

ಶಿವಮೊಗ್ಗ: ಕೃಷಿ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ರಾಯಭಾರಿಗಳು ಎಂದು ಇರುವಕ್ಕಿ ಕೃಷಿ ಮತ್ತು ತೋಟಗಾರಿಕೆ ವಿವಿ ಕುಲಪತಿ ಡಾ. ಆರ್.ಸಿ ಜಗದೀಶ್ ಹೇಳಿದರು.
ಶಿಕಾರಿಪುರ ತಾಲೂಕಿನ ಹೊಸಗೊದ್ದನಕೊಪ್ಪ ಗ್ರಾಮದಲ್ಲಿ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳ ಗ್ರಾಮೀಣ ಕಾರ್ಯಾನುಭವ ಕಾರ್ಯಕ್ರಮದಲ್ಲಿ ಮಾಹಿತಿ ಕೇಂದ್ರ ಮತ್ತು ಬೆಳೆ ಸಂಗ್ರಹಾಲಯ ಉದ್ಘಾಟಿಸಿ ಮಾತನಾಡಿ, ರೈತರೊಡನೆ ಬೆರೆತು ಅವರಿಗೆ ಅಗತ್ಯವಿರುವ ಮಾಹಿತಿ ನೀಡುವಲ್ಲಿ ವಿದ್ಯಾರ್ಥಿಗಳ ಪಾತ್ರ ಮುಖ್ಯ ಎಂದು ತಿಳಿಸಿದರು.
ವಿದ್ಯಾರ್ಥಿಗಳು ತಯಾರಿಸಿದ್ದ ಹಸಿರು ಮನೆ, ಜಲಾನಯನ, ಸಮಗ್ರ ಕೃಷಿ ಪದ್ಧತಿ ಮತ್ತು ಇತರ ಕೃಷಿ ಮಾದರಿಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು. ಸಸ್ಯ ಆರೋಗ್ಯ ಕೇಂದ್ರದಲ್ಲಿ ಗ್ರಾಮದ ಮುಖ್ಯ ಬೆಳೆಗಳಾದ ಅಡಕೆ, ಭತ್ತ ಜೋಳ ಮತ್ತು ಕಾಳುಮೆಣಸಿಗೆ ಬರುವ ರೋಗ ಮತ್ತು ಕೀಟಗಳ ಬಗ್ಗೆ ಚಿತ್ರಗಳ ಮೂಲಕ ವಿವರಿಸಿದ್ದರು. ನಂತರ ಮಾಹಿತಿ ಕೇಂದ್ರದಿಂದ ಬೆಳೆ ಸಂಗ್ರಹಾಲಯಕ್ಕೆ ಮೆರವಣಿಗೆ ಮಾಡಿದರು.
ಮೆರವಣಿಗೆಯಲ್ಲಿ ಕೇಂದ್ರ ಬಿಂದುವಾಗಿ ವೀರಭದ್ರ, ಕಾಲಭೈರವ, ಹೊಸಗೊದ್ದಲಕೊಪ್ಪದ ಡಾನ್, ಹೋರಿಗಳಾದ ಎನ್‌ಟಿಸಿ ಸಾಹುಕಾರ, ಕಲ್ಮನೆ ಕೊಲೆಗಾರ,ಅಘೋರ, ಶಿಕಾರಿಪುರದ ಚಾಣಕ್ಯ ಮತ್ತಿತರ ಹೋರಿಗಳನ್ನು ಕರೆತರಲಾಗಿತ್ತು. ಹೋರಿಗಳ ಹಿಂದೆ ಡೊಳ್ಳು ಕುಣಿತದ ನೃತ್ಯಗಾರರು, ಕಳಸ ಹೊತ್ತ ಮಹಿಳೆಯರು ಮತ್ತು ಛದ್ಮ ವೇಷ ಧರಿಸಿದ್ದ ಮಕ್ಕಳು ಸಾಗಿದರು.
9 ಗುಂಟೆ ಜಾಗದಲ್ಲಿ 70 ರೀತಿ ಬೆಳೆ ಬೆಳೆದಿದ್ದು, ರೈತರು ಬೆಳೆ ಸಂಗ್ರಹಾಲಯ ವೀಕ್ಷಿಸಿ ಮೇವು ಬೆಳೆಗಳು, ವಿದೇಶಿ ಬೆಳೆಗಳು ಮತ್ತು ಸಮಗ್ರ ಕೃಷಿ ಪದ್ಧತಿ ಬಗ್ಗೆ ಮಾಹಿತಿ ಪಡೆದರು. ಸಂಶೋಧನಾ ನಿರ್ದೇಶಕ ಡಾ. ದುಷ್ಯಂತ್‌ಕುಮಾರ್, ವಿಶೇಷಾಧಿಕಾರಿ ಡಾ. ಕೆ.ಸಿ.ಶಶಿಧರ್ ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.