬಳಿ ಬಸ್ ತಡೆದು ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ಅಧಿಕಾರಿಗಳು ಸ್ಥಳಕ್ಕೆ ಬಾರದಿದ್ದ ಕಾರಣಕ್ಕೆ ನಾರಬಂಡದಿಂದ ಸಿರವಾರಕ್ಕೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಇವರ ಈ ಸಮಸ್ಯೆಗೆ ಅಧಿಕಾರಿಗಳು ಏನು ಪರಿಹಾರ ಕಲ್ಪಿಸುತ್ತಾರೋ ಕಾದುನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net