ವಿದ್ಯಾರ್ಥಿಗಳು ಜ್ಞಾನಕ್ಕಾಗಿ ಮಾತ್ರ ಮೊಬೈಲ್ ಬಳಸಲಿ: ಉಮಾಶ್ರೀ

arya pu collage
ಶಿವಮೊಗ್ಗ ಆರ್ಯ ಕಾಲೇಜಿನಲ್ಲಿ ಹಿರಿಯ ನಟಿ ಉಮಾಶ್ರೀ ಅವರನ್ನು ಸನ್ಮಾನಿಸಲಾಯಿತು. ಎನ್.ರಮೇಶ್, ನವೀನ್ ಶ್ರೀನಿವಾಸಾಚಾರ್ಯ, ಕಣ್ಣನ್ ಇದ್ದರು.
Published on

ಶಿವಮೊಗ್ಗ: ಮಕ್ಕಳ ಪಾಲಿಗೆ ಪಿಯುಸಿ ಅತ್ಯಂತ ಮಹತ್ವವಾದುದು. ಹದಿಹರೆಯದ ವಯಸ್ಸಿನಲ್ಲಿ ಕಾಡುವ, ಹಾಡುವ ತುಂಟತನದ ಮನಸ್ಸು ಇರುತ್ತದೆ. ಮನಸ್ಸು ಕೂಡ ಚಾಂಚಲ್ಯದಿಂದ ಕೂಡಿರುತ್ತದೆ. ಅದನ್ನೆಲ್ಲ ದಾಟಿ ಓದುವ ಕಡೆ ಗಮನಹರಿಸಬೇಕು ಎಂದು ಹಿರಿಯ ನಟಿ, ಎಂಎಲ್‌ಸಿ ಉಮಾಶ್ರೀ ಹೇಳಿದರು.

ನಗರದ ಆರ್ಯ ಪಿಯು ಕಾಲೇಜಿಗೆ ಶುಕ್ರವಾರ ಭೇಟಿ ನೀಡಿ ಸನ್ಮಾನ ಸ್ವೀಕರಿಸಿ ಮಕ್ಕಳೊಂದಿಗೆ ಸಂವಾದ ನಡೆಸಿದ ಅವರು, ಹದಿಹರೆಯದ ಮಕ್ಕಳ ಮನಸ್ಸು ಹೂವಿನ ಮೊಗ್ಗು ಇದ್ದಂತೆ. ಹೂವಂತೆ ಅರಳಿ ಕಂಪು ಸೂಸಬೇಕೋ ವಿನಃ ಅಡ್ಡದಾರಿ ಹಿಡಿದು ದುರ್ನಾತ ಬೀರಬಾರದು ಎಂದರು.
ಮೊಬೈಲ್ ಎಂಬುದು ಒಂದು ದೊಡ್ಡ ಮಾಯಾಜಾಲ. ಅದರ ಗೀಳಗೆ ಬೀಳದೆ ಜ್ಞಾನಕ್ಕಾಗಿ ಮಾತ್ರ ಅದನ್ನು ಬಳಸಬೇಕು. ಬೇಡವಾದ ವಿಷಯಗಳಿಗೆ ಗಮನ ಕೊಡದೆ ತಂದೆ-ತಾಯಿಗಳ ಕಷ್ಟಗಳ ಅರ್ಥ ಮಾಡಿಕೊಳ್ಳಬೇಕು. ಗುರುಗಳ ಮಾತನ್ನು ಕೇಳಬೇಕು. ಇಂಗ್ಲಿಷ್ ಕಲಿತರೂ ಕನ್ನಡಕ್ಕೆ ಆದ್ಯತೆ ಕೊಡಬೇಕು ಎಂದು ಸಲಹೆ ನೀಡಿದರು.
ಆರ್ಯ ಪಿಯು ಕಾಲೇಜಿನ ಅಧ್ಯಕ್ಷ ಎನ್.ರಮೇಶ್ ಮಾತಾನಾಡಿ, ಉಮಾಶ್ರೀ ಒಡಲಾಳದ ಸಾಕವ್ವ, ಪುಟ್ಟಕ್ಕನ ಮಕ್ಕಳಂತೆ ಎಲ್ಲ ಮಕ್ಕಳನ್ನು ಸಲಹುವರು. 400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಸಿನಿಮಾ ಲೋಕದಲ್ಲಿ ನಕ್ಷತ್ರದಂತೆ ಹೊಳೆಯುತ್ತಿದ್ದಾರೆ. ಅವರು ಹಚ್ಚಿದ ನಟನೆಯ ಹಣತೆ ಸದಾ ಬೆಳಗುತ್ತಿದೆ ಎಂದರು. ಕಾಲೇಜಿನ ಪ್ರಾಚಾರ್ಯ ನವೀನ್ ಶ್ರೀನಿವಾಸಾಚಾರ್ಯ, ಕಣ್ಣನ್ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net