ವಿದ್ಯಾರ್ಥಿಗಳಲ್ಲಿ ದೂರಾಗದ ಮೊಬೈಲ್​ ಹುಚ್ಚು, ಭವಿಷ್ಯಕ್ಕೆ ಕಿಚ್ಚು! ದ್ವೀತಿಯ ಪಿಯು ಮಧ್ಯಂತರ ಪರೀಕ್ಷೆಯಲ್ಲಿ ಶೇ.30ಫಲಿತಾಂಶ ; ದಂಡಿಸಲು ಉಪನ್ಯಾಸಕರ ಹಿಂದೇಟು

ಕೋಲಾರದ ಕುವೆಂಪು ಉದ್ಯಾನದಲ್ಲಿ ತರಗತಿಗೆ ಚಕ್ಕರ್​ ಹೊಡೆದು ಮೊಬೈಲ್​ ವೀಕ್ಷಣೆಯಲ್ಲಿ ತಲ್ಲೀನರಾಗಿರುವ ವಿದ್ಯಾರ್ಥಿಗಳು.
ಕೋಲಾರದ ಕುವೆಂಪು ಉದ್ಯಾನದಲ್ಲಿ ತರಗತಿಗೆ ಚಕ್ಕರ್​ ಹೊಡೆದು ಮೊಬೈಲ್​ ವೀಕ್ಷಣೆಯಲ್ಲಿ ತಲ್ಲೀನರಾಗಿರುವ ವಿದ್ಯಾರ್ಥಿಗಳು.
Published on

ಕೋಲಾರ: ಪರೀಕ್ಷೆಗಳು ಸಮೀಪಿಸುತ್ತಿವೆ, ಆದರೆ ಬಹುತೇಕ ವಿದ್ಯಾರ್ಥಿಗಳ ಎದೆಯಲ್ಲಿ ಪರೀಕ್ಷೆ ಭಯ, ಬೆಳಗ್ಗೆ ಎದ್ದು ಓದಬೇಕೆಂಬ ತವಕ ಕಾಣುತ್ತಿಲ್ಲ. ಕರೊನಾ ಕಾಲಕ್ಕೆ ಆನ್​ಲೈನ್​ ಕ್ಲಾಸ್​ಗೆಂದು ಪುಸ್ತಕದ ಜಾಗದಲ್ಲಿ ಬಂದ ಮೊಬೈಲ್​, ಮಕ್ಕಳ ಮಸ್ತಕದಲ್ಲಿ ಬಲವಾಗಿ ಬೇರೂರಿಬಿಟ್ಟಿದೆ. ಮಕ್ಕಳು ಶಾಲಾ&ಕಾಲೇಜು, ಟ್ಯೂಷನ್​ ಮತ್ತು ಮನೆಗಳಲ್ಲಿ ಸ್ವಲ್ಪ ಸಮಯ ಸಿಕ್ಕರೆ ಮೊಬೈಲ್​ ಹಿಡಿದು ಕುಳಿತುಕೊಳ್ಳುತ್ತಾರೆ. ಇದು ಶಾಲಾ&ಕಾಲೇಜು ಮುಖ್ಯಸ್ಥರು, ಶಿಕ್ಷಣ ಸಂಸ್ಥೆ, ಪಾಲಕರು ಮತ್ತು ಇಲಾಖೆ ನಿದ್ದೆಗೆಡಿಸುವಂತೆ ಮಾಡಿದೆ.

ಜಿಲ್ಲೆಯಲ್ಲಿ 33 ಸರ್ಕಾರಿ, 12 ಅನುದಾನಿತ, 88 ಖಾಸಗಿ ಕಾಲೇಜುಗಳಿವೆ. 29,831 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಕಳೆದ ವರ್ಷ ಜಿಲ್ಲೆ ಪಿಯುಸಿಯಲ್ಲಿ ಶೇ.60.41 ಫಲಿತಾಂಶ ಬಂದು ರಾಜ್ಯದಲ್ಲಿ 24ನೇ ಸ್ಥಾನದಲ್ಲಿತ್ತು. ಕರೊನಾದಿಂದಾಗಿ 2 ವರ್ಷ ಸರಿಯಾಗಿ ತರಗತಿಗಳು ನಡೆಯದೆ ಆನ್​ಲೈನ್​ ಕ್ಲಾಸ್​ ನಡೆದಿತ್ತು. ಇದರಿಂದಾಗಿ ಫಲಿತಾಂಶ ಕುಸಿತವಾಯಿತೆನ್ನಬಹುದು. ಆದರೆ ಈ ಬಾರಿ ತರಗತಿ, ವಿಶೇಷ ತರಗತಿ, ಗುಂಪು ಅಧ್ಯಯನ ನಡೆಯುತ್ತಿದ್ದರೂ ದ್ವೀತಿಯ ಪಿಯುಸಿ ಮಧ್ಯಂತರ ಪರೀಕ್ಷೆಯಲ್ಲಿ ಶೇ. 30 ಫಲಿತಾಂಶ ಮಾತ್ರ ಹೊರಬಿದ್ದಿದೆ.

ಹಾಸ್ಟೆಲ್​, ಶಿಕ್ಷಣ ಸಂಸ್ಥೆಗಳಿಗೆ ಚಕ್ಕರ್​

ಹಾಸ್ಟೆಲ್​, ವಸತಿ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಲ್ಲಿ ತರಗತಿಗಳಿಗೆ ಚಕ್ಕರ್​ ಹಾಕುವುದು, ಪಾರ್ಕ್​, ಆಟದ ಮೈದಾನಗಳಲ್ಲಿ ಕುಳಿತು ಮೊಬೈಲ್​ ನೋಡುವ ಗೀಳು ಹೆಚ್ಚಾಗಿದೆ. ಹಲವು ವಿದ್ಯಾರ್ಥಿಗಳು ಮನೆಗಳಲ್ಲಿ ಆನ್​ಲೈನ್​ ಪಾಠ, ಹೋಮ್​ವರ್ಕ್​ ಮಾಡಲು ಮೊಬೈಲ್​ ಬೇಕೆಂದು ಸುಳ್ಳು ಹೇಳಿ ತರಗತಿಗಳಿಂದ ದೂರ ಉಳಿಯುತ್ತಿದ್ದಾರೆ.

