

ಶಿವಮೊಗ್ಗ: ವಿದ್ಯಾರ್ಥಿಗಳು ದಕ್ಷತೆಯಿಂದ ಕಲಿಕೆ, ಜ್ಞಾನ ಸಂಪಾದನೆಯಲ್ಲಿ ತೊಡಗಿ ಪಾಲಕರ ಶ್ರಮ, ನಿರೀಕ್ಷೆಗಳಿಗೆ ನ್ಯಾಯ ಒದಗಿಸಿಗಬೇಕೆಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಸಚಿವ ಎಸ್.ಎನ್.ರುದ್ರೇಶ್ ಹೇಳಿದರು.
ಕುವೆಂಪು ವಿವಿ ಪಠ್ಯೇತರ ಚಟುವಟಿಕೆ ವಿಭಾಗದಿಂದ ಸೋಮವಾರ ಏರ್ಪಡಿಸಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಹಾಗೂ ಅಂತರ ವಿಭಾಗಗಳ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮ ಸಹ್ಯಾದ್ರಿ ಸಿರಿಗಂಧ ಉದ್ಘಾಟಿಸಿ ಮಾತನಾಡಿದರು.
ಸೆಮಿಸ್ಟರ್ ಪದ್ಧತಿಯಿಂದಾಗಿ ತರಗತಿ, ಕಲಿಕೆಯಲ್ಲಿ ಸಾಕಷ್ಟು ವ್ಯತ್ಯಯವಾಗುತ್ತಿದೆ. ಪಠ್ಯದ ಆಚೆಗೂ ಹೆಚ್ಚು ಓದಬೇಕು. ಇಲ್ಲವಾದರೆ ಜ್ಞಾನ ವ್ಯರ್ಥವಾಗುತ್ತದೆ. ವಿದ್ಯಾರ್ಥಿಗಳಿಗೆ ಕುವೆಂಪು ಅವರ ಬರಹಗಳಿಂದ ಆರಂಭಿಸಿ ಇಂದಿನ ಹಲವು ಸಂಪನ್ಮೂಲ ವ್ಯಕ್ತಿಗಳ ಮೂಲಕ ಶಿಕ್ಷಣದ ಮೌಲ್ಯಗಳು ದೊರೆಯುತ್ತಿವೆ ಎಂದರು.
ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಮಾತನಾಡಿ, ಹೊಸ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಕೇವಲ ಬೋಧನೆ ಕೇಳುವವರಾಗಿ ಉಳಿದಿಲ್ಲ. ಗ್ರಂಥಾಲಯ, ಆನ್‌ಲೈನ್ ಪುಸ್ತಕಗಳ ಮೂಲಕ ಪಠ್ಯಗಳನ್ನು ಓದಿಕೊಂಡು ತರಗತಿಗೆ ಬರಬೇಕು. ಪ್ರಶ್ನಾ ಮನೋಭಾವ ಹೆಚ್ಚಿಸಿಕೊಳ್ಳಬೇಕು. ಶಿಕ್ಷಕರು ಕಲಿಸುತ್ತ, ಕಲಿಯುತ್ತ ಬೆಳೆಯಬೇಕು, ವಿದ್ಯಾರ್ಥಿಗಳನ್ನು ಬೆಳೆಸಬೇಕು ಎಂದು ಹೇಳಿದರು.
ವಿಶ್ವದ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ವಿವಿಯ ಗಣಿತಶಾಸ್ತ್ರ ಪ್ರಾಧ್ಯಾಪಕ ಪ್ರೊ. ಬಿ.ಜೆ.ಗಿರೀಶ್ ಮತ್ತು ಔದ್ಯೋಗಿಕ ರಸಾಯನಶಾಸ್ತ್ರ ಪ್ರಾಧ್ಯಾಪಕ ಪ್ರೊ. ಬಿ.ಇ.ಕುಮಾರಸ್ವಾಮಿ ಅವರನ್ನು ಸನ್ಮಾನಿಸಲಾಯಿತು.
ಕುಲಸಚಿವ ಎ.ಎಲ್.ಮಂಜುನಾಥ್, ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್.ಎಂ.ಗೋಪಿನಾಥ್, ಹಣಕಾಸು ಅಧಿಕಾರಿ ಎಚ್.ಎನ್.ರಮೇಶ್, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ. ಪ್ರಶಾಂತ್ ನಾಯಕ್, ಪಠ್ಯೇತರ ಚಟುವಟಿಕೆ ವಿಭಾಗದ ಸಂಚಾಲಕ ಡಾ. ನೆಲ್ಲಿಕಟ್ಟೆ ಸಿದ್ದೇಶ್ ಇದ್ದರು.