

ಬೆಂಗಳೂರು: ಆನ್‌ಲೈನ್ ಲೈನ್ ಗೇಮಿಂಗ್ ಚಟಕ್ಕೆ ಬಿದ್ದಿದ್ದ ವಿದ್ಯಾರ್ಥಿನಿಯೊಬ್ಬಳು ಪಾಲಕರು ನೀಡಿದ್ದ ಕಾಲೇಜು ಶುಲ್ಕವನ್ನು ಜೂಜಾಟವಾಡಿ ಕಳೆದುಕೊಂಡು ಆ ಹಣ ಹೊಂದಿಸಲು ಸಾಧ್ಯವಾಗದೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆತಂಕಕಾರಿಯಾದ ಘಟನೆ ನಡೆದಿದೆ.
ಕೋಲಾರ ಶ್ರೀನಿವಾಸಪುರದ ಪಾವನ(೧೯) ಆತ್ಮಹತ್ಯೆಗೆ ಶರಣಾದವರು. ವಿವಿ ಹಾಸ್ಟೆಲ್‌ನಲ್ಲಿ ರಾತ್ರಿ ಸುಮಾರು ೧೧ ಗಂಟೆಗೆ ಈ ಘಟನೆ ನಡೆದಿದೆ. ಈ ಸಂಬಂಧ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾವನ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದಲ್ಲಿ ಬಿಎಸ್‌ಸಿ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಮೂರು ದಿನ ರಜೆ ಇದ್ದ ಹಿನ್ನೆಲೆಯಲ್ಲಿ ಹಾಸ್ಟೆಲ್‌ನಲ್ಲಿ ಸಹ ಪಾಠಿಗಳು ತಮ್ಮ ಊರುಗಳಿಗೆ ತೆರಳಿದ್ದು, ವಿವಿ ಹಾಸ್ಟೆಲ್‌ನಲ್ಲಿ ಭಾನುವಾರ ರಾತ್ರಿ ಒಬ್ಬಳೇ ಇದ್ದ ಪಾವನ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭದಲ್ಲಿ ಕುರ್ಚಿ ಕೆಳಗಡೆ ಬಿದ್ದು ಜೋರಾದ ಶಬ್ಧವಾಗಿದ್ದು, ಶಬ್ಧ ಕೇಳಿ ಓಡಿ ಬಂದ ಪಕ್ಕದ ರೂಮ್‌ನ ಸಹಪಾಠಿಗಳಿಗೆ ಪಾವನಿ ವೇಲಿನಿಂದ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಕೂಡಲೇ ಅವರು ಹೈಗ್ರೌಂಡ್ಸ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿ ಬಂದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು, ಪಾಲಕರಿಗೆ ಮಾಹಿತಿ ನೀಡಿ ತನಿಖೆ ಕೈಗೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಡೆತ್‌ನೋಟ್ ಪತ್ತೆಯಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಪಾಲಕರಿಗೆ ಮೃತದೇವನ್ನು ಹಸ್ತಾಂತರ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆನ್‌ಲೈನ್ ಗ್ಲಾಮ್ಲಿಂಗ್ ಬಲಿಯಾದ ವಿದ್ಯಾರ್ಥಿ:
ಮೃತ ಪಾವತಿ ಆನ್‌ಲೈನ್ ಲೈನ್ ಗೇಮಿಂಗ್ ಚಟಕ್ಕೆ ಬಿದ್ದಿದ್ದಳು. ಪಾಲಕರು ಕಾಲೇಜು ಶುಲ್ಕ ಪಾವತಿಸಲು ೧೫ ಸಾವಿರ ರೂ. ನೀಡಿದ್ದರು. ಅದನ್ನು ಪಾವನಿ ಆನ್‌ಲೈನ್ ಗೇಮಿಂಗ್ ಆಡಿ ಸಂಪೂರ್ಣ ಹಣ ಕಳೆದುಕೊಂಡಿದ್ದಳು. ಪಾಲಕರು ಹಣ ಎಲ್ಲಿ ಎಂದು ಕೇಳಿದರೆ ಏನೆಂದು ಉತ್ತರಿಸುವುದು ಅಂತಾ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಹಣ ಹೂಡಿಕೆ ಮಾಡಿರುವುದಾಗಿ ಉಲ್ಲೇಖ:
ಆನ್‌ಲೈನ್‌ನಲ್ಲಿ ಹಣ ಹೂಡಿಕೆ ಮಾಡಿ ನಷ್ಟಕ್ಕೆ ಒಳಗಾದ ಹಿನ್ನೆಲೆಯಲ್ಲಿ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವಿದ್ಯಾರ್ಥಿ ಡೆತ್‌ನೋಟ್‌ನಲ್ಲಿ ಉಲ್ಲೇಖ ಮಾಡಿದ್ದಾಳೆ. ಆದರೆ ತನಿಖೆ ವೇಳೆ ವಿದ್ಯಾರ್ಥಿ ಆನ್‌ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡಿರುವುದು ಕಂಡು ಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
೫ ಸಾವಿರ ಹೊಂದಿಸಲು ಸಾಧ್ಯವಾಗಿಲ್ಲ:
ಆನ್‌ಲೈನ್ ಗೇಮ್‌ನಲ್ಲಿ ೧೫ ಸಾವಿರ ಕಳೆದುಕೊಂಡಿದ್ದಳು ಎನ್ನಲಾಗಿದೆ. ಸಾಲ ಮಾಡಿ ಹೇಗೋ ೧೦ ಸಾವಿರ ರೂಪಾಯಿ ಹೊಂದಿಸಿದ್ದ ಪಾವನ, ಉಳಿದ ೫ ಸಾವಿರ ರೂಪಾಯಿ ಹೊಂದಿಸಲು ಆಗದೆ ಚಿಂತೆಗೆ ಒಳಗಾಗಿದ್ದಳು. ಪಾಲಕರು ಹಣ ಎಲ್ಲಿ ಎಂದು ಕೇಳಿದರೆ ಏನು ಹೇಳಬೇಕು ಎಂದು ತಿಳಿಯದೇ ಆತಂಕದಿಂದ ಮರಣ ಪತ್ರ ಬರೆದಿಟ್ಟು ನೇಣಿಗೆ ಶರಣಾಗಿದ್ದಾಳೆ ಎಂದು ತಿಳಿದು ಬಂದಿದೆ.