ಮೊಬೈಲ್​ ಗೀಳಿನಿಂದ ಓದುವ ಅಭಿರುಚಿ ದೂರ

ಇತ್ತೀಚೆಗೆ ಮಾಲೂರಿನಲ್ಲಿ ತರಗತಿಗಳಿಗೆ ಚಕ್ಕರ್​ ಹಾಕಿದ್ದ 15&20 ವಿದ್ಯಾರ್ಥಿಗಳು ಆಟದ ಮೈದಾನದಲ್ಲಿ ಮೊಬೈಲ್​ ವೀಕ್ಷಣೆಯಲ್ಲಿ ತಲ್ಲೀನರಾಗಿದ್ದರು. ಉಪನ್ಯಾಸಕರು ಸ್ಥಳಕ್ಕೆ ತೆರಳಿ ಬುದ್ಧಿಹೇಳಿ, ಮೊಬೈಲ್​, ಬ್ಯಾಗ್​ಗಳನ್ನು ಕಿತ್ತುಕೊಂಡು ಕಾಲೇಜಿಗೆ ಬಂದಿದ್ದಾರೆ. ಆಗ ವಿದ್ಯಾರ್ಥಿಗಳು ನೇರವಾಗಿ ಠಾಣೆಗೆ ತೆರಳಿ ಉಪನ್ಯಾಸಕರ ಮೇಲೆ ದೂರು ನೀಡಿದ್ದಾರೆ. ಕಡೆಗೆ ಪಿಯು ಇಲಾಖೆ ಮೇಲಧಿಕಾರಿಗಳು ಮಧ್ಯಪ್ರವೇಶಿಸಬೇಕಾಯಿತು. ಇಂತಹ ಘಟನೆಗಳು ಜಿಲ್ಲೆಯಾದ್ಯಂತ ನಿತ್ಯ ನೂತನ ಎನ್ನುವಂತಾಗಿದ್ದು, ಉಪನ್ಯಾಸಕರು ಬೇಸತ್ತು ಹೋಗಿದ್ದಾರೆ.

ಶೈಕ್ಷಣಿಕ ಪ್ರಗತಿಗೆ ಕ್ರಮ

ದ್ವೀತಿಯ ಪಿಯು ವಿದ್ಯಾರ್ಥಿಗಳಿಗೆ ನಿತ್ಯ ಬೆಳಗ್ಗೆ ಮತ್ತು ಸಂಜೆ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ. ಶೈಕ್ಷಣಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಅಧ್ಯಾಯದಂತೆ ಪರೀಕ್ಷೆ, ಪ್ರತಿ ಶನಿವಾರ ಸಿಇಟಿ ಕೋಚಿಂಗ್​, ಶೇ.20 ಆಯ್ಕೆ ಆಧಾರಿತ ಪ್ರಶ್ನೆಗಳ ಮನವರಿಕೆ, ಗುಂಪು ಅಧ್ಯಯನ, ಹಾಜರಾತಿ ಪರಿಶೀಲನೆ, ಕಾಲೇಜುಗಳಿಗೆ ಮೇಲಧಿಕಾರಿಗಳು, ಜಿಲ್ಲಾಧಿಕಾರಿ ಅನಿರೀಕ್ಷಿತ ಭೇಟಿ ಸೇರಿ ಹಲವು ವಿಧದಲ್ಲಿ ಶೈಕ್ಷಣಿಕ ಪ್ರಗತಿಗೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಕಾಲೇಜು ಶಿಕ್ಷಣ ಇಲಾಖೆ ಮೇಲಧಿಕಾರಿಗಳು ತಿಳಿಸುತ್ತಾರೆ.

ತರಗತಿಗಳಿಗೆ ಮೊಬೈಲ್​ ತರುವುದನ್ನು ನಿಷೇಧಿಸಲಾಗಿದೆ. ಕೆಲವು ವಿದ್ಯಾರ್ಥಿಗಳು ಮೊಬೈಲ್​ಗಳನ್ನು ತಂದು ಅಂಗಡಿ, ಮತ್ತಿತರ ಕಡೆ ಇಟ್ಟು ತರಗತಿ ಮುಗಿದ ಬಳಿಕ ಪಡೆದು ಮೊಬೈಲ್​ ಲೋಕದಲ್ಲಿ ವಿಹರಿಸುತ್ತಿದ್ದಾರೆ. ಕಾಲೇಜು ಅಟೆಂಡೆನ್ಸ್​ ಪರಿಶೀಲಿಸಿ ಹಾಸ್ಟೆಲ್​ಗಳಲ್ಲಿ ಊಟ ಕೊಡುವಂತಿರಬೇಕು. ಮನೆಗಳಲ್ಲಿ ಪಾಲಕರು ಮೊಬೈಲ್​ ಕೊಡಿಸಬಾರದು. ಉಪನ್ಯಾಸಕರು ಮೊಬೈಲ್​ಗೆ ಹೋಂವರ್ಕ್​ ಕಳುಹಿಸಬಾರದೆಂದು ಸೂಚಿಸಲಾಗಿದೆ.

|ರಾಮಚಂದ್ರಪ್ಪ  ಪಿಯು ಉಪನಿರ್ದೇಶಕ, ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net