

ಮಳವಳ್ಳಿ: ಶರಣರ ಸಂಘಟನಾ ವೇದಿಕೆ ತಾಲೂಕು ಘಟಕದ ವತಿಯಿಂದ ಭಾನುವಾರ ಶಾಂತಿ ಸಮುದಾಯ ಭವನದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲೂಕಿನ ಶಾಲೆಗಳಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಹೆಬ್ಬಣಿ ಮಠದ ಶ್ರೀ ಶಂಭುಲಿಂಗ ಸ್ವಾಮೀಜಿ ಮಾತನಾಡಿ, ಇಂದಿನ ಯುವ ಪೀಳಿಗೆ ಶಿಕ್ಷಣದ ಜತೆಗೆ ಸನ್ನಡತೆ ಜೀವನ ಶೈಲಿಯನ್ನು ರೂಪಿಸಿಕೊಳ್ಳಬೇಕು. ಉತ್ತಮ ಅಂಕ ಗಳಿಸಲು ಹಗಲಿರುಳು ಶ್ರಮಿಸುವ ರೀತಿಯಲ್ಲೇ ವಿದ್ಯಾರ್ಥಿಗಳು ಗುರು, ಹಿರಿಯರಿಗೆ ಗೌರವ ಕೊಡುವ ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು. ಇದಕ್ಕೆ ಮಕ್ಕಳಿರುವ ಮನೆಯ ಕುಟುಂಬದಲ್ಲಿಯೂ ಪೂರಕವಾದ ವಾತಾವರಣವನ್ನು ಪಾಲಕರು ಪಲ್ಪಿಸಿಕೊಡಬೇಕು. ಆಗ ಮಾತ್ರ ಮಕ್ಕಳ ಭವಿಷ್ಯ ದಿನಗಳು ಉಜ್ವಲವಾಗಿರುತ್ತದೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ ಮಾತನಾಡಿ, ಎಸ್‌ಎಎಸ್‌ಎಲ್ ಸಿ ನಂತರದ ಶೈಕ್ಷಣಿಕ ಅವಧಿಯಲ್ಲಿ ವಿದ್ಯಾರ್ಥಿಗಳು ಏಕಾಗ್ರತೆಯಿಂದ ಕಲಿಕೆಯ ಕಡೆಗೆ ಒತ್ತು ನೀಡಬೇಕು. ಪ್ರೌಢಾವಸ್ಥೆಯ ದಿನಗಳಾಗಿರುವುದರಿಂದ ಚಂಚಲತೆಯಿಂದ ಮನಸ್ಸಿನ ಹತೋಟಿ ಕಳೆದುಕೊಂಡರೆ ಮುಂದಿನ ಭವಿಷ್ಯದ ಉತ್ತಮ ಜೀವನವನ್ನು ಕಳೆದುಕೊಳ್ಳಬೇಕಾಗುತ್ತದೆ. ಹಾಗಾಗಿ ಜಾಗ್ರತೆಯಿಂದ ಕಲಿಕೆಯತ್ತ ನಿಮ್ಮ ಗಮನವನ್ನು ಕೇಂದ್ರೀಕರಿಸಿರುವಂತೆ ಕಿವಿಮಾತು ಹೇಳಿದರು.
ತಾಲೂಕಿನ ವಿವಿಧ ಶಾಲೆಗಳಲ್ಲಿ ವ್ಯಾಸಂಗ ಮಾಡಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ತೇರ್ಗಡೆಯಾಗಿರುವ 80 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ, ಸದಸ್ಯ ನಂದಕುಮಾರ್, ಶರಣರ ಸಂಘಟನಾ ವೇದಿಕೆ ಸಂಸ್ಥಾಪಕ ಜಿಲ್ಲಾಧ್ಯಕ್ಷ ಕಾಡುಕೊತ್ತನಹಳ್ಳಿ ನಂದೀಶ್, ಗೌರವಾಧ್ಯಕ್ಷ ಬಬ್ರುವಾಹನ, ತಾಲೂಕು ಘಟಕದ ಗೌರವಾಧ್ಯಕ್ಷ ಮಹದೇವಪ್ಪ, ಅಧ್ಯಕ್ಷ ಹಂಗ್ರಾಪುರ ಮಹದೇವಸ್ವಾಮಿ ,ಉಪಾಧ್ಯಕ್ಷ ಉಪ್ಪನಹಳ್ಳಿ ಬಸವರಾಜು, ಸಂಘಟನಾ ಕಾರ್ಯದರ್ಶಿ ಹೆಬ್ಬಣಿ ಮಹೇಶ್, ಕಾರ್ಯದರ್ಶಿ ಶಿವಪ್ರಸಾದ್, ಹೋಬಳಿ ಅಧ್ಯಕ್ಷರಾದ ಮಹಾಲಿಂಗಸ್ವಾಮಿ, ನಂಜುಡಸ್ವಾಮಿ, ಸದಸ್ಯರಾದ ಸದಸ್ಯ ಮಾಗನೂರು ಸುಂದರ್, ಮುಟ್ಟನಹಳ್ಳಿ ಕುಮಾರ್, ಮೂರ್ತಿ, ಕ್ಯಾತನಹಳ್ಳಿ ಸೊಸೈಟಿ ಅಧ್ಯಕ್ಷ ಕೆ.ಎಂ.ಜಗದೀಶ್, ಹಾಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್, ರಾಗಿ ಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಭು, ಶಾಂತಿ ಕಾಲೇಜು ಟ್ರಸ್ಟಿ ಪುಟ್ಟರಾಜು, ಸುಜ್ಜಲೂರು ಸೊಸೈಟಿ ಮಾಜಿ ಅಧ್ಯಕ್ಷ ಎಚ್.ಸಿ.ಮಹೇಶ್ ಇದ್ದರು.